230 ಕ್ಷೇತ್ರಗಳಲ್ಲಿ ಕಣಕ್ಕಿಳಿದ ‘ಇಂಡಿಯಾʻ ಮೈತ್ರಿಕೂಟ ಅಧಿಕಾರಕ್ಕೆ ಬರಲು ಹೇಗೆ ಸಾಧ್ಯ? : ಪ್ರಹ್ಲಾದ್ ಜೋಶಿ

Update: 2024-04-13 12:36 GMT

ಹುಬ್ಬಳ್ಳಿ: ಲೋಕಸಭೆಯಲ್ಲಿ ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ಸಂಖ್ಯೆಗಿಂತ ಕಡಿಮೆ ಕ್ಷೇತ್ರದಲ್ಲಿ ಇಂಡಿಯಾ ಮೈತ್ರಿಕೂಟ ಸ್ಪರ್ಧೆ ಮಾಡಿದ್ದು, ಅಧಿಕಾರಕ್ಕೆ ಬರಲು ಹೇಗೆ ಸಾಧ್ಯ? ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ.50ರಷ್ಟು ಕಡಿಮೆ ಕ್ಷೇತ್ರಗಳಿಗೆ ಸ್ಪರ್ಧಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹಗಲುಗನಸು ಕಾಣುತ್ತಿದೆ. ಬಹುಮತದ ಸರಕಾರಕ್ಕೆ 272 ಸದಸ್ಯರ ಬಲ ಬೇಕು. ಆದರೆ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಸ್ಪರ್ಧಿಸಿದ್ದೆ 230 ಕ್ಷೇತ್ರಗಳಲ್ಲಿ ಎಂದರು.

ಇಂಡಿಯಾ ಹೊರತಾಗಿ 60-70 ಸ್ಪರ್ಧಿಗಳು ಕಣದಲ್ಲಿದ್ದಾರೆ. ಆದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 230 ಕ್ಷೇತ್ರಗಳ ಪೈಕಿ ಹೆಚ್ಚು ಅಂದರೆ 100 ಸ್ಥಾನಗಳನ್ನು ಗೆಲ್ಲಬಹುದು ಅಷ್ಟೇ ಎಂದು ಪ್ರಹ್ಲಾದ್ ಜೋಶಿ ಭವಿಷ್ಯ ನುಡಿದರು.

ಕಾಂಗ್ರೆಸ್ ಪಕ್ಷ 40 ಕ್ಷೇತ್ರಗಳಲ್ಲಿ ಮತ್ತು ಅದರ ಬೆಂಬಲಿತ ಅಂಗ ಪಕ್ಷಗಳು 60 ಸ್ಥಾನಗಳನ್ನು ಗೆದ್ದುಕೊಳ್ಳಬಹುದು. ಪರಿಸ್ಥಿತಿ ಹೀಗಿರುವಾಗ ಇವರಿಂದ ಸುಭದ್ರ ಸರಕಾರ ರಚನೆ ಹೇಗೆ ಸಾಧ್ಯವಾಗುತ್ತದೆ? ಎಂದು ಅವರು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News