ಗದಗ | ʼಗೃಹಲಕ್ಷ್ಮಿʼ ಹಣದಿಂದ ಬೋರ್‌ವೆಲ್ ಕೊರೆಸಿದ ಅತ್ತೆ-ಸೊಸೆ

Update: 2024-12-14 15:02 GMT

 ʼಗೃಹಲಕ್ಷ್ಮಿʼ ಹಣದಿಂದ ಬೋರ್‌ವೆಲ್ ಕೊರೆಸಿದ ಅತ್ತೆ-ಸೊಸೆ

ಗದಗ : ರಾಜ್ಯ ಸರಕಾರ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ನೀಡುತ್ತಿರುವ 2 ಸಾವಿರ ರೂ. ಹಣವನ್ನು ಕೂಡಿಟ್ಟು ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಮಾಲಧಾರ ಓಣಿಯ ಅತ್ತೆ ಹಾಗೂ ಸೊಸೆ ಕೊಳವೆ ಬಾವಿ ಕೊರೆಸಿದ್ದಾರೆ.

ಗಜೇಂದ್ರಗಡ ಪಟ್ಟಣದ ನಿವಾಸಿಯಾಗಿರುವ ಅತ್ತೆ ಮಾಬುಬೀ‌ ಮಾಲಧಾರ್, ಸೊಸೆ ರೋಷನ್ ಬೇಗಂ‌ ಮಾಲಧಾರ್ ಸೇರಿಕೊಂಡು ತಮ್ಮ ಜಮೀನಿನಲ್ಲಿ ಬೋರ್‌ವೆಲ್‌ ಕೊರೆಸಿದ್ದಾರೆ.

ಗೃಹಲಕ್ಷ್ಮಿ ಹಣದಲ್ಲಿ ಮಹಿಳೆಯರು ತಮಗೆ ಹಾಗೂ ಕುಟುಂಬಕ್ಕೆ ಅನುಕೂಲವಾಗುವ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೆಲವೊಂದು ಗ್ರಾಮದಲ್ಲಿ ಮಹಿಳೆಯರು ಕೂಡಿಕೊಂಡು ಗೃಹಲಕ್ಷ್ಮಿ ಹಣದಿಂದ ದೇವಸ್ಥಾನಕ್ಕೆ ರಥ, ಹಿಟ್ಟಿನ ಗಿರಣಿ, ಗ್ರಂಥಾಲಯ ನಿರ್ಮಿಸಿಕೊಟ್ಟ ಉದಾಹರಣೆಗಳು ಸಹ ಇದೆ.

ಇದೀಗ ಅತ್ತೆ-ಸೊಸೆ‌ ಸೇರಿಕೊಂಡು ಗೃಹಲಕ್ಷ್ಮಿ ಹಣದಿಂದ ತಮ್ಮ ಜಮೀನಿನಲ್ಲಿ ಬೋರ್ ವೆಲ್ ಕೊರೆಸುವ ಮೂಲಕ ಸುದ್ದಿಯಾಗಿದ್ದಾರೆ. ಇವರಿಬ್ಬರೂ ಕೂಡಿಟ್ಟ ಹಣ ಒಟ್ಟು 44 ಸಾವಿರ ರೂ.ಆಗಿದೆ. ಬೋರ್ ವೆಲ್ ಕೊರೆಸಲು ಒಟ್ಟು 60 ಸಾವಿರ ರೂ. ಖರ್ಚು ಆಗುತ್ತದೆ. ಅದರಲ್ಲಿ ಅತ್ತೆ-ಸೊಸೆ‌ ಕೂಡಿಟ್ಟ ಗೃಹಲಕ್ಷ್ಮಿ ಯೋಜನೆಯ ಹಣ 44 ಸಾವಿರ ರೂ. ಈ ಹಣವನ್ನು ಬೋರ್‌ವೆಲ್ ಕೊರೆಸಲು ತಮ್ಮ ಮಗನಿಗೆ ನೀಡಿದ್ದು, ಉಳಿದ ಹಣವನ್ನು ಇವರ ಮಗ ಕಟ್ಟಿ, ಬೋರ್‌ವೆಲ್‌ ಕೊರೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಗೃಹ ಲಕ್ಷೀ ಯೋಜನೆಯಿಂದ ತುಂಬಾ ಅನುಕೂಲವಾಗಿದ್ದು, ರಾಜ್ಯ ಸರಕಾರಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಅತ್ತೆ-ಸೊಸೆಗೆ ಡಿ.ಕೆ.ಶಿವಕುಮಾರ್​ ಶ್ಲಾಘನೆ :

ಟೀಕೆಗಳು ಸಾಯ್ತವೆ, ಕೆಲಸಗಳು ಉಳಿತ್ತವೆ. ವಿರೋಧ ಪಕ್ಷಗಳು ನಮ್ಮ ಗೃಹಲಕ್ಷ್ಮಿ ಯೋಜನೆಯಿಂದ ಅತ್ತೆ, ಸೊಸೆ ನಡುವೆ ಜಗಳ ಉಂಟಾಗುತ್ತದೆ ಎಂದು ಟೀಕೆ ಮಾಡಿದ್ದರು. ಆದರೆ ವಾಸ್ತವವೇ ಬೇರೆ. ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಮಾಲಧಾರ ಓಣಿಯ ಅತ್ತೆ ಹಾಗೂ ಸೊಸೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ನೀಡುತ್ತಿರುವ 2000 ರೂ. ಹಣವನ್ನು ಕೂಡಿಟ್ಟು ಕೊಳವೆ ಬಾವಿ ಕೊರೆಸಿದ್ದಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎನ್ನುವುದಕ್ಕೆ ಇದೊಂದು ನಿದರ್ಶನವಾಗಿದೆ. ನಮ್ಮ ದೃಢಸಂಕಲ್ಪ ಜನಪರವಾಗಿದ್ದು, ಗ್ಯಾರಂಟಿಗಳಿಂದ ಜನರಿಗೆ ಹೆಚ್ಚು ಅನುಕೂಲವಾಗಿದೆ ಎನ್ನುವ ಸಾರ್ಥಕತೆ ಇದೆ.

ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News