ಪ್ರಭಾಕರ ಭಟ್ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರು ಡಿವೈಎಫ್ಐ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಲು ಹೊರಟಿದ್ದಾರೆ: ಸುನಿಲ್ ಕುಮಾರ್ ಬಜಾಲ್

Update: 2024-01-16 09:50 GMT

ಉಳ್ಳಾಲ: ಅವಹೇಳನಕಾರಿಯಾಗಿ ಮಾತನಾಡಿರುವ ಪ್ರಭಾಕರ್ ಭಟ್ ವಿರುದ್ಧ ಪ್ರಕರಣ ದಾಖಲಿಸದ ಪೊಲೀಸರು ನ್ಯಾಯಯುತ ವಾಗಿ ಹೋರಾಟ ಮಾಡಿದ ಡಿವೈಎಫ್ಐ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸುವ ಮೂಲಕ ಸವಾಲು ಎಸೆಯಲು ಪೊಲೀಸರು ತಯಾರಿದ್ದರೆ ಅದನ್ನು ಸ್ವೀಕರಿಸಿ ಪ್ರತಿ ಸವಾಲು ಹಾಕಲು ನಾವು ತಯಾರಿ ಇದ್ದೇವೆ ಎಂದು ಸಿಪಿಐಎಂ ಮುಖಂಡ ಸುನಿಲ್ ಕುಮಾರ್ ಬಜಾಲ್ ಎಚ್ಚರಿಸಿದ್ದಾರೆ.

 ತೊಕ್ಕೊಟ್ಟು ಪರಿಸರ ದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಧರಣಿ ನಡೆಸಿದ ಡಿವೈಎಫ್ಐ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ, ಉಳ್ಳಾಲ ತಾಲೂಕು ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ವತಿಯಿಂದ ಮಂಗಳವಾರ ನಡೆದ ಉಳ್ಳಾಲ ಠಾಣಾ ಮುತ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ‌ ಅವರು ಮಾತನಾಡುತ್ತಿದ್ದರು.

ಹಿಂದೂ ಸಂಘಟನೆಗಳ ಮುಖಂಡರಾದ ಜಗದೀಶ್ ಕಾರಂತ್, ಶರಣ್ ಪಂಪ್ವೆಲ್ , ಪ್ರಭಾಕರ್ ಭಟ್ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡಿದರೂ, ದ್ವೇಷ ಭಾಷಣ ಮಾಡಿದರೂ ಸೂಕ್ತ ಕ್ರಮಗಳನ್ನು ಕೈಗೊಳ್ಳದ ಪೊಲೀಸರು ಬೀಡಿ ಕಾರ್ಮಿಕರ, ಬೀದಿಬದಿ ವ್ಯಾಪಾರಸ್ಥರ, ರೈತರ ಪರ ನ್ಯಾಯಕ್ಕಾಗಿ ಹೋರಾಟ ಮಾಡುವ ಡಿವೈಎಫ್ಐ ಮುಖಂಡರ ವಿರುದ್ಧ ಪ್ರಕರಣ ದಾಖಲಿಸುವ ಉದ್ದೇಶ ಏನು ಎಂದು ಪ್ರಶ್ನಿಸಿದರು.

ಎಫ್ಐಆರ್ ಒಂದಲ್ಲ ಎರಡು ಮಾಡಿ. ಹೋರಾಟಗಾರರ ಪಟ್ಟಿ ನಾವು ಕೊಡುತ್ತೇವೆ. ಆದರೆ ನ್ಯಾಯಪರ ತೀರ್ಮಾನ ಪೊಲೀಸರು ಯಾಕೆ ಮಾಡುವುದಿಲ್ಲ ಎಂಬ ಪ್ರಶ್ನೆ ಇದೆ. ಮರಳು ದಂಧೆ ಸಹಿತ ಹಲವು ದಂಧೆಗಳು ಠಾಣೆ ಮುಂದೆಯೇ ನಡೆದರೂ ಪೊಲೀಸರು ಮೌನ ವಹಿಸುತ್ತಾರೆ.  ನಾವು ಇಂತಹ ಹೋರಾಟ ನಡೆಸುವುದು ಹೊಸತಲ್ಲ. ಪೊಲೀಸರ ಇಲಾಖೆ ಕೈಗೊಂಡ ಕ್ರಮ ತಪ್ಪು ಎಂದು ಕಂಡ ಹಿನ್ನೆಲೆಯಲ್ಲಿ ಹೋರಾಟ ಮಾಡುತ್ತಿದ್ದೇವೆ. ಒಟ್ಟಿನಲ್ಲಿ ಪೊಲೀಸರಿಗೆ ಸರ್ಕಾರ ಬದಲಾದದ್ದು ಗೊತ್ತಾಗಿಲ್ಲ. ರಾಜ್ಯದಲ್ಲಿ ಅದೇ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಇಲ್ಲ ಎಂದು ಹೇಳಿದರು.

ಪ್ರಭಾಕರ್ ಭಟ್ ಶ್ರೀರಂಗಪಟ್ಟಣದಲ್ಲಿ ಏನೆಲ್ಲಾ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಮಹಿಳೆಯರ ಬಗ್ಗೆ ಹೀನಾಯವಾಗಿ ಮಾತನಾಡಿದ ಅವರ ವಿರುದ್ಧ ಕ್ರಮ ಕೈಗೊಳ್ಳುವವರು ಇಲ್ಲ. ಅದಕ್ಕೆಲ್ಲ ಅವಕಾಶ ಪೊಲೀಸ್ ಇಲಾಖೆ ಕೊಡುತ್ತಿದೆ. ಭಟ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ನಾವು ‌ಧರಣಿ ನಡೆಸಿದಾಗ ಪೊಲೀಸರು ‌  ನಮ್ಮ ವಿರುದ್ಧ ವೇ ಎಫ್ಐಆರ್ ದಾಖಲಿಸಿದ್ದಾರೆ ಎಂದು ಆರೋಪಿಸಿದರು.

1979 ರಲ್ಲಿ ಕೆಲವು ಪೊಲೀಸರಿಗೆ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ತೊಂದರೆ ಆದಾಗ ಅವರ  ಪರ ನಾವು ಹೋರಾಟ ಮಾಡಿದ್ದೇವೆ. 20 ವರ್ಷಗಳ ಹಿಂದೆ ಬಜ್ಪೆಯಲ್ಲಿ ಮಂಜುನಾಥ ಅವರ ಅಪಹರಣ ನಡೆದ ಸಂದರ್ಭದಲ್ಲಿ ಎಲ್ಲರೂ ಪೊಲೀಸರ ವಿರುದ್ಧ ತಿರುಗಿಬಿದ್ದಿದ್ದರು. ಈ ವೇಳೆ ಸತ್ಯ ಘಟನೆ ನಮಗೆ ಗೊತ್ತಿದ್ದ ಕಾರಣ ನಾವು ಪೊಲೀಸರಿಗೆ ಬೆಂಬಲ ನೀಡಿದ್ದೇವೆ. ಸೀಮಂತ್ ಕುಮಾರ್ ಸಿಂಗ್ ಎಸ್ಪಿ ಆಗಿದ್ದ ಸಂದರ್ಭದಲ್ಲಿ ಅವರು ಹಿಂದೂ ಸಂಘಟನೆಗಳ, ಬಜರಂಗಿಗಳ ನಾಯಕರನ್ನು ಹೆಡೆಮುರಿ ಕಟ್ಟಿ ದ್ದರು. ಈ ವೇಳೆ ಬಜರಂಗಿಗಳು ಎಸ್ಪಿ ಸೀಮಂತ್ ಕುಮಾರ್ ಸಿಂಗ್ ಹಿಂದೂ ವಿರೋಧಿ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲೂ ನಾವು ಪೊಲೀಸರ ಪರ ನ್ಯಾಯಕ್ಕಾಗಿ ಹೋರಾಟ ಮಾಡಿದ್ದೇವೆ. ಇದನ್ನು ನೆನಪಿಸಿ ಪೊಲೀಸರು ನಮಗೆ ಸೆಲ್ಯೂಟ್ ಹೊಡೆಯಬೇಕೇ ಹೊರತು ಪ್ರಕರಣ ದಾಖಲಿಸುವುದಲ್ಲ ಎಂದು ಹೇಳಿದರು.

ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಪೊಲೀಸರ ಕಾನೂನು ವಿರೋಧಿ ನೀತಿ ವಿರೋಧಿಸಿ ಹೋರಾಟ ಮಾಡಲು ನಮಗೆ ಹಕ್ಕಿದೆ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಎಲ್ಲಾ ವ್ಯವಸ್ಥೆ ಇರುವಾಗ ಅಸಂವಿಧಾನಿಕವಾಗಿ ಅವಹೇಳನಕಾರಿಯಾಗಿ ಮಾತನಾಡಿರುವ ಭಟ್ ರನ್ನು ಬಂಧಿಸುವಂತೆ ಒತ್ತಾಯಿಸಿ ಧರಣಿ ನಡೆಸಲು ಅನುಮತಿ ನೀಡಲು ಪೊಲೀಸರು ಹಿಂದೇಟು ಹಾಕಿದ್ದಾರೆ. ನ್ಯಾಯಯುತವಾಗಿ ಪ್ರತಿಭಟನೆ ನಡೆಸಿದ ಡಿವೈಎಫ್ಐ ಮುಖಂಡರ ವಿರುದ್ಧ ಪ್ರಕರಣ ಕೂಡಾ ಉಳ್ಳಾಲ ಪೊಲೀಸರು ದಾಖಲಿಸಿದ್ದಾರೆ. ಈ ಕಾರಣದಿಂದ ದೊಡ್ಡ ಸಂಖ್ಯೆಯಲ್ಲಿ ಇಂದು ಠಾಣೆ ಮುಂದೆ ಕೂರಿದ್ದೇವೆ. ಇಂದು ಕೂಡ ಪ್ರಕರಣ ದಾಖಲಿಸುವುದಾದರೆ ಪ್ರತಿಭಟನಾಕಾರರ ಹೆಸರು ನಾವೆ ಕೊಡುತ್ತೇವೆ. ನಿಮ್ಮ ಎಫ್ಐಆರ್ ಗೆ ನಾವು ಎದೆಗುಂದುವುದಿಲ್ಲ ಎಂದರು.  .

ಅನಂತ್ ಕುಮಾರ್ ಹೆಗ್ಡೆ ಮುಖ್ಯಮಂತ್ರಿ ವಿರುದ್ಧ ಮಾತನಾಡಿದರು ಎಂಬ ಕಾರಣಕ್ಕೆ ಅವರ ವಿರುದ್ಧ ಸೋಮೋಟೋ ಕೇಸು ಹಾಕಿದರು. ಆದರೆ ಸಂವಿಧಾನ ವಿರೋಧಿ ಹೇಳಿಕೆ ನೀಡುವ ಪ್ರಭಾಕರ್ ಭಟ್ ವಿರುದ್ಧ ಯಾಕೆ ಪ್ರಕರಣ ದಾಖಲಿಸುವುದಿಲ್ಲ? ಅವರೇನು ಸಂವಿಧಾನಕ್ಕಿಂತ ದೊಡ್ಡವರಾ? ಪಂಚಾಯತ್ ಸದಸ್ಯ ಕೂಡಾ ಅಲ್ಲದ ಅವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.

ಕಾನೂನು ವಿಚಾರದಲ್ಲಿ ಪೊಲೀಸರು ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದ್ದಾರೆ. ಪ್ರಭಾಕರ್ ಭಟ್ ವಿರುದ್ಧ ಮಾತನಾಡಬಾರದು, ಅವರ ಹೇಳಿಕೆ ಖಂಡಿಸಬಾರದು, ಅವರ ಅವಹೇಳನಕಾರಿ ಮಾತು ಖಂಡಿಸಿ ಪ್ರತಿಭಟನೆ ಮಾಡಬಾರದು ಎನ್ನುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

 ಪ್ರಭಾಕರ್ ಭಟ್ ವಿರುದ್ಧ ಪ್ರತಿಭಟನೆ ನಡೆಸುವ ಸಲುವಾಗಿ ಡಿವೈಎಫ್ಐ ಪರವಾನಿಗೆ ಪಡೆಯಲು ಠಾಣೆಗೆ ಹೋಗಿದ್ದ ಸಂದರ್ಭ ಪೊಲೀಸರು ಪರವಾನಿಗೆ ನೀಡಲು ನಿರಾಕರಿಸಿದರು. ಈ ವೇಳೆ ಪೊಲೀಸರು ನಾವು ಎಲ್ಲಾ ಧಾರ್ಮಿಕ ಸಂಘಟನೆಗಳ ಮನವೊಲಿಸಿದ್ದೇವೆ. ನೀವು ಕೂಡ ಪ್ರತಿಭಟನೆಯಿಂದ ಹಿಂಜರಿಯಿರಿ. ನೀವು ಅವರಿಗಿಂತ ದೊಡ್ಡವರಾ ಎಂದು ಪ್ರಶ್ನಿಸಿದ್ದಾರೆ. ಪೊಲೀಸರಿಗೆ ಅಗರ್ವಾಲ್ ದೊಡ್ಡವರಾಗಿರಬಹುದು. ಆದರೆ ಧಾರ್ಮಿಕ ಸಂಘಟನೆಗಳಿಂತ ನಾವು ದೊಡ್ಡವರು. ನಮ್ಮನ್ನು ಏನು ಮಾಡಿದರೂ ಸರಿ, ನಾವು ಹೋರಾಟ ಕೈಬಿಡುವುದಿಲ್ಲ. ನಾವು ಬಡವರ, ರೈತರ‌ ಪರ ಹೋರಾಟ ಮಾಡುವವರು.  ನ್ಯಾಯಕ್ಕಾಗಿ ಹೋರಾಟ ಮಾಡಿದರೆ ಮಾತ್ರ ನಿಮ್ಮ ಕ್ರಮ ನಡೆಯುತ್ತಿದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಡಿವೈಎಫ್ಐ ಮುಖಂಡರ ವಿರುದ್ಧ ಪ್ರಕರಣ ದಾಖಲು ಮಾಡಿರುವುದನ್ನು ಖಂಡಿಸಿ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ಮಾಸ್ತಿಕಟ್ಟೆ ಯಿಂದ ಉಳ್ಳಾಲ ಪೊಲೀಸ್ ಠಾಣಾ ವರೆಗೆ ಪ್ರತಿಭಟನಾ ಜಾಥಾ ನಡೆಸಿದರು. ಈ ಸಂದರ್ಭದಲ್ಲಿ ಠಾಣೆಯ ಗೇಟ್ ಬಂದ್ ಮಾಡಿ ಪೊಲೀಸರು ಅವರನ್ನು ತಡೆದರು .ಈ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್, ಉಳ್ಳಾಲ ತಾಲೂಕು ಅಧ್ಯಕ್ಷ ರಝಾಕ್ ಮೊಂಟೆಪದವು, ಮಾಜಿ ರಾಜ್ಯಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಉಳ್ಳಾಲ ತಾಲೂಕು ಕಾರ್ಯದರ್ಶಿ ಜಯಂತ್ ನಾಯ್ಕ್, ಮುಡಿಪು ವಲಯ ಕಾರ್ಯದರ್ಶಿ ಸುಕುಮಾರ್ ತೊಕ್ಕೊಟ್ಟು, ಗುರುಪುರ ವಲಯ ಕಾರ್ಯದರ್ಶಿ ಸದಾಶಿವ ದಾಸ್, ಮುಖಂಡರಾದ ವಸಂತ್ ಆಚಾರಿ, ಪದ್ಮಾವತಿ ಶೆಟ್ಟಿ, ಜಯಂತಿ ಶೆಟ್ಟಿಕೆ.ಚ್. ಹಮೀದ್, ಇಬ್ರಾಹಿಂ ಮದಕ, ಸಿಪಿಐ ಕಾರ್ಯದರ್ಶಿ ಬಿ. ಶೇಖರ್, ರೈತ ಮುಖಂಡ ಕೃಷ್ಣಪ್ಪ ಸಾಲ್ಯಾನ್, ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹಾಬಲ ದೆಪ್ಪೇಲಿಮಾರ್, ಹರೇಕಳ ಗ್ರಾಮ ಪಂಚಾಯತ್ ಸದಸ್ಯರಾದ ಅಶ್ರಫ್ ಹರೇಕಳ, ಚಿಂತಕ ವಾಸುದೇವ ಉಚ್ಚಿಲ, ಸಿಐಟಿಯು ಜಿಲ್ಲಾಧ್ಯಕ್ಷರಾದ ಜೆ. ಬಾಲಕೃಷ್ಣ ಶೆಟ್ಟಿ, ಮುಖಂಡರಾದ ಯೋಗೀಶ್ ಜೆಪ್ಪಿನಮೊಗರು, ಜನಾರ್ಧನ ಕುತ್ತಾರ್, ರೋಹಿದಾಸ್ ಪ್ರಗತಿಪರ ಚಿಂತಕರಾದ J ಇಬ್ರಾಹಿಂ, ಶೇಖರ್ ಕುಂದರ್, ಚಂದ್ರಹಾಸ್ ಕುತ್ತಾರ್, ಮಹಿಳಾ ಹೋರಾಟಗಾರರಾದ ಪ್ರಮೀಳಾ ದೇವಾಡಿಗ, ಪ್ರಮೀಳ ಶಕ್ತಿನಗರ, ಅಸುಂತ ಡಿಸೋಜ, ಯೋಗಿತ ಸುವರ್ಣ ಉಳ್ಳಾಲ, ಡಿವೈಎಫ್ಐ ಮುಖಂಡರಾದ ಮನೋಜ್ ವಾಮಂಜೂರು, ನವೀನ್ ಕೊಂಚಾಡಿ, ನಿತಿನ್ ಕುತ್ತಾರ್, ಸುನೀಲ್ ತೇವುಲ, ಅಮೀರ್ ಉಳ್ಳಾಲ ಬೈಲ್, ರಝಾಕ್ ಮುಡಿಪು, ತೈಯೂಬ್ ಬೆಂಗ್ರೆ, ಅಶ್ಫಾಕ್ ಅಲೇಕಳ, ಸಾದಿಕ್ ಕಣ್ಣೂರು, KH ಇಕ್ಬಾಲ್, ಹೈದರ್ ಹರೇಕಳ, ಅನಿಲ್ ತಿಲಕ್ ನಗರ, ರಿಯಾಝ್ ಮದಕ, ವಿಕಾಸ್ ಕುತ್ತಾರ್, ಕಾರ್ತಿಕ್ ಕುತ್ತಾರ್, ಮಾಜಿ ಅಧ್ಯಕ್ಷ ರಫೀಕ್ ಹರೇಕಳ, ಉಪಸ್ಥಿತರಿದ್ದರು.

ಡಿವೈಎಫ್ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ ಸ್ವಾಗತಿಸಿ, ನಿರೂಪಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News