ಮಗುವಿನೊಂದಿಗೆ ವಿಶ್ವದ ಅತಿ ಎತ್ತರದ ಉಮ್ಮಿಂಗ್ ಲಾ ತಲುಪಿದ ಸುಳ್ಯದ ತೌಹೀದ್ ರೆಹ್ಮಾನ್ ದಂಪತಿ

Update: 2023-09-04 18:46 GMT

-ಇಬ್ರಾಹಿಂ ಅಡ್ಕಸ್ಥಳ

ಮಂಗಳೂರು: ದಕ್ಷಿಣ ಕನ್ನಡದ ಸುಳ್ಯದ ಉದ್ಯಮಿಯೊಬ್ಬರು ಪತ್ನಿ, ಮೂರೂವರೆ ವರ್ಷದ ಮಗುವಿನೊಂದಿಗೆ ವಿಶ್ವದ ಅತಿ ಎತ್ತರದ ಉಮ್ಲಿಂಗ್ ಲಾ (19,024 ಅಡಿ ಎತ್ತರ) ತಲುಪಿದ್ದಾರೆ.

ಸುಳ್ಯದ ಹಳೆಗೇಟ್‌ನಲ್ಲಿರುವ ಹೋಮ್ ಗ್ಯಾಲರಿ ಮಾಲಕ ತೌಹೀದ್ ರೆಹ್ಮಾನ್ ಅವರು ಪತ್ನಿ ಜಶ್ಮಿಯಾ ಮತ್ತು ಮಗ ಜಝೀಲ್ ರೆಹ್ಮಾನ್ ಅವರು ರಾಯಲ್ ಎನ್ಫೀಲ್ಡ್ ಬುಲೆಟ್‌ನಲ್ಲಿ ಉಮ್ಮಿಂಗ್ ಲಾ ತಲುಪುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.

ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ (17,498) ಗಿಂತ ಎತ್ತರದ ಮತ್ತು ಆಮ್ಲಜನಕದ ಮಟ್ಟವು 50 ಇರುವ ಈ ಸ್ಥಳಕ್ಕೆ ಜಝೀಲ್ ರೆಹ್ಮಾನ್ ಬೈಕ್‌ನಲ್ಲಿ ತಲುಪಿದ ಅತ್ಯಂತ ಕಿರಿಯ ಎನಿಸಿಕೊಂಡಿದ್ದಾನೆ. ಇಂಡಿಯಾ ರೆಕಾರ್ಡ್ ಬುಕ್‌ನಲ್ಲಿ ಈ ದಾಖಲೆ ಸೇರ್ಪಡೆಗೊಳ್ಳಲಿದೆ.

ವಿಶ್ವದ ಅತಿ ಎತ್ತರದ ಮೋಟಾರು ರಸ್ತೆ ಭಾರತದಲ್ಲಿದೆ. ಈಗ ಇರುವ ಎತ್ತರದ ಮೋಟಾರು ರಸ್ತೆ ಭಾರತದ ಲಡಾಖ್‌ನ ಚೈನಾದ ಗಡಿಯಲ್ಲಿರುವ ಉಮ್ಲಿಂಗ್ ಲಾ ಆಗಿದೆ. ಇದರ ಎತ್ತರವು ಸರಿಸುಮಾರು 19,024 ಅಡಿ ಆಗಿರುತ್ತದೆ. ಇದು 52ಕಿಮೀ ರಸ್ತೆಯಾಗಿದ್ದು, ಚಿಶುಮ್ಲೆಯನ್ನು ಡೆಮ್‌ಚೋಕ್‌ಗೆ ಸಂಪರ್ಕಿಸುತ್ತದೆ. ಇದು ಗಡಿ ನಿಯಂತ್ರಣ ರೇಖೆಯಲ್ಲಿದೆ.(ಎಲ್‌ಎಸಿ) ಭಾರತ ಮತ್ತು ಚೀನಾ ನಡುವಿನ ಘರ್ಷಣೆ ಬಿಂದುವಾಗಿದೆ.

ರೆಹ್ಮಾನ್ ಅವರಿಗೆ ಇದೊಂದು ಹವ್ಯಾಸವಾಗಿದೆ. ಅವರು ಈ ಹಿಂದೆ ಕಾರಿನಲ್ಲಿ ಸ್ನೇಹಿತರೊಂದಿಗೆ ಹಿಮಾಚಲ ಪ್ರದೇಶ, ಶ್ರೀನಗರ, ಕಠ್ಮಂಡು ಸುತ್ತಿದ್ದಾರೆ. ಲಡಾಕ್‌ಗೆ ಆರು ಬಾರಿ ಉಮ್ಲಿಂಗ್ ಲಾಕ್ಕೆ ಇದೇ ಮೊದಲ ಬಾರಿ ಬೈಕ್‌ನಲ್ಲಿ ಸಾಹಸ ಯಾತ್ರೆ ಕೈಗೊಂಡು ಯಶಸ್ವಿಯಾಗಿದ್ದಾರೆ. ಈ ಹಿಂದೆ ಲಡಾಕ್‌ನ ಖರ್ದುಂಗ್ ಲಾಕ್ಕೆ ಅವರು ಯಶಸ್ವಿಯಾಗಿ ಯಾತ್ರೆ ಕೈಗೊಂಡಿದ್ದರು.

ಆಗಸ್ಟ್ 15ರಂದು ಸುಳ್ಯದಿಂದ ಹೊರಟಿದ್ದ ರೆಹ್ಮಾನ್‌ ಅವರು 19 ದಿನಗಳಲ್ಲಿ ಉಮ್ಲಿಂಗ್ ಲಾ ತಲುಪಿದ್ದಾರೆ. ಶನಿವಾರ ಅವರು ಗುರಿ ತಲುಪಿ ಅಲ್ಲಿ ರಾಷ್ಟ್ರಧ್ವಜ, ಕನ್ನಡ ಧ್ವಜ, ತುಳುನಾಡಿನ ಬಾವುಟವನ್ನು ಹಾರಿಸಿದ್ದಾರೆ.

5 ಸಾವಿರ ಕಿ.ಮೀ ಯಶಸ್ವಿಯಾಗಿ ಪೂರ್ಣಗೊಳಿಸಿ ವಾಪಸಾಗುತ್ತಿರುವ ತೌಹಿದ್ ರೆಹ್ಮಾನ್ ಅವರು ಹಿಮಾಚಲ ಪ್ರದೇಶದ ಮನಾಲಿಯಿಂದ ವಾರ್ತಾಭಾರತಿಯೊಂದಿಗೆ ಮಾತನಾಡಿ ತಮ್ಮ ಪ್ರಯಾಣದ ಅನುಭವವನ್ನು ಹಂಚಿಕೊಂಡರು.

ಉಮ್ಮಿಂಗ್ ಲಾ ತಲುಪಿದ ತಕ್ಷಣ ಆರ್ಮಿ ಅಧಿಕಾರಿಗಳು ತಮ್ಮನ್ನು ಸ್ವಾಗತಿಸಿದರು. ಮತ್ತು ತಮ್ಮ ಸಾಹಸದ ಬಗ್ಗೆ ಅವರು ಅಭಿನಂದಿಸಿದರು ಎಂದು ತಿಳಿಸಿದರು.

ಈ ಹಿಂದೆ ಬೈಕ್‌ನಲ್ಲಿ 9 ವರ್ಷದ ಬಾಲಕನೊಂದಿಗೆ ಕೋಲ್ಕತಾದ ದಂಪತಿ ಉಮ್ಲಿಂಗ್ ಲಾ ತಲುಪಿದ್ದರು. ಇದು ದಾಖಲೆಯಾಗಿತ್ತು. ಈ ದಾಖಲೆಯನ್ನು ರೆಹ್ಮಾನ್ ದಂಪತಿ ಮುರಿದಿದ್ದಾರೆ.

ರೆಹ್ಮಾನ್ ದಂಪತಿ ದಿನನಿತ್ಯ ಬೈಕ್‌ನಲ್ಲಿ 300-350ಕಿ.ಮೀ ಪ್ರಯಾಣ ಕೈಗೊಂಡಿದ್ದರು. ರಸ್ತೆ ಚೆನ್ನಾಗಿದ್ದರೆ 400 ಕಿ.ಮೀ ತನಕ ಪ್ರಯಾಣ ಕೈಗೊಂಡಿರುವುದಾಗಿ ತಿಳಿಸಿದರು.











 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - -ಇಬ್ರಾಹಿಂ ಅಡ್ಕಸ್ಥಳ

contributor

Similar News