ವಿಧಾನಸೌಧದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪುಸ್ತಕ-ಸಾಹಿತ್ಯ ಹಬ್ಬ: ಸ್ಪೀಕರ್ ಖಾದರ್
ದೇರಳಕಟ್ಟೆ: ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮತ್ತು ಓದುವ ಅಭಿರುಚಿ ಹುಟ್ಟಿಸುವ ಸಲುವಾಗಿ ರಾಜ್ಯ ವಿಧಾನ ಸೌಧದ ಆವರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪುಸ್ತಕ ಮತ್ತು ಸಾಹಿತ್ಯ ಹಬ್ಬ ಆಯೋಜಿಸುವ ಉದ್ದೇಶವಿದೆ ಎಂದು ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ದೇರಳಕಟ್ಟೆಯ ವಿದ್ಯಾರತ್ನ ಸ್ಕೂಲ್‌ನಲ್ಲಿ ಮಂಗಳವಾರ ನಡೆದ ಬ್ಯಾರಿ ಎಲ್ತ್‌ಕಾರ್-ಕಲಾವಿದಮಾರೊ ಕೂಟ (ಮೇಲ್ತೆನೆ) ಪ್ರಕಟಿಸಿದ, ಕವಿ ಆಲಿಕುಂಞಿ ಪಾರೆ ರಚಿಸಿದ 'ಬಾಪ ನಟ್ಟೊ ಮರ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರಕಾರಿ ಶಾಲೆ, ಕಾಲೇಜುಗಳ ಗ್ರಂಥಾಲಯಕ್ಕೆ ಪುಸ್ತಕಗಳನ್ನು ವಿತರಿಸುವ ಸಲುವಾಗಿ ರಾಜ್ಯದ ಪ್ರತಿಯೊಬ್ಬ ಶಾಸಕರಿಗೂ ಅನುದಾನ ಮೀಸಲಿಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದ ಯು.ಟಿ.ಖಾದರ್, ಹೆತ್ತವರು ತಮ್ಮ ಮಕ್ಕಳನ್ನು ಗ್ರಂಥಾಲಯಕ್ಕೆ ಕರೆದುಕೊಂಡು ಹೋಗುವ ಪರಿಪಾಠ ಬೆಳಸಬೇಕು ಎಂದು ಕರೆ ನೀಡಿದರು.
ಸೈಯದ್ ಮುಕ್ತಾರ್ ತಂಙಳ್ ಕುಂಬೋಳ್ ಪುಸ್ತಕ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಸಾಹಿತ್ಯವು ಮಾನವ ಬದುಕಿನ ಅವಿಭಾಜ್ಯ ಅಂಗವಾಗಿದೆ. ಒಳ್ಳೆಯ ಸಾಹಿತ್ಯಕ್ಕೆ ಓದುಗರ ಕೊರತೆಯಿರುವುದಿಲ್ಲ. ಆಲಿಕುಂಞಿ ಪಾರೆ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಮೇಲ್ತೆನೆಯ ಅಧ್ಯಕ್ಷ ವಿ. ಇಬ್ರಾಹೀಂ ನಡುಪದವು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿ.ಎ. ಮುಹಮ್ಮದಲಿ ಕಮ್ಮರಡಿ ಪುಸ್ತಕ ಪರಿಚಯಿಸಿದರು. ಬ್ಯಾರಿ ಅಧ್ಯಯನ ಪೀಠದ ಸಂಚಾಲಕ ಡಾ. ಅಬೂಬಕರ್ ಸಿದ್ದೀಕ್, ಅಬುಧಾಬಿಯ ಬಿಡಬ್ಲ್ಯುಎಫ್ ಅಧ್ಯಕ್ಷ ಮುಹಮ್ಮದಲಿ ಉಚ್ಚಿಲ್, ವಿದ್ಯಾರತ್ನ ಸ್ಕೂಲ್‌ನ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿದರು. ವೇದಿಕೆಯಲ್ಲಿ ಪಾರೆ ಕುಟುಂಬದ ಹಿರಿಯ ಸದಸ್ಯ ಅಬೂಸ್ವಾಲಿಹ್ ಪಾರೆ, ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಉಪಸ್ಥಿತರಿದ್ದರು.
ಮದನಿ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಇಸ್ಮಾಯೀಲ್ ಟಿ. ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಬಶೀರ್ ಅಹ್ಮದ್ ಕಿನ್ಯ, ಹುಸೈನ್ ಕಾಟಿಪಳ್ಳ, ಶಮೀಮ್ ಕುಟ್ಟಿಕ್ಕಳ, ಅಶೀರುದ್ದೀನ್ ಸಾರ್ತಬೈಲ್ ಕವನ ವಾಚಿಸಿದರು.
ಮೇಲ್ತೆನೆಯ ಪದಾಧಿಕಾರಿಗಳಾದ ಮುಹಮ್ಮದ್ ಬಾಷಾ ನಾಟೆಕಲ್, ಅಶ್ರಫ್ ದೇರಳಕಟ್ಟೆ, ಸಿದ್ದೀಕ್ ಎಸ್. ರಾಝ್, ಬಿ.ಎಂ. ಮುತ್ತಲಿಬ್, ಆಸೀಫ್ ಬಬ್ಬುಕಟ್ಟೆ, ರಿಯಾಝ್ ಮಂಗಳೂರ, ಇಬ್ರಾಹೀಂ ಮುದುಂಗಾರುಕಟ್ಟೆ, ಹೈದರ್ ಆಲಡ್ಕ, ಶರೀಫ್ ಪಟ್ಟೋರಿ, ಅಬೂಬಕರ್ ಎಚ್.ಕಲ್., ಲೇಖಕಿ ರಮೀಝಾ ಕುಕ್ಕಾಜೆ, ಪ್ರಮುಖರಾದ ಫಾರೂಕ್ ಉಳ್ಳಾಲ್, ಖಾಲಿದ್ ತಣ್ಣೀರುಬಾವಿ, ಖಾಲಿದ್ ಉಳ್ಳಾಲ್, ಅಬ್ಬಾಸ್ ಉಚ್ಚಿಲ್, ಕೆಎಂಕೆ ಮಂಜನಾಡಿ, ಕಬೀರ್ ದೇರಳಕಟ್ಟೆ, ಅಝೀಝ್ ಆಲಡ್ಕ, ಸಮದ್ ಕಿನ್ಯ, ಹಮೀದ್ ಕಿನ್ಯ, ಇಬ್ರಾಹೀಂ ಪಾರೆ, ಅಬೂಸಾಲಿಹ್ ಹಾಜಿ ಕುರಿಯಕ್ಕಾರ್, ಅಬ್ದುಲ್ಲಾ ಪಾರೆ, ರಝಾಕ್ ಪಾರೆ, ಮಜೀದ್ ಪಾರೆ, ಮುಹಮ್ಮದ್ ಕುರಿಯ, ಶರೀಫ್ ಮುಲ್ಕಿ, ಹೈದರ್ ಮಠ ಮತ್ತಿತರರು ಉಪಸ್ಥಿತರಿದ್ದರು.
ಮೇಲ್ತೆನೆಯ ಮಾಜಿ ಅಧ್ಯಕ್ಷ ಮನ್ಸೂರ್ ಅಹ್ಮದ್ ಸಾಮಣಿಗೆ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್ ಕಾರ್ಯಕ್ರಮ ನಿರೂಪಿಸಿದರು.