ಮುಂದಾಲೋಚನೆ ಇಲ್ಲದ ಗ್ಯಾರಂಟಿ, ಆರ್ಥಿಕ ಹೊರೆ ತಡೆಯಲು ಪೆಟ್ರೋಲ್-ಡಿಸೇಲ್ ದರ ಏರಿಕೆ : ಪ್ರಹ್ಲಾದ್ ಜೋಶಿ ಟೀಕೆ
Update: 2024-06-16 10:27 GMT
ಹುಬ್ಬಳ್ಳಿ: ರಾಜ್ಯ ಸರ್ಕಾರ ಮುಂದಾಲೋಚನೆ ಇಲ್ಲದೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಈಗ ಆರ್ಥಿಕ ಹೊರೆ ತಡೆಯಲು ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಮಾಡಿದ್ದಾರೆ. ದಿನನಿತ್ಯದ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರ ಗ್ಯಾರೆಂಟಿಯಿಂದ ಉಚಿತ ಕೊಡುತ್ತೇವೆ ಎಂದು ದರ ಏರಿಕೆ ಮಾಡಿದ್ದು, ಇದು ಜನಸಾಮಾನ್ಯರ ಜೇಬಿಗೆ ಹೊರೆಯಾಗಿದೆ. ಪೆಟ್ರೋಲ್ ಗೆ ಮೂರೂವರೆ ರೂಪಾಯಿ ಹೆಚ್ಚು ಮಾಡಿದ್ದೀರಿ, ಇದರಿಂದ ಬಸ್ ದರ, ಹಾಲಿನ ದರ, ಅಕ್ಕಿ, ಎಲ್ಲದರ ದರ ಹೆಚ್ಚಾಗುತ್ತದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಜನ ಕಾಂಗ್ರೆಸ್‌ಗೆ ಪಾಠ ಕಲಿಸಿದ್ದಾರೆ. ದ್ವೇಷ ಸಾಧಿಸಲು ಈ ರೀತಿ ಬೆಲೆ ಏರಿಕೆ ಮಾಡಿದ್ದಾರೆ. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಸಿದುಕೊಂಡಿದ್ದಾರೆ. ನಾವು ಕಾಂಗ್ರೆಸ್ ಸರ್ಕಾರದ ವಿರುದ್ಧ ಉಗ್ರ ಸ್ವರೂಪದ ಹೋರಾಟ ಮಾಡುತ್ತೇವೆ ಎಂದರು.