ಗದಗ | ಬಸ್‌ಗೆ ಮೊಟ್ಟೆ, ಕಲುಷಿತ ಬಣ್ಣ ಎರಚಿದ ದುಷ್ಕರ್ಮಿಗಳು; ಆರು ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲು

Update: 2025-03-14 22:28 IST
ಗದಗ | ಬಸ್‌ಗೆ ಮೊಟ್ಟೆ, ಕಲುಷಿತ ಬಣ್ಣ ಎರಚಿದ ದುಷ್ಕರ್ಮಿಗಳು; ಆರು ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲು
  • whatsapp icon

ಗದಗ : ಸಾರಿಗೆ ಸಂಸ್ಥೆಯ ಬಸ್‌ಗೆ ಮೊಟ್ಟೆ, ಸಗಣಿ, ಕಲುಷಿತ ಬಣ್ಣ ಎರಚಿದ ಹಿನ್ನಲೆ ಬಸ್ ಕಿಟಕಿ ಬಂದ್‌ ಮಾಡಿ ಕೂತಿದ್ದ ವಿದ್ಯಾರ್ಥಿಗಳಿಗೆ ಉಸಿರಾಟ ತೊಂದರೆ ಉಂಟಾಗಿ ಅಸ್ವಸ್ಥಗೊಂಡಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸುವರ್ಣಗಿರಿ ತಾಂಡಾ ಬಳಿ ನಡೆದಿದೆ.

ಸರ್ಕಾರಿ ಬಸ್ ಗೆ ಯುವಕರ ತಂಡವೊಂದು ಬಣ್ಣ, ಸಗಣಿ ಎರಚಿ ಪುಂಡಾಟ ಮೆರೆದಿದೆ. ಈ ವೇಳೆ ಬಣ್ಣ ಬೀಳಬಾರದು ಎಂದು ವಿದ್ಯಾರ್ಥಿಗಳು ಬಸ್ ಕಿಟಕಿ ಬಂದ್‌ ಮಾಡಿದ್ದರು. ಇದರಿಂದ ವಿದ್ಯಾರ್ಥಿಗಳು ಉಸಿರಾಟದ ತೊಂದರೆಯಿಂದ ಬಳಲಿದ್ದಾರೆ. ಉಸಿರಾಟದ ತೊಂದರೆಯಿಂದ ಹಲವು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ನಂತರ ಅಸ್ವಸ್ಥಗೊಂಡ ವಿದ್ಯಾರ್ಥಿಗಳಿಗೆ ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು.

ಇನ್ನು 8-9 ನೇ ತರಗತಿಯ ಪರೀಕ್ಷೆ ಬರೆಯಲು ಹೊರಟ್ಟಿದ್ದ ವಿದ್ಯಾರ್ಥಿಗಳು ಸಹ ಈ ಬಸ್ ನಲ್ಲಿ ಇದ್ದರು. ಇಂದು ಗಣಿತ ಹಾಗೂ ವಿಜ್ಞಾನ ಪರೀಕ್ಷೆ ನಿಗದಿಯಾಗಿತ್ತು. ಆದರೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಆರು ವಿದ್ಯಾರ್ಥಿನಿಯರ ಪೈಕಿ ನಾಲ್ವರಿಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದ ಇಬ್ಬರಿಗೆ ಲಕ್ಷ್ಮೇಶ್ವರ ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಬಸ್‌ನಲ್ಲಿದ್ದ ಕಂಡಕ್ಟರ್ ಹಾಗೂ ಡ್ರೈವರ್ ಈ ರೀತಿ ಮಾಡಬಾರೆಂದು ಯುವಕರಿಗೆ ತಿಳಿ ಹೇಳಿದಾಗ ಹೊಡೆಯಲು ಮುಂದಾದರು‌ ಎಂದು ಸಾರಿಗೆ ಇಲಾಖೆ ಸಿಬ್ಬಂದಿ ಆರೋಪಿಸಿದ್ದಾರೆ.

ವಿದ್ಯಾರ್ಥಿಗಳ ಪಾಲಕರು ದುಷ್ಕರ್ಮಿಗಳನ್ನು ಬಂಧಿಸಬೇಕು, ಜೊತೆಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಘಟನೆ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News