ರಾಮೋಜಿ ಫಿಲ್ಮ್ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

Update: 2024-06-08 06:08 GMT

Ramoji Rao (Credit: X/@DealsDhamaka)

ಹೊಸದಿಲ್ಲಿ: ಇಟಿವಿ ನೆಟ್‍ವರ್ಕ್ ಮತ್ತು ರಾಮೋಜಿ ಫಿಲ್ಮ್ ಸಿಟಿ ಮುಖ್ಯಸ್ಥ ರಾಮೋಜಿ ರಾವ್ ಹೈದರಾಬಾದ್‍ನಲ್ಲಿ ಇಂದು ಮುಂಜಾನೆ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಅಧಿಕ ರಕ್ತದ ಒತ್ತಡ ಮತ್ತು ಉಸಿರಾಟ ತೊಂದರೆಯಿಂದಾಗಿ ಜೂನ್ 5ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಸುಕಿನಲ್ಲಿ ಅವರು ಕೊನೆಯುಸಿರೆಳೆದರು.

ಅವರ ಪಾರ್ಥಿಕವ ಶರೀರವನ್ನು ರಾಮೋಜಿ ಫಿಲ್ಮ್ ಸಿಟಯಲ್ಲಿರುವ ಅವರ ನಿವಾಸಕ್ಕೆ ಒಯ್ಯಲಾಗಿದ್ದು, ಹಲವು ಮಂದಿ ಪ್ರಮುಖ ರಾಜಕೀಯ ಮುಖಂಡರು ಮತ್ತು ಚಿತ್ರರಂಗದ ಗಣ್ಯರು ನಿವಾಸಕ್ಕೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ರಾಮೋಜಿರಾವ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. "ಅವರು ಭಾರತೀಯ ಮಾಧ್ಯಮವನ್ನು ಕ್ರಾಂತಿಕಾರಕವಾಗಿಸಿದ ದೂರದೃಷ್ಟಿಯ ವಯಕ್ತಿ. ಅವರ ಗಣನೀಯ ಕೊಡುಗೆಗಳು ಪತ್ರಿಕೋದ್ಯಮ ಮತ್ತು ಚಿತ್ರರಂಗವನ್ನು ಸಮೃದ್ಧಗೊಳಿಸಿದ್ದವು. ಮಾಧ್ಯಮ ಹಾಗೂ ಮನೋರಂಜನಾ ಉದ್ಯಮದಲ್ಲಿ ಅವರ ಅನುಶೋಧನೆ ಮತ್ತು ಶ್ರೇಷ್ಠತೆಗಳು ಹೊಸ ಮಾನದಂಡವನ್ನು ಸೃಷ್ಟಿಸಿದ್ದವು" ಎಂದು ಪ್ರಧಾನಿ ಎಕ್ಸ್ ಪೋಸ್ಟ್ ನಲ್ಲಿ ಬಣ್ಣಿಸಿದ್ದಾರೆ.

1936ರಲ್ಲಿ ಜನಿಸಿದ ರಾಮೋಜಿರಾವ್, ವಿಶ್ವದ ಅತಿದೊಡ್ಡ ಚಿತ್ರ ನಿರ್ಮಾಣ ಸೌಲಭ್ಯ ಎನಿಸಿದ ರಾಮೋಜಿ ಫಿಲ್ಮ್ ಸಿಟಿಯ ಮಾಲಕತ್ವದ ರಾಮೋಜಿ ಸಮೂಹದ ಮಾಲಕ. ಅತಿಹೆಚ್ಚು ಪ್ರಸಾರದ ತೆಲುಗು ದೈನಿಕ ಈನಾಡು ಪತ್ರಿಕೆಯ ಮುಖ್ಯಸ್ಥರೂ ಆಗಿದ್ದರು. 1980ರ ದಶಕದಲ್ಲಿ ಅವರು ತೆಲುಕುದೇಶಂ ಪಾರ್ಟಿಯ ಉಗಮದ ಸಂದರ್ಭದಲ್ಲಿ ಅವರು ಈನಾಡು ಪತ್ರಿಕೆ ಆರಂಭಿಸಿ ಬೆಂಬಲ ನೀಡಿದ್ದರು.

ಆಂಧ್ರದ ಮುಖ್ಯಮಂತ್ರಿಯಾಗಿದ್ದ ಎನ್.ಟಿ.ರಾಮರಾವ್ ಅವರಿಗೆ ಮತ್ತು ಚಂದ್ರಬಾಬು ನಾಯ್ಡು ಅವರಿಗೆ ನಿಕಟರಾಗಿದ್ದ ಅವರು, ಹಲವು ಮಂದಿ ಚಿತ್ರತಾರೆಯರು ಮತ್ತು ರಾಜಕಾರಣಿಗಳ ಜತೆಗೂ ಉತ್ತಮ ಸಂಬಂಧ ಹೊಂದಿದ್ದರು.

ಇಟಿವಿ ನೆಟ್‍ವರ್ಕ್ ಜತೆಗೆ ಅವರು ಉಷಾಕಿರಣ ಮೂವೀಸ್ ಎಂಬ ನಿರ್ಮಾಣ ಸಮಿತಿಯನ್ನೂ ಹೊಂದಿದ್ದು, ಎರಡು ಬಾರಿ ಫಿಲ್ಮ್‍ಫೇರ್ ಅವಾರ್ಡ್ ಗಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಹಮೀದ್ ಹಾಜಿ
ಭೋಜ ಪೂಜಾರಿ
ಡಾ. ಆಶಾ ಭಟ್