“ವಾಸ್ಕೋಡಗಾಮನ ವಿರುದ್ಧ ಹೋರಾಡಿದವರಲ್ಲಿ ರಾಣಿ ಅಬ್ಬಕ್ಕ ಪ್ರಮುಖರು”
ಉಳ್ಳಾಲ: “ವಾಸ್ಗೋಡಗಾಮ ವ್ಯಾಪಾರದ ದೃಷ್ಟಿಯಿಂದ ಕಲ್ಲಿಕೋಟೆಗೆ ಬಂದಾಗ ಆತನ ವಿರುದ್ಧ ಸೆಟೆದು ನಿಂತು ಹೋರಾಡಿದವರಲ್ಲಿ ರಾಣಿ ಅಬ್ಬಕ್ಕ ಪ್ರಮುಖರು” ಎಂದು ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ ಹೇಳಿದ್ದಾರೆ.
ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಉಳ್ಳಾಲ ಇದರ ಆಶ್ರಯದಲ್ಲಿ, ಮಂಗಳೂರಿನ ಬೀರಿಯಲ್ಲಿರುವ ಸಂತ ಅಲೋಶಿಯಸ್ ಕಾಲೇಜಿನ ಆಡಳಿತ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗ ಆಯೋಜಿಸಿದ್ದ ʼಮಾಹಿತಿ ಮರೆಮಾಚಿದ ಉಳ್ಳಾಲ ರಾಣಿ ಅಬ್ಬಕ್ಕಳ ಸಾಹಸ ಕಥೆʼ ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. “ವೀರರಾಣಿ ಅಬ್ಬಕ್ಕಳ ಹಿನ್ನಲೆಯನ್ನು ಇಂದಿನ ಯುವ ವಿದ್ಯಾರ್ಥಿ ಸಮೂಹ ತಿಳಿದುಕೊಳ್ಳಬೇಕು. ಆಕೆಯ ಹೋರಾಟದ ಕಾಲದಲ್ಲಿ ಉಳ್ಳಾಲ ಸಣ್ಣ ಪ್ರಾಂತ್ಯವಾಗಿತ್ತು. ಪೋರ್ಚುಗೀಸರ ವಿರುದ್ಧ ಆಕೆಯ ಹೋರಾಟ ದಿಟ್ಟವಾದುದು” ಎಂದು ಅವರು ಅಭಿಪ್ರಾಯಪಟ್ಟರು.
ಮಾಜಿ ಶಾಸಕ ಜಯರಾಮ್ ಶೆಟ್ಟಿ ಉದ್ಘಾಟಿಸಿದರು. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಇದರ ರಿಜಿಸ್ಟ್ರಾರ್ ಡಾ.ಆಲ್ವಿನ್ ವಿನ್ಸೆಂಟ್ ಡೇಸಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಧರ್ಮ ಗುರು ರೇವ್ ಫಾ.ವಿಕ್ಟರ್ ಡಿ ಮೆಲ್ಲೊ ಆಶಯ ಭಾಷಣ ಮಾಡಿದರು. ಕಾಲೇಜಿನ ಡೈರೆಕ್ಟರ್ ಡಾ. ಫಾ.ಮೆಲ್ವಿನ್ ಪಿಂಟೊ ಅಭಿನಂದನಾ ಭಾಷಣ ಮಾಡಿದರು.
ಕಾರ್ಯಕ್ರಮ ದಲ್ಲಿ ಕ್ಯಾಥೋಲಿಕ್ ಸಭಾ ಅಧ್ಯಕ್ಷ ಆಳ್ವಿನ್ ಡಿಸೋಜ, ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಎಂ.ಜಿ.ಮೋಹನ್, ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ರೇವತಿ ಆರ್ ಉಳ್ಳಾಲ, ಆಲಿಯಬ್ಬ ಇದ್ದರು.