Instagram ಮೂಲಕ ಪರಿಚಯವಾದ ವಿದ್ಯಾರ್ಥಿನಿಯ ಅತ್ಯಾಚಾರ: ಆರೋಪಿ ಬೀದಿ ನಾಟಕ ಕಲಾವಿದನ ಸೆರೆ
ಮಂಗಳೂರು, ಆ.10: Instagram ಮೂಲಕ ಪರಿಚಯವಾದ ವಿದ್ಯಾರ್ಥಿನಿಯ ಮನೆಯವರಿಗೆ ಕೆಲಸ ಕೊಡಿಸುವುದಾಗಿ ಹೇಳಿದ್ದಲ್ಲದೆ ಲಾಡ್ಜ್‌ಗೆ ಕರೆದೊಯ್ದು ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದು, ಆಕೆಯೊಂದಿಗಿರುವ ಫೊಟೋಗಳನ್ನು ಇತರರಿಗೆ ಹಂಚಿ ಆ ಫೊಟೋಗಳನ್ನು ಅಳಿಸಿ ಹಾಕಬೇಕಿದ್ದರೆ ಹಣದ ಬೇಡಿಕೆಯನ್ನು ಮುಂದಿಟ್ಟ ಆರೋಪಿ ಬೀದಿ ನಾಟಕ ಕಲಾವಿದನನ್ನು ಮಂಗಳೂರು ಮಹಿಳಾ ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧಿತನನ್ನು ರಾಯಚೂರು ಮೂಲದ ಯಮನೂರ (22) ಎಂದು ಗುರುತಿಸಲಾಗಿದೆ. ಆರೋಪಿಗೆ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ನಗರದ ಇಂಜಿನಿಯರಿಂಗ್ ಕಾಲೇಜಿನ 19ರ ಹರೆಯದ ವಿದ್ಯಾರ್ಥಿನಿಯನ್ನು ಇನ್ಸ್ಟಾಗ್ರಾಮ್ ಮೂಲಕ ಗೆಳೆತನ ಮಾಡಿ ಕೊಂಡ ಆರೋಪಿಯು ತನ್ನನ್ನು ವಾಮಂಜೂರು ಠಾಣೆಯ ಎಸ್ಸೈ ಎಂದು ಪರಿಚಯ ಮಾಡಿಕೊಂಡ. ಅಲ್ಲದೆ 2023ರ ಮೇ ತಿಂಗಳಲ್ಲಿ ನಗರದ ಕದ್ರಿ ದೇವಸ್ಥಾನದಲ್ಲಿ ಭೇಟಿ ಮಾಡಿ ಬಳಿಕ ತಣ್ಣೀರುಬಾವಿಯ ಬೀಚ್‌ಗೆ ಕರೆದೊಯ್ದು ಫೋಟೊ ತೆಗೆದುಕೊಂಡು ಬಳಿಕ ಅದನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದ ಎಂದು ಆರೋಪಿಸಲಾಗಿದೆ.
ಅಲ್ಲದೆ ಬೆಂಗಳೂರು ಮತ್ತು ಕಿನ್ನಿಗೋಳಿಯ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಲ್ಲದೆ ಆ ಫೋಟೊಗಳನ್ನು ಆಕೆಯ ಮನೆಯವರಿಗೆ ಮತ್ತು ಸ್ನೇಹಿತರ ಮೊಬೈಲ್‌ಗೆ ಕಳುಹಿಸಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ. ಈ ಫೋಟೊಗಳನ್ನು ಅಳಿಸಿ ಹಾಕಬೇಕಿದ್ದರೆ 1.50 ಲಕ್ಷ ರೂ. ನೀಡಬೇಕು ಎಂದು ಬೇಡಿಕೆಯನ್ನಿಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ವಿದ್ಯಾರ್ಥಿನಿಯು ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದು, ಬುಧವಾರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯು ಬೀದಿ ನಾಟಕ ಕಲಾವಿದನಾಗಿದ್ದು, ಹಾಗಾಗಿ ಆತನು ಪೊಲೀಸ್ ಸಮವಸ್ತ್ರ ಹೊಂದಿದ್ದ. ಕೃತ್ಯಕ್ಕೆ ಇದೇ ಸಮವಸ್ತ್ರವನ್ನು ಬಳಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೆಲವು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿನಿಯರು, ಹೆಣ್ಮಕ್ಕಳನ್ನು ಪರಿಚಯ ಮಾಡಿಕೊಂಡು ಪ್ರೀತಿಯ ನಾಟಕವಾಡಿ, ಅತ್ಯಾಚಾರ, ಮೋಸ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಮೋಸದ ಜಾಲಕ್ಕೆ ಬಲಿ ಬೀಳದಂತೆ ಮಂಗಳೂರು ನಗರ ಪೊಲೀಸ್ ಅಯುಕ್ತ ಕುಲದೀಪ್ ಕುಮಾರ್ ಜೈನ್ ಮನವಿ ಮಾಡಿದ್ದಾರೆ. |