ನಾನು ನಾಮಪತ್ರ ಮಾತ್ರ ಹಿಂಪಡೆದಿದ್ದೇನೆ, ಆದರೆ ಧರ್ಮಯುದ್ದ ಮುಂದುವರೆಯುತ್ತದೆ: ದಿಂಗಾಲೇಶ್ವರ ಸ್ವಾಮೀಜಿ
ಹುಬ್ಬಳ್ಳಿ : ನಾಮಪತ್ರ ಸಲ್ಲಿಕೆ ಮಾಡಿದ ನಂತರವೂ ಎರಡು ಪಕ್ಷದ ನಾಯಕರು ನಮ್ಮ ಜೊತೆ ಚರ್ಚೆ ಮಾಡಿದರು. ನಿನ್ನೆ ಸಿಎಂ, ಡಿಸಿಎಂ ಮಾತಾಡಿದ್ದರು. ಎಲ್ಲ ವಿಚಾರಕ್ಕೆ ನಾನು ಉತ್ತರ ಕೊಟ್ಟಿದ್ದೆ. ಅಲ್ಲದೆ, ನಾಮಪತ್ರ ಹಿಂದೆ ತೆಗೆದುಕೊಂಡಾಕ್ಷಣ ನನ್ನ ಧರ್ಮ ಯುದ್ಧ ನಿಂತಿಲ್ಲ. ನಾನೇ ಹೋರಾಟದಿಂದ ಹಿಂದೆ ಸರಿದೆ ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ತಮ್ಮ ಉಮೇದುವಾರಿಗೆ ಹಿಂಪಡೆದಿರುವುದರ ಹಿಂದೆ ಯಾರದೇ ಕೈವಾಡಗಳಿಲ್ಲ. ಅಲ್ಲದೆ, ಚುನಾವಾಣಾ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಎರಡೂ ಪಕ್ಷದ ನಾಯಕರು ಮೊದಲಿನಿಂದಲೂ ನನ್ನೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದ್ದರು. ಆ ನಾಯಕರಿಗೆ ಸೂಕ್ತ ಉತ್ತರಗಳನ್ನು ನೀಡಿ ಮುಂದುವರೆದಿದ್ದೆ" ಎಂದು ತಿಳಿಸಿದರು.
"ನಮ್ಮ ಹಿರಿಯ ಗುರುಗಳು ನೀಡಿದ ಸೂಚನೆಯ ಮೇರೆಗೆ ಚುನಾವಣಾ ಕಣದಿಂದ ಹಿಂದೆ ಸರಿದಿದ್ದೇನೆ. ನಾಮಪತ್ರ ಹಿಂಪಡೆದಾಕ್ಷಣ ನನ್ನ ಹೋರಾಟ ನಿಲ್ಲುವುದಿಲ್ಲ. ನಾನು ಯಾವುದೇ ಪಕ್ಷದ ಪರ ಹಾಗೂ ವಿರುದ್ಧವಿಲ್ಲ" ಎಂದು ನುಡಿದರು.
ಎರಡು ಪಕ್ಷದವರೂ ತಮ್ಮನ್ನು ಬೆಂಬಲಿಸುವಂತೆ ಬೇಡಿಕೆ ಇಡುತ್ತಿದ್ದಾರೆ. ಹಿಂದೆ ಯಾರೂ ನನನ್ನು ಬೆಂಬಲಿಸಿದ್ದಾರೋ ಅವರ ಜೊತೆ ನಾನು ಸಭೆ ಮಾಡುತ್ತೇನೆ. ರಾಜಕೀಯದಲ್ಲಿ ಬದಲಾವಣೆ ಸರ್ವೆ ಸಾಮಾನ್ಯ. ನನ್ನನ್ನು ಹಿಂದಕ್ಕೆ ಸರಿಸೋ ವ್ಯಕ್ತಿ ರಾಜಕೀಯ ರಂಗದಲ್ಲಿ ಇಲ್ಲ ಎಂದಿದ್ದೆ, ಈಗಲೂ ಆ ಮಾತಿಗೆ ಬದ್ದ. ನಾನು ರಾಜಕೀಯ ನಾಯಕರ ಮಾತು ಕೇಳಿ ವಾಪಸ್ ಪಡೆದಿಲ್ಲ. ನನ್ನ ಗುರಿ ಮುಟ್ಟುವರೆಗೂ ಹೂಮಾಲೆ ಧರಿಸುವುದಿಲ್ಲ. ಧರ್ಮಯುದ್ದದಲ್ಲಿ ಜಯ ಸಿಗೋವರೆಗೂ ಮಾಲೆ ಧರಿಸಲ್ಲ ಎಂದು ಹೇಳಿದರು.