ದಾವಣಗೆರೆ | ಬಾದಾಮಿ ಚಾಲುಕ್ಯರ 1ನೇ ವಿಕ್ರಮಾದಿತ್ಯನ ಕಾಲದ ಶಿಲಾಶಾಸನ ಪತ್ತೆ

ದಾವಣಗೆರೆ : ನ್ಯಾಮತಿ ತಾಲೂಕಿನ ಮಾದಾಪುರ ಕೆರೆಯಲ್ಲಿ ಬಾದಾಮಿ ಚಾಲುಕ್ಯರ ಒಂದನೇ ವಿಕ್ರಮಾದಿತ್ಯನ ಕಾಲದ ಶಿಲಾಶಾಸನ ಪತ್ತೆಯಾಗಿದೆ ಎಂದು ಕಮಲಾಪುರದಲ್ಲಿನ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕ ಡಾ.ಆರ್. ಶೇಜೇಶ್ವರ ತಿಳಿಸಿದ್ದಾರೆ.
ಮಾದಾಪುರ ಕೆರೆಯಲ್ಲಿ ಸ್ಥಳೀಯರು ಜೆಸಿಬಿಯಿಂದ ಮಣ್ಣನ್ನು ತೆಗೆಯುವಾಗ ಶಿಲಾ ಶಾಸನ ಪತ್ತೆಯಾಗಿದೆ. ಇಲ್ಲಿಗೆ ಪುರಾತತ್ವ ಇಲಾಖೆ ನಿರ್ದೇಶಕರು ಭೇಟಿ ನೀಡಿ ಪರಿಶೀಲಿಸಿದ ನಂತರ ಇದು ಬಾದಾಮಿ ಚಾಲುಕ್ಯರ ಶಿಲಾ ಶಾಸನ ವಾಗಿದೆ ಎಂದು ತಿಳಿದು ಬಂದಿದೆ.
ಶಾಸನವು 5 ಅಡಿ ಉದ್ದವಿದ್ದು, ಹಳೆ ಗನ್ನಡದ 17 ಸಾಲು ಶಾಸನವನ್ನು ಒಳ ಗೊಂಡಿದೆ. ಬಾದಾಮಿ ಚಾಲುಕ್ಯರ ಒಂದನೇ ವಿಕ್ರಮಾದಿತ್ಯನ ಕ್ರಿ.ಶ.654-681 ಕಾಲದ ಶಾಸನವಾಗಿದೆ. ಒಂದನೇ ವಿಕ್ರಮಾದಿತ್ಯನು ರಾಜ್ಯವಾಳುವಾಗ ಅವನ ಅಧಿಕಾರಿ ಸಿಂಘವೆಣ್ಣನು ಬಳ್ಳಾವಿ ನಾಡನ್ನು ಆಳುತ್ತಿದ್ದಾಗ ಪ್ರಜೆಗಳಿಗಾಗಿ ಊರ ಮೇಲಿನ ಕೆಲವು ತೆರಿಗೆಗಳನ್ನು ಮನ್ನಾ ಮಾಡಿರುವುದನ್ನು ಹಾಗೂ ಕೆರೆಯನ್ನು ನಿರ್ಮಿಸಿದ ಜನರಿಗೆ ಭೂಮಿಯನ್ನು ದಾನ ನೀಡಿದ್ದು, ಈ ಭೂಮಿಯು ಬಳ್ಳಾವಿ ಎಪ್ಪತ್ತರ ಒಕ್ಕ ಲುಗಳಿಗೆ ಸಲ್ಲುತ್ತೆಂದು ಉಲ್ಲೇಖಿಸಲಾಗಿದೆ.
ಈ ಶಾಸನ ಶೋಧನೆಯಿಂದ ಬಳ್ಳಾವಿ ಎಪ್ಪತ್ತು ಎಂಬ 70 ಗ್ರಾಮಳಿದ್ದ ಆಡಳಿತ ವಿಭಾಗದ ಪ್ರಾಚೀನತೆಯನ್ನು ಹಾಗೂ ಶಾಸನವು 1344 ವರ್ಷ ಗಳ ಪುರಾತನವಾದದು ಎಂದು ತಿಳಿಸುತ್ತದೆ. ಈ ಶಾಸನದ ಮುಂಭಾಗ ಹಾಗೂ ಹಿಂಭಾಗದಲ್ಲಿ ಕ್ರಿ.ಶ.17ನೇ ಶತಮಾನದಲ್ಲಿನ ಅಪೂರ್ಣ ಉಬ್ಬುಶಿಲ್ಪವಿದೆ.
ಈ ಶಾಸನ ಓದಿಕೊಟ್ಟ ಪ್ರೊ.ಶ್ರೀನಿವಾಸ ಪಾಡಿಗರ, ರಮೇಶ ಹಿರೇಜಂಬೂರು, ಕ್ಷೇತ್ರ ಕಾರ್ಯದಲ್ಲಿ ಸಹಕರಿಸಿದ ಡಾ.ರವಿಕುಮಾರ ನವಲಗುಂದ, ಮಂಜಪ್ಪ ಚುರ್ಚಿ ಗುಂಡಿ, ಮಾದಾಪುರ ಗ್ರಾಮ ಆಡಳಿತಾಧಿಕಾರಿ ವಿಶ್ವನಾಥ, ಗ್ರಾಮಸ್ಥರಾದ ಬುಜಂಗ, ವೀರೇಶ್ ಹಾಗೂ ಇತರರ ಕಾರ್ಯವನ್ನು ಪುರಾತ್ವತ ಇಲಾಖೆ ನಿರ್ದೇಶಕರು ಶ್ಲಾಘಿಸಿದ್ದಾರೆ