ಗದಗ ವೈದ್ಯಕೀಯ ಸಂಸ್ಥೆಗೆ ಕೆ.ಎಚ್.ಪಾಟೀಲ್ ಹೆಸರು ನಾಮಕರಣ: ಸಿಎಂ ಸಿದ್ದರಾಮಯ್ಯ

Update: 2025-03-16 21:19 IST
ಗದಗ ವೈದ್ಯಕೀಯ ಸಂಸ್ಥೆಗೆ ಕೆ.ಎಚ್.ಪಾಟೀಲ್ ಹೆಸರು ನಾಮಕರಣ: ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ

  • whatsapp icon

ಬೆಂಗಳೂರು: ಸತ್ಯಸಂಧತೆ, ಸರಳತೆ, ಧೈರ್ಯ ಪರಿಶ್ರಮಗಳ ಸಾಕಾರಮೂರ್ತಿಯಾಗಿದ್ದ ಮಾಜಿ ಸಚಿವ ಕೆ.ಎಚ್.ಪಾಟೀಲ್ ಅವರ ಹೆಸರನ್ನು ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ನಾಮಕರಣ ಮಾಡಲು ನಮ್ಮ ಸರಕಾರ ಕ್ರಮವಹಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ರವಿವಾರ ಗದಗ ಜಿಲ್ಲೆಯಲ್ಲಿ ಏರ್ಪಡಿಸಿದ್ದ ಮಾಜಿ ಸಚಿವ ಕೆಎಚ್ ಪಾಟೀಲ್ ಅವರ ಜನ್ಮಶತಮಾನೋತ್ಸವ ಮತ್ತು ಗದಗ ಕೋ ಆಪರೇಟೀವ್ “ಕಾಟನ್ ಸೇಲ್ಸ್ ಸೊಸೈಟಿಯ ನೂತನ ಕಟ್ಟಡ”ದ ಉದ್ಘಾಟನಾ ಸಮಾರಂಭಕ್ಕೆ ವೈದ್ಯಕೀಯ ಕಾರಣಗಳಿಂದಾಗಿ ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆ ಪತ್ರದ ಮೂಲಕ ಸಿದ್ದರಾಮಯ್ಯ ಕೆಎಚ್ ಪಾಟೀಲ್‍ರ ಕೊಡುಗೆಗಳನ್ನು ಸ್ಮರಿಸಿದ್ದಾರೆ.

ಗದುಗಿನ ಹುಲಕೋಟಿಯ ಗ್ರಾಮೀಣ ಸೊಗಡಿನೊಂದಿಗೆ ಬೆಳೆದ ಪಾಟೀಲರು ಸಹಕಾರಿ ಧುರೀಣರಾಗಿ ಬೆಳದ ಪರಿ ಅನನ್ಯ. ಅವರು ವ್ಯಾವಹಾರಿಕ ಅರ್ಥದ ರಾಜಕಾರಣಿಯಾಗಿರಲಿಲ್ಲ ಬದಲಾಗಿ ಅವರೊಬ್ಬ ದಾರ್ಶನಿಕ ಧುರೀಣರಾಗಿದ್ದರು. ರಾಜಕಾರಣಿಗಳು ಮುಂದಿನ ಚುನಾವಣೆಯ ಬಗ್ಗೆ ಯೋಚಿಸಿದರೆ, ದಾರ್ಶನಿಕ ಮುಂದಿನ ಜನಾಂಗದ ಬಗ್ಗೆ ಯೋಚಿಸುತ್ತಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೆ.ಎಚ್.ಪಾಟೀಲರು, ಭವಿಷ್ಯವನ್ನು ಉತ್ತಮಗೊಳಿಸುವ ರೈತರ ಹಿತ ಕಾಪಾಡುವ, ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡುವ ಆಶಯವನ್ನು ಸದಾ ಹೊಂದಿದ್ದರು. ತಮ್ಮ ಆದರ್ಶಗಳಿಂದಾಗಿ ಅವರು ಇತರರಿಗೆ ಅನುಕರಣೀಯರಾಗಿದ್ದರು.ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪಾಟೀಲರು, ಸಂಘಟನಾ ಚತುರರು ಹಾಗೂ ಆಡಳಿತದಲ್ಲಿ ನಿಪುಣರಾಗಿದ್ದರು. ದೇಶದ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರವಾಗಿದ್ದು, ಈ ಕ್ಷೇತ್ರಕ್ಕೆ ಗದುಗಿನ ಗ್ರಾಮವೊಂದರಲ್ಲೇ ಮುನ್ನುಡಿ ಬರೆಯಲಾಗಿದ್ದು ವಿಶೇಷ ಎಂದು ಸಿಎಂ ತಿಳಿಸಿಸಿದ್ದಾರೆ.

ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗಾಗುತ್ತಿದ್ದ ಶೋಷಣೆ ತಡೆಯಲು ಹಲವು ಅನುಕರಣೀಯ ಕ್ರಮಗಳನ್ನು ಕೈಗೊಂಡರು. ಅಂತೆಯೇ, ಎಲ್ಲ ಹಳ್ಳಿಗಳಿಗೆ ಉಗ್ರಾಣ ಕಟ್ಟಿಸಿದ್ದರು. ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆ, ಕೃಷಿಯಲ್ಲಿ ನೂತನ ತಂತ್ರಜ್ಞಾನ ಬಳಕೆ, ಮಣ್ಣು ಮತ್ತು ನೀರಿನ ಸಂರಕ್ಷಣೆ, ಸಾವಯವ ಕೃಷಿ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ, ಕೃಷಿಕರಿಗೆ ತರಬೇತಿಯಂತಹ ಕಾರ್ಯಕ್ರಮಗಳು, ಪಾಟೀಲರ ರೈತಪರ ಕಾಳಜಿಗೆ ಕನ್ನಡಿ ಹಿಡಿದಿವೆ.

ಕೈಗಾರಿಕೆ, ಶಾಲಾ-ಕಾಲೇಜು, ಆಸ್ಪತ್ರೆಗಳನ್ನು ನಿರ್ಮಿಸಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅವರು ಕಾರಣಕರ್ತರಾದರು.ಆರ್ಥಿಕವಾಗಿ ಹಿಂದುಳಿದ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಸಂಕಲ್ಪದೊಂದಿಗೆ ಅನೇಕ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿರುವ ಹೆಗ್ಗಳಿಕೆ ಪಾಟೀಲರದ್ದು. 1970ರ ದಶಕದಲ್ಲಿ ದೇವರಾಜ ಅರಸು ಅವರ ನೇತೃತ್ವದ ಸಂಪುಟದಲ್ಲಿ ಕೆಎಚ್ ಪಾಟೀಲರು ಅರಣ್ಯ ಸಚಿವರಾಗಿದ್ದರು. ಮೈಸೂರಿನ ಎಚ್‍ಡಿ ಕೋಟೆಯಲ್ಲಿ ಜನರಿಂದ ಅವ್ಯಾಹತವಾಗಿ ಅರಣ್ಯ ನಾಶವನ್ನು ಕಂಡ ಪಾಟೀಲರು ಮರ ಕಡಿಯುವುದನ್ನು ನಿಷೇಧಿಸಲು ಆ ಸಂದರ್ಭದಲ್ಲಿ ಬಿಗಿ ಕಾನೂನುಗಳನ್ನು ತಂದರು ಎಂದು ಅವರು ಹೇಳಿದ್ದಾರೆ.

ಅಂದಿನ ಕಾಲದಲ್ಲಿ ಕಾಡು ಭೂಮಿಯ ಮೇಲೆ ಅರಣ್ಯ ಸಚಿವರಾಗಿದ್ದವರಿಗಿದ್ದ ವ್ಯಕ್ತಿಗತ ಅಧಿಕಾರವನ್ನು ಶಾಸನಸಭೆಗೆ ಹಸ್ತಾಂತರಿಸುವ ಮಹತ್ತರ ಕಾನೂನನ್ನು ಜಾರಿಗೆ ಮಾಡಿದ ಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾಟೀಲರು ಕಾರಣರಾದರು.ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಅಪಾರ ಕಾಳಜಿ ವಹಿಸಿದ್ದ ಕೆಎಚ್ ಪಾಟೀಲರ ದಿಟ್ಟತನದಿಂದ ರಾಜ್ಯದ ಕಾಡುಗಳು ಇನ್ನೂ ಹಚ್ಚಹಸಿರಾಗಿಯೇ ಉಳಿದಿದೆ ಎಂದು ಮುಖ್ಯಮಂತ್ರಿ ಬಣ್ಣಿಸಿದ್ದಾರೆ.

ನಮ್ಮ ರಾಜ್ಯವನ್ನು ‘ಕರ್ನಾಟಕ ರಾಜ್ಯ’ ಎಂದು ಅಧಿಕೃತವಾಗಿ ಘೋಷಿಸುವ ನಾಮಕರಣೋತ್ಸವ ಸಮಿತಿಗೆ ಕೆಎಚ್ ಪಾಟೀಲರವರು ಅಧ್ಯಕ್ಷರಾಗಿದ್ದರು. ಗಾಂಧಿಜೀಯವರ ಆಶಯ ಹಾಗೂ ಮಾಜಿ ಪ್ರಧಾನಿ ಮನಮೋಹನ್‍ಸಿಂಗ್ ಅವರ ದೂರದೃಷ್ಟಿಯ ಪರಿಣಾಮವಾಗಿ ರಾಷ್ಟ್ರಮಟ್ಟದಲ್ಲಿ ಸಹಕಾರ ಸಂಘಗಳು ಇಂದು ಬೆಳೆದು ನಿಂತಿವೆ. ಕೆ.ಎಚ್.ಪಾಟೀಲರಂತಹ ಸಮರ್ಥ ನಾಯಕರು ಕಟ್ಟಿಬೆಳೆಸಿದ ಸಹಕಾರಿ ಕ್ಷೇತ್ರವನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಯುವಪೀಳಿಗೆಯೂ ಮುಂದೆ ಬರಬೇಕಿದೆ. ಸಹಕಾರಿ ಕ್ಷೇತ್ರದ ಮೂಲಕ ಯುವಪೀಳಿಗೆ ಬದುಕು ಕಟ್ಟಿಕೊಳ್ಳಲು ಅನುವಾಗುವಂತೆ ಹತ್ತು ಹಲವು ಯೋಜನೆಗಳನ್ನು ಸರಕಾರ ಕೈಗೊಂಡಿದೆ. ಈ ಯೋಜನೆಯ ಲಾಭ ಪಡೆದು ಜನರು ಆರ್ಥಿಕವಾಗಿ ಸಬಲರಾಗುವ ಜೊತೆಗೆ ರಾಜ್ಯದ ಅಭಿವೃದ್ಧಿಗೂ ಕೈಜೋಡಿಸಲೆಂದು ಹಾರೈಸುತ್ತೇನೆ ಎಂದು ಉಲ್ಲೇಖಿಸಿದ್ದಾರೆ.

ಶೋಷಣೆ ಮುಕ್ತ ಸಮಾಜ, ಸಾಮಾಜಿಕ ನ್ಯಾಯ ಹಾಗೂ ಸರ್ವರಿಗೂ ಸಮಬಾಳು ಮತ್ತು ಸಮಪಾಲು ಎಂಬ ಆದರ್ಶದವನ್ನು ಸಾಕಾರಗೊಳಿಸಲು ತಮ್ಮ ಜೀವಿತಾವಧಿಯನ್ನೇ ಮುಡುಪಾಗಿಟ್ಟ ಕೆಎಚ್ ಪಾಟೀಲರಂತಹ ಮಹಾನ್ ನಾಯಕರು ನಮಗೆಲ್ಲರಿಗೂ ಪ್ರೇರಣಾ ಶಕ್ತಿಯಾಗಿದ್ದಾರೆ. ರಾಜ್ಯದ ಸವಾರ್ಂಗೀಣ ಅಭಿವೃದ್ಧಿಯ ಕನಸು ಹೊತ್ತು ಶ್ರಮಿಸುತ್ತಿರುವ ಸರಕಾರದ ಗುರಿ ಸಾಧನೆಗೆ ಕೆಎಚ್ ಪಾಟೀಲರು ಬಿಟ್ಟುಹೋದ ಆದರ್ಶಗಳು ನಮಗಿಂದು ದಾರಿದೀಪವಾಗಿದೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News