ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆಲುವು ಖಚಿತ : ಡಿ.ಕೆ.ಶಿವಕುಮಾರ್ ವಿಶ್ವಾಸ

Update: 2024-11-06 13:13 GMT

ಡಿ.ಕೆ.ಶಿವಕುಮಾರ್

ಹುಬ್ಬಳ್ಳಿ : ಶಿಗ್ಗಾಂವಿ ಕ್ಷೇತ್ರವನ್ನು ಕಾರ್ಯಕರ್ತರಿಗೆ ಬಿಟ್ಟುಕೊಡುತ್ತೇವೆ ಎಂದು ಹೇಳಿದ್ದರಂತೆ, ಕೊಟ್ಟ ಮಾತಿನಂತೆ ಬಿಜೆಪಿಯವರು ನಡೆದು ಕೊಳ್ಳಲಿಲ್ಲವಂತೆ. ಹೀಗಾಗಿ ಮತದಾರರು ಬಿಜೆಪಿ ಮೇಲೆ ಆಕ್ರೋಶಗೊಂಡಿದ್ದು, ಕಾಂಗ್ರೆಸ್ ಶಿಗ್ಗಾಂವಿಯಲ್ಲಿ ಗೆಲ್ಲುವುದು ಖಚಿತ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬುಧವಾರ ಶಿಗ್ಗಾಂವಿ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಗಳಿಸಿದ ಮತಕ್ಕಿಂತ ಹೆಚ್ಚಿನ ಮತಗಳಿಂದ ಈ ಉಪಚುನಾವಣೆಯನ್ನು ನಾವು ಗೆಲ್ಲುತ್ತೇವೆ ಎಂದು ಹೇಳಿದರು.

ಚುನಾವಣೆ ಹೊತ್ತಿನಲ್ಲಿ ಆರೋಪಗಳು ಸಾಮಾನ್ಯ :

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತನ ಹೆಸರನ್ನು ಬರೆದಿಟ್ಟು ಎಸ್ಡಿಎ ಅಧಿಕಾರಿ ಆತ್ಮಹತ್ಯೆ ಮಾಡಿರುವ ಪ್ರಕರಣದಿಂದ ಹಾಗೂ ಇತರೇ ಭ್ರಷ್ಟಾಚಾರ ಆರೋಪಗಳಿಂದ ಸರಕಾರಕ್ಕೆ ಮುಜುಗರವಾಗುತ್ತಿಲ್ಲವೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಹೊತ್ತಿನಲ್ಲಿ ಇಂತಹ ಆರೋಪಗಳು ಸಾಮಾನ್ಯ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಾರೆ. ಸಚಿವರ ಆಪ್ತರಾಗಲಿ, ನೀವಾಗಲಿ, ನಾನಾಗಲಿ, ರಸ್ತೆಯಲ್ಲಿ ಹೋಗುವ ಯಾರೇ ಆಗಿರಲಿ ಅವರ ವಿರುದ್ಧ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ನೀವು ನ್ಯಾಯಾಧೀಶರೇ? ತನಿಖಾಧಿಕಾರಿಗಳೇ? :

ಲೋಕಾಯುಕ್ತದವರು ಕೇವಲ 2 ಗಂಟೆಗಳ ಕಾಲ ಮುಖ್ಯಮಂತ್ರಿಯನ್ನು ವಿಚಾರ ನಡೆಸಿದರು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ನೀವು(ಮಾಧ್ಯಮದವರು) ನ್ಯಾಯಾಧೀಶರೇ? ತನಿಖಾಧಿಕಾರಿಗಳೇ? ವಿಚಾರಣೆ ವೇಳೆ ಯಾವ ಪ್ರಶ್ನೆಯನ್ನು ಕೇಳಿದರು ಎಂಬುದು ವಿಚಾರಣೆಗೆ ಒಳಪಟ್ಟವರಿಗೆ ಗೊತ್ತಿರುತ್ತದೆ. ಇದರ ಬಗ್ಗೆ ನೂರಾರು ಜನ ನೂರಾರು ರೀತಿ ಮಾತನಾಡುತ್ತಾರೆ. ಮತ್ತೆ ತನಿಖೆಗೆ ಕರೆಯಬಹುದಲ್ಲವೇ? ಇದರ ಬಗ್ಗೆ ನಿಮಗೆ ಏನು ಗೊತ್ತು? ಎಂದರು.

ಮುಖ್ಯಮಂತ್ರಿ ಬಗ್ಗೆ ಸಂತೋಷ ಪಡಬೇಕು :

ಮುಖ್ಯಮಂತ್ರಿ ಲೋಕಾಯುಕ್ತಕ್ಕೆ ಗೌರವ ಕೊಟ್ಟು, ಅಧಿಕಾರಿಗಳು ಕರೆದರು ಎಂದು ಅವರ ಕಚೇರಿಗೆ ಹೋಗಿ ಉತ್ತರ ಕೊಟ್ಟು ಬಂದಿದ್ದಾರೆ. ಕಾನೂನಿಗೆ ಗೌರವ ಕೊಡುವ ಮುಖ್ಯಮಂತ್ರಿ ರಾಜ್ಯದಲ್ಲಿ ಇದ್ದಾರೆ ಎಂದು ನೀವೆಲ್ಲರೂ ಸಂತೋಷ ಪಡಬೇಕು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಬಿಜೆಪಿಯವರಿಗೆ ಯಾರ ಮೇಲೆ ನಂಬಿಕೆಯಿದೆ? :

ಲೋಕಾಯುಕ್ತದವರು ಮತ್ತು ಮುಖ್ಯಮಂತ್ರಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಲೋಕಾಯುಕ್ತವನ್ನು ಯಾರ ಕಾಲದಲ್ಲಿ ನೇಮಕ ಮಾಡಲಾಗಿದೆ ಎಂಬುದು ತಿಳಿದಿದೆಯೇ? ಬಿಜೆಪಿ ಕಾಲದಲ್ಲಿ ನೇಮಕವಾದ ಅವರ ಬಗ್ಗೆ ಅವರಿಗೇ ನಂಬಿಕೆ ಇಲ್ಲ ಅಂದರೆ, ಇನ್ನು ಯಾರ ಮೇಲೆ ನಂಬಿಕೆ ಇದೆ ಅವರಿಗೆ ಎಂದು ಹೇಳಿದರು.

ಅಶೋಕ್ ವಿರುದ್ಧ ಕ್ರಮಕ್ಕೆ ಆಗ್ರಹ :

‘ಆರ್.ಅಶೋಕ್ ಮ್ಯಾಚ್ ಫಿಕ್ಸಿಂಗ್ ಎನ್ನುವ ಪದ ಬಳಸಿರುವುದು ನ್ಯಾಯಾಂಗ ಮತ್ತು ನ್ಯಾಯಪೀಠಕ್ಕೆ ಮಾಡಿರುವ ಅಪಮಾನ. ಇದು ಸಾಂವಿಧಾನಿಕ ಹುದ್ದೆಗಳಾದ ಲೋಕಾಯುಕ್ತ ಮತ್ತು ಅಧಿಕಾರಿಗಳ ಸ್ಥಾನಕ್ಕೆ ದೊಡ್ಡ ಅಗೌರವ. ಅಶೋಕ್ ನ್ಯಾಯಾಲಯಗಳ ವಿರುದ್ಧ ಹೀಗೆ ಮಾತನಾಡಬಾರದು. ತಾವೇ ಸಾಂವಿಧಾನಿಕ ಸ್ಥಾನದಲ್ಲಿ ಕುಳಿತು, ಮತ್ತೊಂದು ಸಾಂವಿಧಾನಿಕ ಹುದ್ದೆಯ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ. ಅಶೋಕ್ ಮೇಲೆ ಲೋಕಾಯುಕ್ತವು ಕ್ರಮ ತೆಗೆದುಕೊಳ್ಳಬೇಕು’

-ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News