ಪಣಂಬೂರು: ಮದ್ಯದ ಅಮಲಿನಲ್ಲಿ ಸಹೋದ್ಯೋಗಿಗೆ ಚೂರಿ ಇರಿದು ಹತ್ಯೆ

Update: 2023-12-10 09:03 GMT

ಪಣಂಬೂರು: ಮದ್ಯದ ಅಮಲಿನಲ್ಲಿ ಸಹೋದ್ಯೋಗಿಗೆ ಚೂರಿಯಿಂದ ಇರಿದು ಕೊಲೆಗೈದಿರುವ ಘಟನೆ ತಣ್ಣೀರು ಬಾವಿ ಟ್ರೀ ಪಾರ್ಕ್ ಬಳಿ ರವಿವಾರ ಬೆಳಗ್ಗೆ ನಡೆದಿದೆ.

ಕೊಲೆಯಾದವನನ್ನು ಕೇರಳದ ಕೊಲ್ಲಂ ನಿವಾಸಿ ಬಿನು( 41) ಎಂದು ಗುರುತಿಸಲಾಗಿದ್ದು, ಆರೋಪಿ ಕೇರಳದ ಕಣ್ಣೂರು ಜಿಲ್ಲೆಯ ತಳಿಪ್ಪರಂಬ್ ನಿವಾಸಿ  ಜಾನ್ಸನ್ ಯಾನೆ ಬಿನೋಯ್ (52) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತ ಬಿನು ಮತ್ತು ಜಾನ್ಸನ್ ಯಾನೆ ಬಿನೋಯ್ ತಣ್ಣೀರುಬಾವಿಯ ಟ್ರೀ ಪಾರ್ಕ್ ಬಳಿಯ ದೋಣಿ ನಿರ್ಮಾಣ ಸಂಸ್ಥೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಫ್ಯಾಕ್ಟರಿಯ ವಸತಿ ಸಮುಚ್ಛಯದ ಬೇರೆ ಬೇರೆ ಮನೆಗಳಲ್ಲಿ ವಾಸವಾಗಿದ್ದರು.

ವೈಯಕ್ತಿಕ ವಿಚಾರವಾಗಿ ಇಬ್ಬರ ನಡುವೆ ಶನಿವಾರ ರಾತ್ರಿ ಜಗಳವಾಗಿತ್ತು. ಇದೇ ದ್ವೇಷದಿಂದ ಮದ್ಯ ಸೇವಿಸಿ ಬಂದಿದ್ದ ಬಿನು ಫ್ಯಾಕ್ಟರಿಯ ಮನೆಯಲ್ಲಿ ವಾಸವಾಗಿದ್ದ ಜಾನ್ಸನ್ ಯಾನೆ ಬಿನೋಯ್ ಗೆ ಚೂರಿ ಇರಿದು ಕೊಲೆ ಗೈದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ‌. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News