ಡ್ರಗ್ಸ್ ಹಾವಳಿಯಿಂದ ಜನರು ವಿಮುಕ್ತರಾಗಬೇಕು: ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

Update: 2023-08-15 08:33 GMT

ಮಂಗಳೂರು: ಆಗಸ್ಟ್ 15 ರ ಒಳಗೆ ಡ್ರಗ್ಸ್ ಮುಕ್ತ ಮಂಗಳೂರು ಮಾಡುವ ನಿಟ್ಟಿನಲ್ಲಿ ಮಂಗಳೂರು ಪೊಲೀಸರಿಗೆ ಸ್ಪಷ್ಟ ಸೂಚನೆಯನ್ನು ನೀಡಲಾಗಿತ್ತು. ಈ ನಿಟ್ಟಿನಲ್ಲಿ ಮಂಗಳೂರು ಪೊಲೀಸರು ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಲವಾರು ಜನರನ್ನು ಬಂಧಿಸಿ ಪ್ರಕರಣಗಳನ್ನು ದಾಖಲಿಸಲಾಗಿದೆ. ವಿದ್ಯಾರ್ಥಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಪೊಲೀಸರು ಹಮ್ಮಿಕೊಂಡಿದ್ದಾರೆ ಎಂದರು.

ಕಳೆದ ಎರಡು ತಿಂಗಳಲ್ಲಿ ಹಲವಾರು ಡ್ರಗ್ಸ್ ಪೆಡ್ಲರ್ ಗಳನ್ನು ಪೊಲೀಸರು ಬಂಧಿದ್ದಾರೆ. ಡ್ರಗ್ಸ್ ಸಪ್ಲೈ ಮತ್ತು ಡಿಮಾಂಡ್ ಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಖಲಾಗಿದೆ. ಡ್ರಗ್ಸ್ ಹಾವಳಿಯಿಂದ ವಿದ್ಯಾರ್ಥಿಗಳು, ಜನರು ವಿಮುಕ್ತರಾಗಬೇಕು ಎಂಬುದೇ ನಮ್ಮ ಉದ್ದೇಶ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಅನೈತಿಕ ಪೊಲೀಸ್ ಗಿರಿ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿ ಕ್ರಮ ಕೈಗೊಳ್ಳಲಾಗಿದೆ. ಹಿಂಸಾತ್ಮಕ ರೀತಿಯಲ್ಲಿ ಕಾನೂನುಬಾಹಿರವಾಗಿ ನಡೆದುಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಆಗಿದೆ. ಕಾನೂನು ಪ್ರಕಾರವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ ಭಯ, ಭೀತಿಯ ವಾತಾವರಣ ಸೃಷ್ಟಿಯಾಗಲು ಬಿಡುವುದಿಲ್ಲ .ಯಾರಿಗೂ ಕಾನೂನನ್ನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ. ಸುಳ್ಳು ಮಾಹಿತಿಗಳಿಂದ ಅಪಪ್ರಚಾರದಿಂದ ವಾತಾವರಣ ಕೆಡಿಸಬಾರದು ಎಂದು ಅವರು ಹೇಳಿದರು.

ಪ್ರೋಟೋಕಾಲ್ ವಿಚಾರದಲ್ಲಿ ಶಾಸಕರಲ್ಲಿ ಸೃಷ್ಟಿಯಾಗಿದ್ದ ಗೊಂದಲವನ್ನ ನಿವಾರಿಸಲಾಗಿದೆ. ಯಾರ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನಗಳು ಮಾಡಲಾಗುತ್ತಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ. ಯಾವುದೇ ಕಾರ್ಯಕ್ರಮವಾದರೂ ಜಿಲ್ಲಾಮಟ್ಟದಲ್ಲಿರುವ ಸಮಿತಿ ನೀಡುವ ನಿರ್ದೇಶನದಂತೆ ಕಾರ್ಯಕ್ರಮದ ನಡೆಯಬೇಕು. ಜಿಲ್ಲಾಧಿಕಾರಿಯವರು ಈಗಾಗಲೇ ಸ್ಪಷ್ಟ ಸೂಚನೆಯನ್ನು ನೀಡಿದ್ದಾರೆ ಎಂದು ಹೇಳಿದರು.

ಪಕ್ಷದ ನಾಯಕರೊಬ್ಬರು ಜಿಲ್ಲಾಧಿಕಾರಿಗೆ ಪತ್ರ ಬರೆದು ಅಧಿಕಾರಿ ವರ್ಗಾವಣೆಗೆ ಕೋರಿರುವ ವಿಷಯದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾರು ಬೇಕಾದರೂ ಜಿಲ್ಲಾಧಿಕಾರಿಯವರಿಗೆ ರೆಕಮಂಡೇಶನ್ ಲೆಟರ್ ಕೊಡಬಹುದು. ಯಾವುದು ಸರಿ. ಯಾವುದು ತಪ್ಪು ಎಂದು ನಿರ್ಧರಿಸಿ ಕೆಲಸ ಮಾಡುವುದು ಮುಖ್ಯ. ಮುಂದೆ ಯಾವುದೇ ಗೊಂದಲ ಸೃಷ್ಟಿಯಾಗಬಾರದು ಎಂದು ತಿಳಿಸಿದ್ದೇನೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News