ಮಂಗಳೂರು ಪೊಲೀಸ್ ಕಮಿಷನರ್ ವರ್ಗಾವಣೆಗೆ ಒತ್ತಾಯಿಸಿ ಪ್ರತಿಭಟನೆ

Update: 2024-11-28 17:58 GMT

ಮಂಗಳೂರು: ಜನಪರ ಪ್ರತಿಭಟನೆಗಳನ್ನು ನಿರಾಕರಿಸಿ ಪ್ರಜಾಪ್ರಭುತ್ವದ ಹಕ್ಕುಗಳನ್ನು ದಮನಿಸುತ್ತಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್‌ ರನ್ನು ವರ್ಗಾವಣೆಗೊಳಿಸಬೇಕು ಎಂದು ಆಗ್ರಹಿಸಿ ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಗುರುವಾರ ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ಪ್ರತಿಭಟನೆ ನಡೆಯಿತು.

ಹದಗೆಟ್ಟ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅವರ ವಿರುದ್ಧ ದಾಖಲಿಸಿದ ಪ್ರಕರಣವನ್ನು ಕೈ ಬಿಡಬೇಕು ಮತ್ತು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್‌ ಅವರನ್ನು ವರ್ಗಾವಣೆಗೊಳಿಸಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು. ಅಲ್ಲದೆ ಪೊಲೀಸ್ ಆಯುಕ್ತರು ಮತ್ತು ರಾಜ್ಯ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನೆಕಾರರು, ಪೊಲೀಸರು ಸಂಘಿಗಳಂತೆ ವರ್ತಿಸಬಾರದು, ಕೇಸುಗಳ ಮೇಲೆ ಕೇಸು ಹಾಕಿದರೂ ನಾವು ಹೆದರುವುದಿಲ್ಲ, ತಾಕತ್ತಿದ್ದರೆ ನಮ್ಮನ್ನು ಬಂಧಿಸಿ ಎಂದು ಸವಾಲು ಹಾಕಿದರು.

ಪೊಲೀಸ್ ಆಯುಕ್ತರ ವಿರುದ್ಧ ಘೋಷಣೆ ಕೂಗುತ್ತಲೇ ರಸ್ತೆ ತಡೆ ನಡೆಸಲು ಮುಂದಾದ ಡಿವೈಎಫ್‌ಐ ಮುಖಂಡರಾದ ಬಿ.ಕೆ. ಇಮ್ತಿಯಾಝ್, ಸಂತೋಷ್ ಬಜಾಲ್, ನಿತಿನ್ ಕುತ್ತಾರ್, ರಫೀಕ್ ಹರೇಕಳ, ಅಶ್ರಫ್ ಹರೇಕಳ, ಇಬ್ರಾಹೀಂ ಮದಕ, ಮನೋಜ್ ವಾಮಂಜೂರು, ತಯ್ಯೂಬ್ ಬೆಂಗರೆ, ನೌಶಾದ್ ಬೆಂಗರೆ, ಮಹಾಬಲ ದೆಪ್ಪಲಿಮಾರ್, ರಝಾಕ್ ಮುಡಿಪು, ಶ್ರೀನಾಥ್ ಕುಲಾಲ್, ಪ್ರಮೀಳಾ ಶಕ್ತಿನಗರ, ಪ್ರವೀಳಾ ದೇವಾಡಿಗ, ಅಸುಂತ ಡಿಸೋಜ, ಭಾರತಿ ಬೋಳಾರ, ಮಾಧುರಿ ಬೋಳಾರ, ಯೋಗಿತಾ ಸುವರ್ಣ, ಮತ್ತಿತರರ ಸಹಿತ ಹಲವರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ಬಳಿಕ ಬಿಡುಗಡೆಗೊಳಿಸಿದರು.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಪೊಲೀಸ್ ಕಮಿಷನರ್ ಮೇಲೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ದ.ಕ.ಜಿಲ್ಲೆಗೆ ಆಗಮಿಸುವ ಮುಖ್ಯಮಂತ್ರಿಗೆ ಕಪ್ಪುಬಾವುಟ ಪ್ರದರ್ಶನ ಮಾಡಲಾಗು ವುದು ಎಂದು ಎಚ್ಚರಿಸಿದರು.

ಸರಣಿ ಹೋರಾಟ, ಗೃಹ ಸಚಿವ, ಮುಖ್ಯಮಂತ್ರಿಗಳ ಭೇಟಿಗೆ ಸಿಪಿಎಂ ನಿರ್ಧಾರ

ಮಂಗಳೂರು : ಪ್ರತಿಭಟನೆ, ಧರಣಿಗಳಿಗೆ ಅವಕಾಶ ನಿರಾಕರಿಸುವ, ಪ್ರತಿಭಟನಾಕಾರರ ಮೇಲೆ ಸರಣಿ ಮೊಕದ್ದಮೆ ಹೂಡುತ್ತಿರುವ ಸರ್ವಾಧಿಕಾರಿ ಧೋರಣೆಯ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್‌ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಮತ್ತು ಮಂಗಳೂರು ನಗರ ಕಮಿಷನರ್‌ರನ್ನು ವರ್ಗಾಯಿಸಲು ಒತ್ತಾಯಿಸಿ ಹೋರಾಟ ತೀವ್ರಗೊಳಿಸಲು ಹಾಗೂ ಸರಣಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ಸಿಪಿಎಂ ದ.ಕ.ಜಿಲ್ಲಾ ಸಮಿತಿ ತೀರ್ಮಾನಿಸಿದೆ.

ಕಮಿಷನರ್ ಅನುಮಪ್ ಅಗರ್ವಾಲ್‌ ಹಾಗೂ ಡಿಸಿಪಿ ಸಿದ್ಧಾರ್ಥ ಗೋಯಲ್ ನಡೆಯು ಪೊಲೀಸ್ ಇಲಾಖೆಯ ಗೌರವಕ್ಕೆ ತಕ್ಕುದಾಗಿಲ್ಲ. ಜನಸಾಮಾನ್ಯರು, ದುರ್ಬಲ ವಿಭಾಗಗಳು ಹಕ್ಕುಗಳಿಗಾಗಿ ಧ್ವನಿ ಎತ್ತಲಾಗದ ಸ್ಥಿತಿ ಮಂಗಳೂರಿನಲ್ಲಿ ನಿರ್ಮಾಣ ಗೊಂಡಿದೆ. ಕಾಂಗ್ರೆಸ್ ಆಡಳಿತದಲ್ಲಿ ಬಿಜೆಪಿ ನೀತಿಗಳನ್ನು ಜಾರಿಗೊಳಿಸುವ ಯತ್ನ ಬಹಿರಂಗವಾಗಿಯೇ ಪೊಲೀಸ್ ಕಮಿಷನರ್ ನಡೆಸುತ್ತಿದ್ದಾರೆ. ಪ್ಯಾಲೆಸ್ತೀನ್ ಹಿಂಸಾಚಾರ ಖಂಡಿಸಿ, ರಾಷ್ಟ್ರೀಯ ಹೆದ್ದಾರಿ ದುರಸ್ಥಿಗೆ ಆಗ್ರಹಿಸಿ ನಡೆಸಿದ ಧರಣಿಗಳ ಸಂದರ್ಭ ಕಮಿಷನರ್ ನಡೆದುಕೊಂಡ ರೀತಿಯಿಂದ ಇದು ಬಹಿರಂಗಗೊಂಡಿದೆ. ಜನಸಾಮಾನ್ಯರ ದುಡಿಮೆ, ಸಂಪಾದನೆಯನ್ನು ಕಸಿದುಕೊಳ್ಳುತ್ತಿರುವ ಜೂಜು, ಮಟ್ಕಾ ಹಾವಳಿಯಿಂದ ಮಂಗಳೂರು ನಗರ ತತ್ತರಿಸಿದೆ. ಕಮಿಷನರ್ ಮಂಗಳೂರಿನಿಂದ ನಿರ್ಗಮಿಸದಿದ್ದಲ್ಲಿ ನೆಮ್ಮದಿ ಸಾಧ್ಯ ವಿಲ್ಲ ಎಂದು ಸಿಪಿಎಂ ಹೇಳಿಕೆಯಲ್ಲಿ ತಿಳಿಸಿದೆ.

ಆ ಹಿನ್ನಲೆಯಲ್ಲಿ ಕಮಿಷನರ್ ಅನುಪಮ್ ಅಗರ್ವಾಲ್‌ ವರ್ಗಾವಣೆಗೆ ಒತ್ತಾಯಿಸಿ ಸರಣಿ ಪ್ರತಿಭಟನೆಗಳನ್ನು ಹಮ್ಮಿ ಕೊಳ್ಳಲು ಸಿಪಿಎಂ ದ.ಕ. ಜಿಲ್ಲಾ ಸಮಿತಿ ತೀರ್ಮಾನಿಸಿದೆ. ಅದರಂತೆ ಜಿಲ್ಲೆಯ ಎಲ್ಲಾ ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ಸಿಪಿಎಂ ಘಟಕಗಳಿಗೆ ಕರೆ ನೀಡಿದೆ. ಜಿಲ್ಲೆಗೆ ಆಗಮಿಸುತ್ತಿರುವ ಗೃಹ ಸಚಿವರು, ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಕಮಿಷನರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಲು ನಿರ್ಧರಿಸಲಾಗಿದೆ. ಜಿಲ್ಲೆಯ ಜನಪರ, ಸಮಾನ ಮನಸ್ಕ ಸಂಘಟನೆಗಳು, ಎಡಪಕ್ಷಗಳ ಜಂಟಿ ಸಭೆಯನ್ನು ಆಯೋಜಿಸುವುದು, ಕಮಿಷನರ್ ವರ್ಗಾವಣೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಿಪಿಎಂ ದ.ಕ. ಜಿಲ್ಲಾ ಸಮಿತಿಯು ಪ್ರಕಟನೆಯಲ್ಲಿ ತಿಳಿಸಿದೆ.

ಸ್ಪೀಕರ್ ಹೇಳಿಕೆ ವಿಷಾದನೀಯ

ಪ್ರತಿಭಟನೆಗಳಿಗೆ ಅವಕಾಶ ನಿರಾಕರಿಸುವ, ಸುಳ್ಳು ಮೊಕದ್ದಮೆ ಹೂಡುವ ಪೊಲೀಸ್ ಕಮಿಷನರ್‌ರ ಕಾರ್ಯವೈಖರಿಯನ್ನು ಸ್ಪೀಕರ್ ಯುಟಿ ಖಾದರ್ ಸಮರ್ಥಿಸಿರುವುದು ವಿಷಾದನೀಯ ಎಂದು ಸಿಪಿಎಂ ಹೇಳಿದೆ. ಸ್ಪೀಕರ್ ಹುದ್ದೆ ಸಾಂವಿಧಾನಿಕ ವಾಗಿದೆ. ಅದು ಸರಕಾರದ ಭಾಗವಲ್ಲ. ಸ್ಪೀಕರ್ ಆದವರು ನಿಷ್ಪಕ್ಷಪಾತವಾಗಿರಬೇಕು. ರಾಜಕಾರಣ, ಆಡಳಿತಾತ್ಮಕ ವಿಷಯಗಳು ಅವರ ವ್ಯಾಪ್ತಿಗೆ ಬರುವುದಿಲ್ಲ. ವ್ಯಾಪ್ತಿ ಮೀರಿ ಮಾತಾಡುವುದು, ಪೊಲೀಸ್ ಅತಿರೇಕಗಳನ್ನು ಸಮರ್ಥಿಸು ವುದು ಸ್ಪೀಕರ್ ಸ್ಥಾನದಲ್ಲಿ ಕೂತವರಿಗೆ ಶೋಭೆ ತರುವುದಿಲ್ಲ ಎಂದು ಸಿಪಿಎಂ ತಿಳಿಸಿದೆ.








Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News