ಹುಬ್ಬಳ್ಳಿ ಫ್ಲೈ ಓವರ್ ಕಾಮಗಾರಿ ವೇಳೆ ಕಬ್ಬಿಣದ ರಾಡ್ ಬಿದ್ದು ಎಎಸ್ಸೈ ಮೃತ್ಯು ಪ್ರಕರಣ: 11 ಮಂದಿಯ ಬಂಧನ

Update: 2024-09-16 09:08 GMT

ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಇಲ್ಲಿನ ಹಳೆ ಕೋರ್ಟ್ ವೃತ್ತದ ಬಳಿ ಮೇಲ್ಸೇತುವೆ ಕಾಮಗಾರಿ ಸಂದರ್ಭ ಕಬ್ಬಿಣದ ರಾಡ್ ತಲೆಗೆ ಬಿದ್ದು ಎಎಸ್ಸೈ ನಾಬಿರಾಜ ದಯಣ್ಣ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ 11 ಮಂದಿಯನ್ನು ಉಪನಗರ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಕಾಮಗಾರಿಯ ಪರಿವೀಕ್ಷಕ ಹರ್ಷ ಹೊಸ ಗಾಣಿಗೇರ, ಎಂಜಿನಿಯರ್ ಗಳಾದ ಜಿತೇಂದ್ರ ಪಾಲ್ ಶರ್ಮಾ ಮತ್ತು ಭೂಪೇಂದ್ರ ಪಾಲ್ ಸಿಂಗ್, ಕ್ರೇನ್ ಚಾಲಕ ಅಸ್ಲಂ ಜಲೀಲ್ ಮಿಯಾ, ಸಿಬ್ಬಂದಿಯಾದ ಮುಹಮ್ಮದ್ ಮಿಯಾ, ಮುಹಮ್ಮದ್ ಮಸೂದ್, ಮುಹಮ್ಮದ್ ಹಾಜಿ, ರಿಝಾವಲ್ ಮನ್ಸೂರ್ ಅಲಿ, ಶಮೀಮ್ ಶೇಖ್, ಮುಹಮ್ಮದ್ ಖಯ್ಯೂಂ ಹಾಗೂ ಕಾರ್ಮಿಕ ಗುತ್ತಿಗೆದಾರ ಮುಹಮ್ಮದ್ ರಹ್ಮಾನ್ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.

‘ಗುತ್ತಿಗೆ ಪಡೆದ ದಿಲ್ಲಿಯ ಝಂಡು ಕಂಪೆನಿ ಕಾಮಗಾರಿ ಸ್ಥಳದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದರಿಂದ ಅವಘಡ ಸಂಭವಿಸಿದೆ. ಈ ಸಂಬಂಧ ಕಂಪೆನಿಯ ಮೂವರು ವ್ಯವಸ್ಥಾಪಕ ನಿರ್ದೇಶಕರು ಸೇರಿ 19 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಸದ್ಯ 11 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಇನ್ನೂ ಕೆಲವರನ್ನು ಬಂಧಿಸುವ ಪ್ರಕ್ರಿಯೆ ಬಾಕಿಯಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಉಪನಗರ ಠಾಣೆಯಿಂದ ಸವಾಯಿ ಗಂಧರ್ವ ಸಭಾಂಗಣಕ್ಕೆ ಕರ್ತವ್ಯಕ್ಕೆ ಹಾಜರಾಗಲು ಎಎಸ್ಸೈ ನಾಬಿರಾಜ ಸೆ.10ರಂದು ಬೈಕಿನಲ್ಲಿ ತೆರಳುತ್ತಿದ್ದರು. ಇದೇ ವೇಳೆ ಮೇಲ್ಸೇತುವೆ ಕಾಮಗಾರಿಗೆ ಕ್ರೇನ್ನಿಂದ ಕಬ್ಬಿಣದ ರಾಡ್ ಅನ್ನು ಮೇಲೆತ್ತಲಾಗುತ್ತಿತ್ತು. ಅದು ಆಕಸ್ಮಿಕವಾಗಿ ಜಾರಿ, ಕೆಳಗಡೆ ಬೈಕಿನಲ್ಲಿ ಸಂಚರಿಸುತ್ತಿದ್ದ ನಾಬಿರಾಜರ ತಲೆ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಆರು ದಿನಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರು, ರವಿವಾರ ಮೃತಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News