ನಕಲಿ ಗಾಂಧಿಗಳ ಪಾದ ನೆಕ್ಕಿದವರು ಹರಿಪ್ರಸಾದ್: ಜೋಶಿ ಟೀಕೆ

Update: 2024-10-12 15:22 GMT

ಹುಬ್ಬಳ್ಳಿ : ʼಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ನಕಲಿ ಗಾಂಧಿಗಳ ಪಾದ ನೆಕ್ಕಿದವರುʼ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಜೋಶಿ ಇವತ್ತಿಗೂ ಗೋಡ್ಸೆ ಪೂಜೆ ಮಾಡುತ್ತಾರೆ’ ಎಂಬ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ. ಈಗಿನ ಕಾಂಗ್ರೆಸ್ನಲ್ಲಿ ಇರೋರೆಲ್ಲಾ ನಕಲಿ ಗಾಂಧಿಗಳು. ಇಂತಹ ನಕಲಿ ಗಾಂಧಿಗಳ ಪಾದ ನೆಕ್ಕುವ ಹರಿಪ್ರಸಾದ್, ನಮ್ಮ ಬಗ್ಗೆ ಹೇಳೋದೇನುʼ ಎಂದು ತರಾಟೆ ತೆಗೆದುಕೊಂಡರು.

ಹರಿಪ್ರಸಾದ್ ಮೊದಲು ತಮ್ಮ ಯೋಗ್ಯತೆಯನ್ನು ಅರಿಯಲಿ. ಹಿಂದೆ ಸಿಎಂ ಸಿದ್ದರಾಮಯ್ಯ ಚಡ್ಡಿ-ನಿಕ್ಕರ್ ಬಗ್ಗೆ ಮಾತನಾಡಿದ್ರು, ಆಗಲೇ ಸಿಎಂ ಇವರನ್ನು ಹೊರ ಹಾಕಲು ತಯಾರಾಗಿದ್ದರು. ಸಿದ್ದರಾಮಯ್ಯ ನಿಕ್ಕರ್ ಹಾಕಲ್ಲ ಎಂದೆಲ್ಲ ಹೇಳಿದಂತಹ ಈ ವ್ಯಕ್ತಿ ಇದೀಗ ಸಿಎಂ ಪರ ಧ್ವನಿ ಎತ್ತುತ್ತಿದ್ದಾರೆ. ಬಹುಶಃ ಸಿಎಂ ನಾಲ್ವರನ್ನು ತೆಗೆದು ಹಾಕಿ ಹರಿಪ್ರಸಾದ್‍ಗೆ ಸಚಿವ ಸ್ಥಾನ ಕೊಡುವುದಾಗಿ ಹೇಳಿರಬೇಕು? ಎಂದು ಜೋಶಿ ಛೇಡಿಸಿದರು.

ಕಾಂಗ್ರೆಸ್ ನಾಯಕರು ಹೀಗೆಲ್ಲ ಮಾತನಾಡುತ್ತಲೇ ದೇಶದಲ್ಲಿ ತಿರಸ್ಕೃತಗೊಳ್ಳುತ್ತಿದ್ದಾರೆ. ಬಿ.ಕೆ.ಹರಿಪ್ರಸಾದ್ ಮೊದಲು ದೇಶದಲ್ಲಿ ತಮ್ಮ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ನೋಡಿಕೊಳ್ಳಲಿ. ಬಿಜೆಪಿ ಯಾವತ್ತೂ ಗಾಂಧಿ, ಸರ್ದಾರ್ ಪಟೇಲ್ ಅವರಂತಹ ಮಹಾನ್ ನಾಯಕರನ್ನು ಗೌರವದಿಂದಲೇ ಕಾಣುತ್ತಿದೆ. ಎಲ್ಲರಿಗೂ ಸಮಾನ ಗೌರವವನ್ನೇ ಕೊಡುತ್ತಿದೆ. ಬಿಜೆಪಿ ಅಸಲಿ ಗಾಂಧಿಗಳಿಗೆ, ಗಾಂಧಿವಾದಿಗಳಿಗೆ ಯಾವತ್ತೂ ಗೌರವ ನೀಡುತ್ತದೆ. ನಕಲಿ ಗಾಂಧಿಗಳಿಗಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News