ಚುನಾವಣಾ ಸೀಸನ್: ಸಬ್ಸಿಡಿಯಿಂದಾಗಿ ಎಲ್ ಪಿಜಿಗೆ ದಾಖಲೆ ಬೇಡಿಕೆ

Update: 2023-11-08 03:12 GMT

Photo: PTI ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಚುನಾವಣಾ ಸೀಸನ್ ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅಧಿಕ ಸಬ್ಸಿಡಿ ದೊರಕುತ್ತಿರುವ ಕಾರಣದಿಂದಾಗಿ ಅಡುಗೆ ಅನಿಲ ಸಿಲಿಂಡರ್ ಗಳ ಮರು ಭರ್ತಿ ಇತ್ತೀಚಿನ ತಿಂಗಳುಗಳಲ್ಲಿ ದಾಖಲೆ ಮಟ್ಟ ತಲುಪಿದೆ.

ಕೇಂದ್ರ ಸರ್ಕಾರ 9.6 ಕೋಟಿ ಉಜ್ವಲ ಫಲಾನುಭವಿಗಳಿಗೆ 200 ರೂಪಾಯಿ ಸಬ್ಸಿಡಿಯನ್ನು ಘೋಷಿಸಿ, ಬಳಿಕ ಅದನ್ನು 300 ರೂಪಾಯಿಗೆ ಹೆಚ್ಚಿಸಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ನಲ್ಲಿ ದೈನಿಕ ಮರುಭರ್ತಿ ಪ್ರಮಾಣ 11 ಲಕ್ಷವನ್ನು ತಲುಪಿದೆ.

ಅಕ್ಟೋಬರ್ ತಿಂಗಳಿನಲ್ಲಿ ದೈನಿಕ ಸಿಲಿಂಡರ್ ಮರುಭರ್ತಿ ಪ್ರಮಾಣ 10.3 ಲಕ್ಷ ಆಗಿದ್ದು, ಚುನಾವಣಾ ಪೂರ್ವದಲ್ಲಿ ಹಲವು ರಾಜ್ಯಗಳು ಕೂಡಾ ಎಲ್ ಪಿಜಿ ಸಬ್ಸಿಡಿ ಘೋಷಿಸಿರುವ ಹಿನ್ನೆಲೆಯಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. 2020ರಲ್ಲಿ ಕೋವಿಡ್-19 ಪರಿಹಾರ ಪ್ಯಾಕೇಜ್ ನಲ್ಲಿ ಪ್ರಯೋಜನಗಳು ಲಭ್ಯವಾಗುತ್ತಿದ್ದ ಹಿನ್ನೆಲೆಯಲ್ಲಿ ಸರಾಸರಿ ಬಳಕೆ ಹೆಚ್ಚಿತ್ತು.

ಉಜ್ವಲ ಫಲಾನುಭವಿಗಳಿಗೆ ದೀಪಾವಳಿ ಕೊಡುಗೆಯಾಗಿ ಉತ್ತರ ಪ್ರದೇಶ ಸರ್ಕಾರ ಉಚಿತ ಸಿಲಿಂಡರ್ ಗಳನ್ನು ನೀಡಿದ ಹಿನ್ನೆಲೆಯಲ್ಲಿ ಬೇಡಿಕೆ ಗಣನೀಯವಾಗಿ ಹೆಚ್ಚಿದೆ. ವಿಧಾನಸಭಾ ಚುನಾವಣೆ ನಡೆಯುತ್ತಿರುವ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಮಹಿಳೆಯರಿಗೆ 450 ರೂಪಾಯಿ ದರದಲ್ಲಿ ಸಿಲಿಂಡರ್ ಒದಗಿಸುತ್ತಿದೆ. ರಾಜಸ್ಥಾನ, ಛತ್ತೀಸ್ಗಢ ಮತ್ತು ಮಧ್ಯಪ್ರದೇಶದಲ್ಲಿ 500 ರೂಪಾಯಿ ದರದಲ್ಲಿ ಸಿಲಿಂಡರ್ ಪೂರೈಸುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದೆ.

ಇದುವರೆಗೆ ಪ್ರತಿ ಕುಟುಂಬದ ವಾರ್ಷಿಕ ಸರಾಸರಿ ಸಿಲಿಂಡರ್ ಮರುಭರ್ತಿ ಪ್ರಮಾಣ 3.7 ಇದ್ದರೆ ಈ ವರ್ಷ ಅದು 4.5 ರಿಂದ 5ಕ್ಕೆ ಹೆಚ್ಚುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News