ಅಲಿಬಾಬ ಮತ್ತು 40 ಕಳ್ಳರ ಕಥೆಯ ತದ್ರೂಪವೇ ಸಿದ್ದರಾಮಯ್ಯರ ತಂಡ : ಡಿ.ವಿ.ಸದಾನಂದಗೌಡ

ದಾವಣಗೆರೆ: ಸಿದ್ದರಾಮಯ್ಯ ಮತ್ತು ಅವರ ಸಚಿವ ಸಂಪುಟವು ಅಲಿಬಾಬ ಮತ್ತು 40 ಕಳ್ಳರ ಕಥೆಯ ತದ್ರೂಪ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.
ಜನಾಕ್ರೋಶ ಯಾತ್ರೆಯ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ರಾಜಕೀಯ ಪಕ್ಷಗಳು ಜನರ ಪರವಾಗಿ ಅಧಿಕಾರದಲ್ಲಿದ್ದಾಗ ಮಾತ್ರ ಕೆಲಸ ಮಾಡುವುದಲ್ಲ, ಪ್ರತಿಪಕ್ಷದಲ್ಲಿ ಇದ್ದಾಗ ಕೂಡ ಕೆಲಸ ಮಾಡಿದರೆ ಮಾತ್ರ ರಾಜಕೀಯ ಪಕ್ಷವೆಂದು ಅನಿಸಿಕೊಳ್ಳುತ್ತದೆ ಎಂದು ತಿಳಿಸಿದರು.
ನಮಗೆ ಇವತ್ತು ಅಧಿಕಾರ ಇಲ್ಲ, ಸಿದ್ದರಾಮಯ್ಯರವರು ನಡದಿದ್ದೇ ದಾರಿ ಎಂದು ನಾವು ಸುಮ್ಮನೆ ಕುಳಿತುಕೊಳ್ಳುಕೊಂಡರೆ ನೀವೆಲ್ಲರೂ ಕಣ್ಣೀರಿನಲ್ಲಿ ಕೈತೊಳೆಯುವ ಕೆಲಸವಾಗುತ್ತದೆ. ಅದಕ್ಕಾಗಿ ವಿಜಯೇಂದ್ರರ ನೇತೃತ್ವದಲ್ಲಿ, ನಮ್ಮೆಲ್ಲ ಹಿರಿಯ ನಾಯಕರು ಈ ಜನಾಕ್ರೋಶ ಯಾತ್ರೆಯನ್ನು ಪ್ರಾರಂಭಿಸಿದ್ದೇವೆ. ನೀವುಗಳು ನಮ್ಮ ಜೊತೆ ಬನ್ನಿ, ರಾಜ್ಯದಲ್ಲಿ ಈ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಪಾಠವನ್ನು ಕಲಿಸಬೇಕೆಂದು ನಿಶ್ಚಯ ಮಾಡಿದ್ದೇವೆ ಎಂದರು.
ಇವತ್ತಿನ ಸರಕಾರ ಹೇಗಿದೆ ಎನ್ನುವುದು ನಿಮಗೆ ಚೆನ್ನಾಗಿ ಗೊತ್ತಿದೆ. ಅಲಿಬಾಬ ಮತ್ತು 40 ಕಳ್ಳರು ಕಥೆಯನ್ನು ನೀವು ಕೇಳಿದ್ದೀರಿ ಅದರ ತದ್ರೂಪವೇ ಸಿದ್ದರಾಮಯ್ಯ ನವರ 40 ಡೋಂಗಿ ಮಂತ್ರಿಗಳು ಈ ರಾಜ್ಯದಲ್ಲಿರುವವರು ಎಂದು ಟೀಕಿಸಿದರು.
ಸರಕಾರದ ಖಜಾನೆಯನ್ನು ಲೂಟಿ ಹೊಡೆದಾಯಿತು, ಕೊಳ್ಳೆ ಹೊಡೆದಾಯಿತು. ಸರಕಾರದ ಖಜಾನೆ ಖಾಲಿಯಾಯಿತು. ಇನ್ನೆಲ್ಲಿಂದ ಕಳ್ಳತನ ಮಾಡೋದು? ಎಲ್ಲ ಜನರ ಕಿಸೆಗೆ ಕೈಹಾಕೋಣ ಅಲ್ಲಿಂದ ಕಳ್ಳತನ ಮಾಡೋಣ ಎಂದು ಹೇಳಿ ಬೆಲೆ ಏರಿಕೆಯನ್ನು ಮಾಡಿ ಖಜಾನೆ ತುಂಬಿ ಅಲ್ಲಿಂದ ಲೂಟಿ ಮಾಡುವ ಕೆಲಸ ಕಾರ್ಯಗಳನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಸರಕಾರವು 48 ಜನೋಪಯೋಗಿ ವಸ್ತುಗಳ ಮೇಲೆ ತೆರಿಗೆ ಹಾಕಿದೆ. ತೆರಿಗೆ ಹಾಕದೆ ಇರುವ ಎರಡು ಸ್ವತ್ತುಗಳು ಅಂದರೆ ಸಮುದ್ರ ತೆರೆಗಳು ಮತ್ತು ಉಸಿರಾಡುವ ಗಾಳಿ. ಅವುಗಳಿಗೆ ತೆರಿಗೆ ವಿಧಿಸಿರುವುದಿಲ್ಲ ಎಂದು ವ್ಯಂಗ್ಯವಾಡಿದರು.