ಉಡುಪಿ: ಸೆ.3 ರಂದು ನಾರಾಯಣ ಗುರುಗಳ ಸಂದೇಶ ಸಾಮರಸ್ಯ ಜಾಥಾ

Update: 2023-08-30 11:49 GMT

ಉಡುಪಿ, ಆ.30: ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ನೇತೃತ್ವದಲ್ಲಿ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತಿ ಪ್ರಯುಕ್ತ ಗುರು ಸಂದೇಶ ಸಾಮರಸ್ಯ ಜಾಥಾವನ್ನು ಸೆ.3 ರಂದು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಎಂ. ಪೂಜಾರಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನ 2ಗಂಟೆಗೆ ಜಾಥಕ್ಕೆ ಬನ್ನಂಜೆ ಬಿಲ್ಲವರ ಸೇವಾ ಸಂಘದಲ್ಲಿ ಪಕ್ಕಿಬೆಟ್ಟು ಶ್ರೀಬ್ರಹ್ಮ ಬೈದರ್ಕಳ ಗರೋಡಿ ಅಧ್ಯಕ್ಷ ವಿಠಲ ಪೂಜಾರಿ, ಮಾಜಿ ನಗರಸಭೆ ಅಧ್ಯಕ್ಷೆ ಆನಂದಿ, ಜೀವರಕ್ಷಕ ಈಶ್ವರ ಮಲ್ಪೆ, ಸಮಾಜ ಸೇವಕ ಸತೀಶ್ ಸುವರ್ಣ ಚಾಲನೆ ನೀಡಲಿರುವರು ಎಂದರು.

ಅಲ್ಲಿಂದ ಹೊರಡುವ ಜಾಥವು ಕಲ್ಸಂಕ ಮಾರ್ಗವಾಗಿ ಅಂಬಾಗಿಲು-ಸಂತೆ ಕಟ್ಟೆ- ನೇಜಾರು- ಕೆಮ್ಮಣ್ಣು- ಹೂಡೆ- ಗುಜ್ಜರಬೆಟ್ಟು- ವಡಭಾಂಡೇಶ್ವರ- ಮಲ್ಪೆ- ಕಲ್ಮಾಡಿ- ಕಿದಿಯೂರು- ಕಡೆಕಾರ್- ಕುತ್ಪಾಡಿ- ಸಂಪಿಗೆನಗರ- ಉದ್ಯಾವರದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಕಟಪಾಡಿ ಶ್ರೀವಿಶ್ವನಾಥಕ್ಷೇತ್ರ ತಲುಪಿ ಗುರು ಪೂಜೆಯೊಂದಿಗೆ ಸಮಾಪನಗೊಳ್ಳಲಿದೆ.

ಈ ಜಾಥದಲ್ಲಿ ಬಿಲ್ಲವ ಬಾಂಧವರು, ವಿವಿಧ ಸಂಘಸಂಸ್ಥೆಗಳ ಮುಖಂಡರು, ಸದಸ್ಯರು, ನಾರಾಯಣ ಗುರುಗಳ ಅನುಯಾಯಿಗಳು ಭಾಗವಹಿಸಲಿರುವರು. ಸುಮಾರು 500-600 ವಾಹನಗಳಲ್ಲಿ 5ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸೌಹಾರ್ದ, ಸಾಮರಸ್ಯ, ಸಮೃದ್ಧಿಯ ಅಂಶಗಳಿಗೆ ವಿಶೇಷ ಆದ್ಯತೆ ನೀಡಿದ್ದ ಗುರುಗಳ ಮೌಲ್ಯಾತ್ಮವಾದ ಚಿಂತನೆಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಾಥವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಶು ಕಲ್ಮಾಡಿ, ಉಪಾಧ್ಯಕ್ಷರಾದ ವಿಜಯ ಕೋಟ್ಯಾನ್, ಎನ್.ಮಹೇಶ್ ಕುಮಾರ್, ಕೋಶಾಧಿಕಾರಿ ಅನಿಲ್ ಕುಮಾರ್, ಸಂಘಟನಾ ಕಾರ್ಯದರ್ಶಿ ಶರತ್ ಜತ್ತನ್ನ ಉಪಸ್ಥಿತರಿದ್ದರು.

‘ಗುರುಗಳಿಗೆ ಅಗೌರವ ಸಹಿಸಲ್ಲ’

ಗುರು ಜಯಂತಿಗೆ ರಜೆ, ವಿಧಾನಸೌಧದ ಮುಂದೆ ಗುರುಗಳ ಪ್ರತಿಮೆ ಅನಾವರಣಗೊಳಿಸಲು ಈವರೆಗೆ ಆಗಿಲ್ಲ. ಅದೇ ರೀತಿ ನಾರಾಯಣ ಗುರುಗಳ ನಿಗಮ ಸ್ಥಾಪನೆ ಮಾಡಿದರೂ ಅದಕ್ಕೆ ಬೇಕಾದ ಅನುದಾನವನ್ನು ಒದಗಿಸಿಲ್ಲ. ಪಠ್ಯಪುಸ್ತಕದಿಂದಲೂ ಅವರ ಪಾಠ ತೆಗೆಯುವ ಪ್ರಯತ್ನ ಕೂಡ ನಡೆಯಿತು. ಕೇಂದ್ರ ಸರಕಾರ ಕಳೆದ ಗಣರಾಜ್ಯೋತ್ಸವ ಮೆರವಣಿಗೆಯ ಗುರುಗಳ ಸ್ತಬ್ಧಚಿತ್ರ ವನ್ನು ಕೈಬಿಟ್ಟಿತ್ತು. ಈ ರೀತಿ ನಾರಾಯಣ ಗುರುಗಳಿಗೆ ಆಗುತ್ತಿರುವ ಅಗೌರವ ಸಹಿಸಿಕೊಳ್ಳಲು ಆಗುವುದಿಲ್ಲ. ಇನ್ನು ಮುಂದೆ ಇದು ಆಗಬಾರದು ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಎಂ. ಪೂಜಾರಿ ತಿಳಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News