ಜನರ ರಕ್ಷಣೆಗಿಂತ ಓಟ್ ಬ್ಯಾಂಕ್ ರಾಜಕಾರಣವೇ ಮುಖ್ಯ ಎಂದು ಸಿದ್ದರಾಮಯ್ಯ ಸಾಬೀತುಪಡಿಸಿದ್ದಾರೆ: ರೇಣುಕಾಚಾರ್ಯ

ಎಂ.ಪಿ. ರೇಣುಕಾಚಾರ್ಯ
ದಾವಣಗೆರೆ: ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್‍ನಲ್ಲಿ ನಡೆದ ಹತ್ಯೆ ಖಂಡನೀಯ. ಈ ಘಟನೆಯನ್ನು ಎಲ್ಲರೂ ಪಕ್ಷಾತೀತವಾಗಿ ಖಂಡಿಸಬೇಕು. ಆದರೆ, ಸಿಎಂ ಸಿದ್ದರಾಮಯ್ಯ ಅವರು ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ಅನಿವಾರ್ಯತೆ ಸರಿಯಲ್ಲ ಎಂಬ ಹೇಳಿಕೆ ನೀಡಿ, ತಮಗೆ ಜನರ ರಕ್ಷಣೆಗಿಂತ ಓಟ್ ಬ್ಯಾಂಕ್ ರಾಜಕಾರಣವೇ ಮುಖ್ಯವೆಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.
ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮದ ಆಧಾರದ ಮೇಲೆ ಹತ್ಯೆ ಮಾಡುವುದನ್ನು ಸಹಿಸಲು ಸಾಧ್ಯವೇ ಇಲ್ಲ. ಆದರೆ, ಕೇವಲ ಮತಗಳಿಕೆ ರಾಜಕಾರಣಕ್ಕಾಗಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಖಂಡನೀಯ. ಪಾಕಿಸ್ತಾನದ ಮಾಧ್ಯಮ ಕೂಡ ಸಿದ್ದರಾಮಯ್ಯ ಹೇಳಿಕೆಯನ್ನು ವಿಜೃಂಭಿಸುತ್ತಿವೆ. ಕಾಂಗ್ರೆಸ್, ಸಿದ್ದರಾಮಯ್ಯ ಅವರ ಓಟು ಬ್ಯಾಂಕ್ ರಾಜಕಾರಕ್ಕೆ ಇದೊಂದು ತಾಜಾ ನಿದರ್ಶನ ಎಂದರು.
ಕೇಂದ್ರ ಸರ್ಕಾರದ ತೀರ್ಮಾನಕ್ಕೆ ರಾಜ್ಯ ಸರ್ಕಾರ ಬದ್ಧವಾಗಿರಬೇಕು. ಆದರೆ, ಕಾಂಗ್ರೆಸ್ ಇಲ್ಲಿ ದ್ವಿಮುಖ ನೀತಿ ಅನುಸರಿಸುತ್ತಿದ್ದು, ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಹೇಳಿಕೆ ನಡುವೆ ವ್ಯತ್ಯಾಸ ಇದೆ ಎಂದರು.
ಕರ್ನಾಟಕದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನಿಗಳನ್ನು ಈ ಕೂಡಲೇ ಒದ್ದುಹೊರಗೆ ಹಾಕಬೇಕು. ಅಲ್ಲಿ ನಮ್ಮ ಯೋಧರು ಜೀವದ ಹಂಗುತೊರೆದು ಹೋರಾಟ ಮಾಡುತ್ತಿರುವಾಗ ಅವರ ಆತ್ಮಸ್ಥೈರ್ಯ ಹೆಚ್ಚುವ ಕೆಲಸ ಮಾಡಬೇಕೇ ಹೊರತು ಭದ್ರತಾ ವೈಫಲ್ಯದ ಬಗ್ಗೆ ಟೀಕೆ ಮಾಡುವುದು ಸರಿಯಲ್ಲವೆಂದ ಅವರು, ದೇಶದ ಮುಸ್ಲಿಮರು ಸಹ ಉಗ್ರರ ಇಂತಹ ಕೃತ್ಯ ಖಂಡಿಸಬೇಕೆಂದರು.
ಭಾರತ ಒಮ್ಮೆ ಯುದ್ಧಕ್ಕಿಳಿದರೆ ಪಾಕಿಸ್ತಾನ ಪುಡಿಪುಡಿ ಆಗುತ್ತದೆ. ಕೇವಲ 24 ಗಂಟೆಯಲ್ಲಿ ಪಾಕಿಸ್ತಾನ ಇರದಂತೆ ಹೊಡೆದು ಹಾಕುವ ಶಕ್ತಿ ಭಾರತೀಯ ಸೇನೆಗೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಯೋತ್ಪಾದನಾ ನಿರ್ಮೂಲನೆ ಮಾಡುವ ಬದ್ಧತೆ, ಇಚ್ಛಾಶಕ್ತಿ ಎರಡೂ ಇದೆ. ಉಗ್ರರನ್ನು ಹುಡುಕಿ ಹೊಡೆಯುವುದು ನಿಶ್ಚಿತ ಎಂದರು.
ಧರ್ಮ ಕೇಳಿ ಕೊಂದು ಹಾಕಿದ ಉಗ್ರರ ಹುಟ್ಟಡಗಿಸಲು ಹಾಗೂ ಅವರಿಗೆ ಪ್ರಚೋದಿಸುವ ಪಾಕಿಸ್ತಾನಿಗಳಿಗೆ ಬುದ್ಧಿ ಕಲಿಸಲು ಇದು ಸಕಾಲ. ಆದರೆ, ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ, ನಡವಳಿಕೆಗಳಿಂದ ರಾಜ್ಯದಲ್ಲಿ ಭಯೋತ್ಪಾದನೆ ಹೆಚ್ಚುತ್ತಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹಿಂದೂ ವಿರೋಧಿ ಆಡಳಿತ ಮಾಡುತ್ತಿದೆ ಎಂದು ದೂರಿದರು.