ಸೆ.5: ದ.ಕ. ವಕ್ಫ್ ಸಲಹಾ ಸಮಿತಿಯಿಂದ ಸ್ಪೀಕರ್, ಸಚಿವರಿಗೆ ಸನ್ಮಾನ

Update: 2023-09-02 06:31 GMT

ಮಂಗಳೂರು: ದ.ಕ. ಜಿಲ್ಲಾ ಅಭಿನಂದನಾ ಸಮಿತಿ ಹಾಗೂ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಆಶ್ರಯದಲ್ಲಿ ಸೆ.5ರಂದು ಸಂಜೆ 4ಕ್ಕೆ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಮುದಾಯದ ಗಣ್ಯರಿಗೆ ಗೌರವಾರ್ಪಣೆ ಕಾರ್ಯಕ್ರಮ ಯೆನೆಪೊಯ ವೈ.ಅಬ್ದುಲ್ಲ ಕುಂಞಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದ.ಕ. ಜಿಲ್ಲಾ ಅಭಿನಂದನಾ ಸಮಿತಿಯ ಸಂಚಾಲಕ ಎಸ್.ಎಂ.ರಶೀದ್ ಹಾಜಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್, ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಹಾಗೂ ಪೌರಾಡಳಿತ, ಹಜ್ ಸಚಿವ ರಹೀಂ ಖಾನ್ ಅವರಿಗೆ ಸನ್ಮಾನ ಸಮಾರಂಭ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ದ.ಕ. ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಉಡುಪಿ ಜಿಲ್ಲಾ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಝೀರ್ ಅಹ್ಮದ್, ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಬಿ.ಎಂ.ಫಾರೂಕ್, ವೇದವ್ಯಾಸ ಕಾಮತ್, ಕರ್ನಾಟಕ ವಕ್ಫ್ ಮಂಡಳಿಯ ಅಧ್ಯಕ್ಷ ಮೌಲಾನಾ ಶಾಫಿ ಸಅದಿ, ವಕ್ಫ್ ಸ್ಥಾಯಿ ಸಮಿತಿ ಅಧ್ಯಕ್ಷ ಅನ್ವರ್ ಪಾಷಾ, ದ.ಕ. ಮುಸ್ಲಿಮ್ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಮುಹಮ್ಮದ್ ಮಸೂದ್ ಮತ್ತಿತರರು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಮಸೀದಿಗಳ ಆಡಳಿತ ಮಂಡಳಿಗಳ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಸದಸ್ಯರು ಹಾಗೂ ಖತೀಬರು ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ.ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅವರು ಮಾತನಾಡಿ, ಮಂಗಳೂರಿನಲ್ಲಿ ಶೀಘ್ರದಲ್ಲಿಯೇ ಹಚ್ ಭವನ ನಿರ್ಮಾಣಕ್ಕೆ ಸಚಿವರಿಗೆ ಬೇಡಿಕೆ ಸಲ್ಲಿಸಲಾಗುವುದು. ಈ ಹಿಂದೆ ಇದ್ದಂತೆ ಮಂಗಳೂರಿನಿಂದಲೇ ಹಜ್ ಯಾತ್ರೆಗೆ ವಿಮಾನಯಾನ ಆರಂಭಿಸುವಂತೆ ಮನವಿ ಸಲ್ಲಿಸಲಾಗುವುದು. ಅಲ್ಲದೆ ಅಲ್ಪಸಂಖ್ಯಾತರಿಗಾಗಿ ಇರುವ ಸರಕಾರದ ಯೋಜನೆಗಳಲ್ಲಿ ದ.ಕ ಜಿಲ್ಲೆಗೆ ಸಂಬಂಧಿಸಿದಂತೆ ಹೆಚ್ಚುವರಿ ಅನುದಾನ ನೀಡುವಂತೆಯೂ ಬೇಡಿಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಅಭಿನಂದನಾ ಸಮಿತಿ ಸದಸ್ಯರಾದ ಬಿ.ಎಂ.ಮುಮ್ತಾಝ್ ಅಲಿ, ಮುಹಮ್ಮದ್ ಹಾರಿಸ್, ಮುಸ್ತಫ ಜನತಾ ಸುಳ್ಯ, ಅಶ್ರಫ್ ಕಿನಾರ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News