ಬೆಲೆ ಏರಿಕೆಯ ಪರಿಣಾಮವಾಗಿ ಕರ್ನಾಟಕವು ಅತ್ಯಂತ ದುಬಾರಿ ರಾಜ್ಯ ಎನ್ನುವ ಸ್ಥಿತಿಗೆ ತಲುಪಿದೆ : ವಿಜಯೇಂದ್ರ

Update: 2025-04-22 13:28 IST
ಬೆಲೆ ಏರಿಕೆಯ ಪರಿಣಾಮವಾಗಿ ಕರ್ನಾಟಕವು ಅತ್ಯಂತ ದುಬಾರಿ ರಾಜ್ಯ ಎನ್ನುವ ಸ್ಥಿತಿಗೆ ತಲುಪಿದೆ : ವಿಜಯೇಂದ್ರ
  • whatsapp icon

ಗದಗ: ಜನಾಕ್ರೋಶ ಯಾತ್ರೆಯು ಎರಡು ಹಂತಗಳನ್ನು ಮುಗಿಸಿದ್ದು, ಇಂದು ಗದಗದಿಂದ ಮತ್ತೆ ಆರಂಭವಾಗಲಿದೆ. ಎಲ್ಲ ಜಿಲ್ಲೆಗಳಲ್ಲಿ ಜನಾಕ್ರೋಶ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತ ಬರುತ್ತಿದೆ. ಬೆಲೆ ಏರಿಕೆಯ ಪರಿಣಾಮವಾಗಿ ಕರ್ನಾಟಕವು ಅತ್ಯಂತ ದುಬಾರಿ ರಾಜ್ಯ ಎನ್ನುವ ಸ್ಥಿತಿಗೆ ತಲುಪಿದೆ. ಭ್ರಷ್ಟಾಚಾರವು ಮಿತಿ ಮೀರಿ ಹೋಗಿದೆ. ವಾಲ್ಮೀಕಿ ನಿಗಮದಲ್ಲಿ ಹಗರಣ ಸಂಬಂಧ ಬಿಜೆಪಿ ಹೋರಾಟ ಕೈಗೆತ್ತಿಕೊಂಡ ಪರಿಣಾಮವಾಗಿ ಸಚಿವರೂ ರಾಜೀನಾಮೆ ಕೊಟ್ಟಿದ್ದರು ಎಂದು ನೆನಪಿಸಿದರು.

ಮೈಸೂರಿನ ಮುಡಾ ಹಗರಣದಲ್ಲಿ ನಾನು ತಪ್ಪೆಸಗಿಲ್ಲ, ತೇಜೋವಧೆ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡುತ್ತಿದ್ದರು. ಅದೇ ಸಿದ್ದರಾಮಯ್ಯನವರ ಕುಟುಂಬವು ಮುಖ್ಯಮಂತ್ರಿಗಳ ಅಂದಾಜು ಪ್ರಕಾರ 62 ಕೋಟಿ ಬೆಲೆಬಾಳುವ 14 ನಿವೇಶನಗಳನ್ನು ಯಾವುದೇ ಷರತ್ತಿಲ್ಲದೆ ವಾಪಸ್ ಮಾಡಿದ್ದಾರೆ. ಸಿದ್ದರಾಮಯ್ಯನವರು ಕ್ಲೀನ್ ರಾಜಕಾರಣಿ ಅಲ್ಲ, ಭ್ರಷ್ಟ ರಾಜಕಾರಣಿ ಎಂಬುದು ಇದರಿಂದ ಗೊತ್ತಾಗಿದೆ ಎಂದು ವಿಶ್ಲೇಷಿಸಿದರು.

ದೇಶಕ್ಕೆ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿದ ರಾಹುಲ್‌ :

ರಾಹುಲ್ ಗಾಂಧಿಯವರು ನಿನ್ನೆ ಅಮೆರಿಕದಲ್ಲಿ ಭಾರತಕ್ಕೆ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ. ಆ ಪುಣ್ಯಾತ್ಮ ರಾಹುಲ್ ಗಾಂಧಿಗೆ ಹೊರದೇಶಕ್ಕೆ ಹೋದಾಗ ದೇಶದ ಬಗ್ಗೆ ಹೇಗೆ ನಡೆದುಕೊಳ್ಳಬೇಕು ಎಂಬುದು ತಿಳಿದಿಲ್ಲ ಎಂದು ಆಕ್ಷೇಪಿಸಿದರು. ಅಲ್ಲಿ ನಿಂತು ಇಲ್ಲಿನ ಚುನಾವಣಾ ಪ್ರಕ್ರಿಯೆ ಬಗ್ಗೆ ಮಾತನಾಡಿದ್ದೂ ಅಲ್ಲದೆ, ಸಂವಿಧಾನಾತ್ಮಕ ಸಂಸ್ಥೆಯಾದ ಚುನಾವಣಾ ಆಯೋಗದ ಕುರಿತು ಟೀಕಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕಾಂಗ್ರೆಸ್ ಗೆದ್ದಾಗ ಒಂದು ಮಾನದಂಡ :

ರಾಹುಲ್ ಅವರಿಗೆ ಮಹಾರಾಷ್ಟ್ರದಲ್ಲಿ ಹಿನ್ನಡೆ ಆಗಿದ್ದರೆ ಸಂಸತ್ತಿನಲ್ಲಿ ಮಾತನಾಡಬಹುದಿತ್ತು. ಮಹಾರಾಷ್ಟ್ರದಲ್ಲಿ ಚುನಾವಣಾ ಆಯೋಗವು ಬಿಜೆಪಿಗೆ ಸಹಕರಿಸಿದ್ದರೆ, ಕಾಂಗ್ರೆಸ್ಸಿಗೆ ಮೋಸ ಆಗಿದ್ದರೆ, ಹಿಂದೆ ತೆಲಂಗಾಣ ರಾಜ್ಯದಲ್ಲೂ ಹಾಗೆ ಮಾಡಬಹುದಿತ್ತಲ್ಲವೇ? ಎಂದು ಬಿ.ವೈ.ವಿಜಯೇಂದ್ರ ಅವರು ಕೇಳಿದರು.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದೆ. ಅಲ್ಲೂ ಬಿಜೆಪಿ ಅಧಿಕಾರಕ್ಕೆ ಬರಬಹುದಿತ್ತು. ತೆಲಂಗಾಣದಲ್ಲಿ ಗೆದ್ದಾಗ ಒಂದು ಮಾನದಂಡ. ಒಂದು ರೀತಿಯ ಹೇಳಿಕೆ ಕೊಡುತ್ತಾರೆ. ಮಹಾರಾಷ್ಟ್ರದಲ್ಲಿ ಸೋತಾಗ ಅನುಮಾನ ಆರಂಭವಾಗುತ್ತದೆ. ಅದನ್ನು ಅಮೆರಿಕದಲ್ಲಿ ಮಾತನಾಡುವುದು ಮೂರ್ಖತನದ ಪರಮಾವಧಿ ಎಂದು ತಿಳಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News