ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ : ದಿಂಗಾಲೇಶ್ವರ ಸ್ವಾಮೀಜಿ ಘೋಷಣೆ
ಹುಬ್ಬಳ್ಳಿ : ಕೆಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಫಕೀರ್ ದಿಂಗಾಲೇಶ್ವರ ಮಹಾಸ್ವಾಮೀಜಿ ಘೋಷಿಸಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,"ಎರಡೂ ರಾಷ್ಟ್ರೀಯ ಪಕ್ಷಗಳು ಎಲೆಕ್ಷನ್ ಫಿಕ್ಸಿಂಗ್ ಮಾಡಿಕೊಂಡಿದೆ ಎಂದು ಜನರು ಮಾತನಾಡುತ್ತಿದ್ದಾರೆ. ಇದು ಜನರಿಗೆ ದ್ರೋಹ ಮಾಡಿದಂತೆ ಆಗಲಿದೆ. ಧರ್ಮದಲ್ಲಿ ರಾಜಕೀಯ ಇರಬಾರದು, ರಾಜಕೀಯದಲ್ಲಿ ಧರ್ಮ ಇರಬೇಕು ಎಂದು ಜನರು ಬಯಸಿದ್ದಾರೆ " ಎಂದು ಹೇಳಿದರು.
"ನೊಂದ ಜನರು ನಮ್ಮ ಜೊತೆಗೆ ನೋವು ತೋಡಿಕೊಂಡಿದ್ದರಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಕರ್ನಾಟಕದಲ್ಲಿ ಒಕ್ಕಲಿಗ, ಲಿಂಗಾಯತ ಸಮುದಾಯದ ಹೊರತುಪಡಿಸಿದರೆ ಕುರುಬ ಸಮುದಾಯ ದೊಡ್ಡದು, ಆದರೆ ಕುರುಬ ಸಮುದಾಯಕ್ಕೆ ಒಂದೇ ಒಂದು ಟಿಕೆಟ್ ಕೊಡಲಿಲ್ಲ. ಲಂಬಾಣಿ ಸಮುದಾಯಕ್ಕೆ ಟಿಕೆಟ್ ಕೊಡಲಿಲ್ಲ. ಈಶ್ವರಪ್ಪಗೆ ಬಿಜೆಪಿ ಟಿಕೆಟ್ ಕೊಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಹೈಕಮಾಂಡ್ ನಾಯಕರು ಆ ಸಮುದಾಯ ನಮಗೆ ಅವಶ್ಯಕತೆ ಇಲ್ಲ ಎಂದು ಹೇಳುತ್ತಾರೆ. ಬಹುದೊಡ್ಡ ಸಮುದಾಯವನ್ನು ಬಿಜೆಪಿ ಕಡೆಗಣಿಸಿದೆ. ಶೇಕಡಾ 2ರಷ್ಟು ಇರುವ ಸಮುದಾಯದ ನಾಯಕರಿಗೆ ಎರಡು ಕ್ಯಾಬಿನೆಟ್ ಹುದ್ದೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಪಸಿದರು.
ಪ್ರಹ್ಲಾದ್ ಜೋಷಿ ಅವರು ತಮ್ಮ ಸಮುದಾಯದ ಬೆಳವಣಿಗೆ ಅಷ್ಟೇ ನೋಡುತ್ತಾರೆ. ಅಲ್ಲದೆ, ನಮ್ಮ ಸಮುದಾಯವನ್ನು ಜೋಷಿ ತುಳಿದು ರಾಜಕಾರಣ ಮಾಡಿದ್ದಾರೆ. ಈಶ್ವರಪ್ಪ ಅವರಿಗೆ ಟಿಕೆಟ್ ತಪ್ಪಲು ಪ್ರಹ್ಲಾದ್ ಜೋಷಿ ಅವರೇ ಕಾರಣ ಎಂದು ಅವರು ಆರೋಪಿಸಿದರು.
ಲಿಂಗಾಯತರು ಹೆಚ್ಚಿರುವ ಕಡೆ ಪ್ರಹ್ಲಾದ್ ಜೋಶಿಯನ್ನು ನಿಲ್ಲಿಸಿದ್ದಾರೆ. ಅದರಂತೆ ಬ್ರಾಹ್ಮಣ ಪ್ರಾಬಲ್ಯ ಇರುವ ಕಡೆ ಲಿಂಗಾಯತ ಸೇರಿ ಇತರ ಸಮುದಾಯದವರನ್ನು ಯಾಕೆ ನಿಲ್ಲಿಸಲು ಮುಂದಾಗಲಿಲ್ಲ. ತೇಜಸ್ವಿ ಸೂರ್ಯ ಅವರನ್ನು ಇಲ್ಲಿ ನಿಲ್ಲಿಸುವ ಬದಲು ಸೋಮಣ್ಣಗೆ ಟಿಕೆಟ್ ನೀಡಿ, ತೇಜಸ್ವಿಗೆ ತುಮಕೂರಿಗೆ ಕಳಿಸಿದ್ದರೆ ಆಗ ಯಾರ ತಾಕತ್ತು ಎಷ್ಟು ಎಂಬದು ನೋಡಬಹುದಿತ್ತು ಎಂದರು.
ಕೊಪ್ಪಳ, ದಾವಣಗೆರೆ, ಹಾವೇರಿಯಲ್ಲಿ ಎರಡು ಮೂರು ಹಂತದಲ್ಲಿ ಲಿಂಗಾಯತ ಸಮುದಾಯ ಮುಗಿಸುವ ಕೆಲಸ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಇವರಾದರೆ ಐದು ಅವಧಿ ಹತ್ತು ಅವಧಿಯಾದರೂ ಸರಿ ಅರ್ಹರು ಎಂದು ತೋರಿಸಿಕೊಂಡ ಬರುತ್ತಿದ್ದಾರೆ. 99 ಉಪ ಪಂಗಡ ಲಿಂಗಾಯದದಲ್ಲಿ ಇವೆ, ಇದರಲ್ಲಿ 16 ಸಮುದಾಯ ಮಾತ್ರ ಕೇಂದ್ರದ ಒಬಿಸಿ ಪಟ್ಟಿಯಲ್ಲಿವೆ. ಇತರ ಒಳಪಂಗಡಗಳ ಸೇರಿಸುವ ಪ್ರಯತ್ನಕ್ಕೆ ಜೋಶಿ ಸಾಥ್ ನೀಡಿಲ್ಲ ಎಂದು ಆರೋಪಿಸಿದರು.
ನಮ್ಮ ನಾಯಕರು ಹಾಗೂ ಸಮಾಜವನ್ನು ತುಳಿದಾಳುವಲ್ಲಿ ಜೋಶಿ ಪಾತ್ರ ಬಹಳ ದೊಡ್ಡದಾಗಿದೆ. ಹಾವೇರಿ ಕ್ಷೇತ್ರದಲ್ಲಿ ಈಶ್ವರಪ್ಪ ಪುತ್ರನಿಗೆ ಅವಕಾಶ ವಂಚಿತರನ್ನಾಗಿ ಮಾಡಿದ್ದು ಜೋಶಿ. ಹಾಗಾಗಿ, ಅವರನ್ನು ನಂಬಬೇಡಿ ಎಂದು ಮೊದಲೇ ಈಶ್ವರಪ್ಪಗೆ ಹೇಳಿದ್ದೆ ಎಂದ ಅವರು, 20 ವರ್ಷಗಳ ಅಧಿಕಾರಾವಧಿಯಲ್ಲಿ ಧಾರವಾಡ ಮತ್ತು ಕರ್ನಾಟಕಕ್ಕೆ ಪ್ರಹ್ಲಾದ್ ಜೋಶಿ ಏನು ಮಾಡಿದರು ಎಂದು ಖಾರವಾಗಿ ಪ್ರಶ್ನಿಸಿದರು.