ಹುಬ್ಬಳ್ಳಿ | 9ನೇ ತರಗತಿ ವಿದ್ಯಾರ್ಥಿಗೆ ಚಾಕು ಇರಿದ 10ನೇ ತರಗತಿ ವಿದ್ಯಾರ್ಥಿ
ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಚಾಕು ಇರಿದ ಪರಿಣಾಮ ಅಪ್ರಾಪ್ತ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ನಗರದ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಮೇಲೆ ಹಲ್ಲೆಯಾಗಿದ್ದು, ಅದೇ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಪರಿಣಾಮ ವಿದ್ಯಾರ್ಥಿಯ ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯವಾಗಿದ್ದು, ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಚಾರಣೆ ವೇಳೆ ಹತ್ತು ಸಾವಿರ ಸಾಲದ ಬಡ್ಡಿ ವಿಚಾರವಾಗಿ ಹಲ್ಲೆ ನಡೆದಿದೆ ಎಂಬ ವಿಚಾರ ತಿಳಿದುಬಂದಿದೆ.
ಈ ಮೊದಲು ಹಲ್ಲೆಗೆ ಒಳಗಾದ ಬಾಲಕನನ್ನು 10-12 ಜನರ ಗುಂಪು ಒತ್ತಾಯಪೂರ್ವಕವಾಗಿ ಕರೆದೊಯ್ದು ಮನಬಂದಂತೆ ಥಳಿಸಿ ಬಡ್ಡಿ, ಅಸಲು ಕೊಡುವಂತೆ ಪೀಡಿಸಿದ್ದಾರೆ . ಆ ಬಳಿಕ ಅಪ್ರಾಪ್ತನ ಪೋಷಕರನ್ನು ಕರೆಸಿ ವಿಷಯವನ್ನು ಗಮನಕ್ಕೆ ತಂದು, ಬಾಲಕನನ್ನು ಬಿಟ್ಟು ಕಳಿಸಿದ್ದಾರೆ. ಸ್ವಲ್ಪ ಸಮಯದ ಬಳಿಕ ಪುನಃ ಅಪ್ರಾಪ್ತನನ್ನು ಕರೆಸಿಕೊಂಡು ಚಾಕುವಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲ್ಲೆ ನಡೆಸಿದ ಆರೋಪಿ ಹಾಗೂ ಮತ್ತೆ ಕೆಲವರನ್ನು ವಶಕ್ಕೆ ಪಡೆದು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.