ಮಳೆ ತೀವ್ರವಾಗಿದ್ದ ಸಂದರ್ಭ ರಜೆಗಾಗಿ ಮಕ್ಕಳಿಂದಲೇ ಕರೆ: ಮುಗುಳ್ನಕ್ಕ ದ.ಕ ಜಿಲ್ಲಾಧಿಕಾರಿ

Update: 2023-08-02 12:35 GMT

ಮಂಗಳೂರು: ಕಂದಾಯ ಸೇರಿದಂತೆ ಅಗತ್ಯ ಸಮಸ್ಯೆಗಳಿಗಾಗಿ ಜನರು ಗ್ರಾಮಾಂತರ ಪ್ರದೇಶಗದಳಿಂದ ಜಿಲ್ಲಾಧಿಕಾರಿ ಕಚೇರಿಯನ್ನು ಅಲೆದಾಡಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ತಂಡ ವಾರಕ್ಕೊಮ್ಮೆ ಒಂದೊಂದು ತಾಲೂಕು ತಾಲೂಕುಗಳಿಗೆ ಭೇಟಿ ನೀಡಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಮಂಗಳೂರು ಪ್ರೆಸ್ಕ್ಲಬ್ನಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತರಿಂದ ಜಿಲ್ಲೆ ಹಾಗೂ ನಗರ ವ್ಯಾಪ್ತಿಯ ಹಲವು ಸಮಸ್ಯೆಗಳನ್ನು ಅರಿತುಕೊಂಡ ಬಳಿಕ ಅವರು ಈ ವಿಷಯ ತಿಳಿಸಿದರು.

ಮುಂದಿನ ವಾರದಿಂದ ಈ ಭೇಟಿ ಕಾರ್ಯಕ್ರಮ ನಡೆಯಲಿದ್ದು, ವಾರದಲ್ಲಿ ಒಂದು ದಿನವನ್ನು ಅದಕ್ಕಾಗಿ ನಿಗದಿಪಡಿಸಲಾಗುವುದು. ಆ ದಿನ ಆರಂಭದಲ್ಲಿ ಜಿಲ್ಲಾಡಳಿತದ ತಂಡ ನಿಗದಿತ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಇತ್ಯಥಪಡಿಸಲಿದೆ. ಬಳಿಕ ತಾನು ಕೂಡಾ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ. ಜನರನ್ನು ತಾಲೂಕು ಮಟ್ಟದಲ್ಲಿಯೇ ಭೇಟಿಯಾಗಿ ಸಮಸ್ಯೆ ಇತ್ಯರ್ಥ ಪಡಿಸುವುದು ಇದರ ಉದ್ದೇಶವಾಗಿದ್ದು, ಬಳಿಕ ಹೋಬಳಿ ಮಟ್ಟದಲ್ಲಿಯೂ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಶೀಘ್ರವೇ ಸಾರಿಗೆ ಪ್ರಾಧಿಕಾರದ ಸಭೆ

ಜಿಲ್ಲೆಯಲ್ಲಿ ಸರಕಾರಿ ಬಸ್ಸುಗಳ ಓಡಾಟಕ್ಕಿರುವ ಸಮಸ್ಯೆ, ಇಲೆಕ್ಟ್ರಿಕ್ ಆಟೋರಿಕ್ಷಾಗಳು ಸೇರಿದಂತೆ ಸಾರಿಗೆ ಸಂಬಂಧಿಸಿತ ಸಮಸ್ಯೆಗಳ ಬಗ್ಗೆ ಶೀಘ್ರವೇ ರಸ್ತೆ ಸಾರಿಗೆ ಪ್ರಾಧಿಕಾರದ ಸಭೆ ನಡೆಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ನಗರದ ಸಮಸ್ಯೆಗಳ ಜಂಟಿ ಪರಿಶೀಲನೆ

ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿನ ಹೊಂಡ ಗುಂಡಿಗಳು, ಒಳಚರಂಡಿ ಅವ್ಯವಸ್ಥೆ ಮೊದಲಾದ ಬಗ್ಗೆ ಎನ್ಎಚ್ ಅಧಿಕಾರಿಗಳು ಹಾಗೂ ಮನಪಾ ಅಧಿಕಾರಿಗಳ ಜತೆ ಚಂಟಿ ಪರಿಶೀಲನೆ ನಡೆಸಿ ಕ್ರಮ ವಹಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

ಮಂಗಳೂರು ತಾಲೂಕು ಸೇರಿದಂತೆ ಜಿಲ್ಲೆಯ ಗ್ರಾಮಾಂತರ ತಾಲೂಕುಗಳಲ್ಲಿನ ಜಟಿಲ ಸಮಸ್ಯೆಯಾಗಿರುವ ಕಂದಾಯ ಅರಣ್ಯ ಭೂಮಿಯ ವರ್ಗೀಕರಣಕ್ಕೆ ಸಂಬಂಧಿಸಿ ಸರ್ವೆ ಕೇವಲ ಜಿಲ್ಲೆಯನ್ನು ಸೀಮಿತವಾಗಿ ನಡೆಸಲು ಸಾಧ್ಯತೆ ಬಗ್ಗೆ ಪರಿಶೀಲಿಸಲಾಗುವುದು. ಇದೇ ವೇಳೆ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಜಿಪಿಎಸ್ ಆಧಾರದಲ್ಲಿ ಅರಣ್ಯ ಹಾಗೂ ಕಂದಾಯ ಭೂಮಿಯನ್ನು ಗುರುತಿಸುವಿಕೆಯನ್ನು ವಿಶೇಷ ಅಧ್ಯಯನ ಹಾಗೂ ವಿಶೇಷ ತಂಡದ ಮೂಲಕ ನಡೆಸಲು ಪ್ರಯತ್ನಿಸಲಾಗುವುದು ಎಂದು ಮುಲ್ಲೈ ಮುಗಿಲನ್ ತಿಳಿಸಿದರು.

ಗ್ರಾಮೀಣ ಭಾಗಗಳಲ್ಲಿ ತಾಲೂಕು ಆಸ್ಪತ್ರೆ, ತಾಲೂಕು ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ನೀಗಿಸುವ ನಿಟ್ಟಿನಲ್ಲಿ ನಿಗದಿತ ದಿನಗಳಲ್ಲಿ ಸಾರ್ವಜನಿಕರಿಗೆ ಸಂಬಂಧಪಟ್ಟವರು ಲಭ್ಯ ಇರುವಂತೆ ಹಾಗೂ ಈ ಮಾಹಿತಿ ಕಚೇರಿಗಳಲ್ಲಿಯೂ ಲಭ್ಯವಾಗುವಂತೆ ಕ್ರಮ ವಹಿಸಲಾಗುವುದು ಎಂದರು.

ಮುಲ್ಕಿ, ಉಳ್ಳಾಲ, ಕಡಬ, ಮೂಡಬಿದ್ರೆ ಮೊದಲಾದ ಹೊಸ ತಾಲೂಕುಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಲವಾಗಿ ಕಂದಾಯ ಇಲಾಖೆಯ ಮಾಹಿತಿ ಪಡೆದಿದೆ. ಶೀಘ್ರದಲ್ಲೇ ತಾಲೂಕು ಕೇಂದ್ರಗಳಲ್ಲಿ ಸೌಕರ್ಯಗಳು ಲಭ್ಯವಾಗಲಿವೆ ಎಂದು ಅವರು ಹೇಳಿದರು.

ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.

‘ಕಾರ್ಯಕ್ರಮ ಆಧಾರಿತ ಪ್ರವಾಸ್ಯೋಮ’ ಯೋಜನೆ ಅಗತ್ಯ

ಬಹು ಸಂಖ್ಯೆಯಲ್ಲಿ ಶಿಕ್ಷಣ, ಆರೋಗ್ಯ, ಧಾರ್ಮಿಕ ಕೇಂದ್ರಗಳ ಜತೆಗೆ ಬೀಚ್ಗಳಿಂದ ಕೂಡಿರುವ ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದೆ. ಜಲಕ್ರೀಡೆ (ಸರ್ಫಿಂಗ್)ಯ ಜತೆಗೆ ಪಿಲಿಕುಲದ ಡಾ. ಶಿವರಾಮ ಕಾರಂತ ನಿಸರ್ಗ ಧಾಮವನ್ನು ಒಳಗೊಂಡು ಈ ಎಲ್ಲಾ ಕೇಂದ್ರಗಳನ್ನು ಕ್ರೋಢೀಕರಿಸಿಕೊಂಡು ವಿಭಿನ್ನ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ನಿಗದಿತ ಸಮಯಗಳಲ್ಲಿ ರೂಪಿಸಿಕೊಂಡು ಪ್ರವಾಸಿಗರನ್ನು ಆಕರ್ಷಿಸಲು ಹಾಗೂ ಪ್ರವಾಸಿಗರು ಕನಿಷ್ಟ 10 ದಿನಗಳ ಕಾಲ ಇಲ್ಲಿ ಉಳಿದು ಜಿಲ್ಲೆಯ ಸೊಬಗನ್ನು ಸವಿಯುವ ನಿಟ್ಟಿನಲ್ಲಿ ‘ಕಾರ್ಯಕ್ರಮ ಆಧಾರಿತ ಪ್ರವಾಸೋದ್ಯಮ’ ಯೋಜನೆಯ ರೂಪಿಸಬೇಕಾಗಿದೆ. ಈ ಹಂತದಲ್ಲಿ ಪ್ರಥಮ ಕಾರ್ಯವಾಗಿ ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿ ಮಾಡಿ ಜಿಲ್ಲಾಡಳಿತವು ಪ್ರವಾಸೋದ್ಯಮ ಇಲಾಖೆಯ ಸಹಕಾರದಲ್ಲಿ ಪೋರ್ಟಲ್ ಮೂಲಕ ಪ್ರಚಾರ ಮಾಡುವ ಕಾರ್ಯವನ್ನು ಮಾಡಲಿದೆ. ತುರ್ತಾಗಿ ನಗರದ ಪ್ರಮುಖ ಬೀಚ್ಗಳು, ಪ್ರವಾಸಿ ಕೇಂದ್ರಗಳ ಸೂಚನಾ ಫಲಕಗಳನ್ನು ಅಳವಡಿಸುವ ಕಾರ್ಯ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ಮಳೆ ರಜೆಗಾಗಿ ಮಕ್ಕಳಿಂದಲೇ ಕರೆ!

ಜಿಲ್ಲೆಯಾದ್ಯಂತ ಮಳೆ ತೀವ್ರವಾಗಿದ್ದ ಸಂದರ್ಭ ರಾತ್ರಿ ಹೊತ್ತು, ಬೆಳ್ಳಂಬೆಳಗ್ಗೆ ಮಕ್ಕಳು ಕರೆ ಮಾಡಿ ಸರ್ ಇವತ್ತು ರಜೆ ಉಂಟಾ? ನಮ್ಮ ಮನೆಯ ಎದುರು ಪ್ರವಾಹ ಬಂದಿದೆ. ಶಾಲೆಗೆ ಹೋಗಲು ಕಷ್ಟ ರಜೆ ಇದೆಯಾ ಎಂದು ನನ್ನ ಮೊಬೈಲ್ಗೆ ಕರೆ ಮಾಡಿ ಮಕ್ಕಳೇ ಬೇಡಿಕೆ ಇಡುತ್ತಿದ್ದ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರಸ್ತಾಪಿಸಿದರು.

ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಭಾರೀ ಮಳೆಯ ಸಂದರ್ಭ ಮಕ್ಕಳಿಗೆ ಶಾಲೆಗೆ ಹೋಗುವುದು ಕಷ್ಟ. ಹಾಗಾಗಿ ಜಿಲ್ಲೆಯ ಹವಾಮಾನ ಮುನ್ನೆಚ್ಚರಿಕೆಯನ್ನು ಗಮನದಲ್ಲಿರಿಸಿ ರಜೆ ಘೋಷಿಸಲಾಗುತ್ತದೆ. ಆದರೆ ಕೆಲವೊಮ್ಮೆ ರಜೆ ಕೊಟ್ಟ ದಿನ ಮಳೆಯೇ ಇರುವುದಿಲ್ಲ. ಪಿಯುಸಿವರೆಗೆ ರಜೆ ಕೊಟ್ಟಾಗ, ಪದವಿ ಮಕ್ಕಳಿಗೆ ಬೇಸರ. ಈ ಸಂದರ್ಭ ಕೆಲವೊಂದು ಹಾಸ್ಯಮಯ ಟ್ರೋಲ್ಗಳು ಬರುತ್ತವೆ. ನಗು ಬರುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಮಕ್ಕಳೇ ರಜೆಗಾಗಿ ಕರೆ ಮಾಡಿದಾಗ ಕೆಲವೊಮ್ಮೆ ಪೇಚಿಗೆ ಸಿಲುಕುವ ಪರಿಸ್ಥಿತಿ ಎಂದು ಜಿಲ್ಲಾಧಿಕಾರಿ ಮುಗುಳ್ನಕ್ಕರು.

ಇಂತಹ ಅವಸ್ಥೆ ತಪ್ಪಿಸುವ ಸಲುವಾಗಿ ರಜೆಯ ಅವಧಿಯನ್ನು ಮಳೆಗಾಲಕ್ಕೆ ವಿಸ್ತರಿಸಿ ಬೇಸಿಗೆ ಸಂದರ್ಭ ಶಾಲೆಗಳನ್ನು ನಡೆಸುವ ಪ್ರಸ್ತಾಪವೂ ಚಿಂತನೆಯಲ್ಲಿದೆ ಎಂದು ಅವರು ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News