ಕೆ.ಎಚ್.ಪಾಟೀಲ್ ಮಹಾ ಮಾನವತಾವಾದಿ : ಡಿ.ಕೆ.ಶಿವಕುಮಾರ್

Update: 2025-03-16 21:34 IST
ಕೆ.ಎಚ್.ಪಾಟೀಲ್ ಮಹಾ ಮಾನವತಾವಾದಿ : ಡಿ.ಕೆ.ಶಿವಕುಮಾರ್
  • whatsapp icon

ಗದಗ : ಸಹಕಾರಿ ಧುರೀಣ, ಮಾಜಿ ಸಚಿವ ದಿವಂಗತ ಕೆಎಚ್ ಪಾಟೀಲ್ ಅವರು ಮಹಾ ಮಾನವತಾವಾದಿಯಾಗಿದ್ದು, ಜಾತಿ, ಧರ್ಮದ ತಾರತಮ್ಯವಿಲ್ಲದೆ ಸಹಕಾರಿ ಕ್ಷೇತ್ರದಲ್ಲಿ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಮುನ್ನಡೆಸಿದವರು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ರವಿವಾರ ಗದಗದಲ್ಲಿ ಹಮ್ಮಿಕೊಂಡಿದ್ದ ಮಾಜಿ ಸಚಿವ ಕೆಎಚ್ ಪಾಟೀಲ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಟೀಲರ ಬದುಕು, ಚಿಂತನೆ, ಆದರ್ಶ ಬೇರೆಯವರ ಬದುಕಿಗೆ ದಾರಿ ದೀಪವಾಗಲಿ. ಮಹಾಭಾರತದಲ್ಲಿ ಭೀಷ್ಮ, ಧರ್ಮರಾಯನಿಗೆ ಒಂದು ಮಾತು ಹೇಳಿದ್ದರು. ಮನುಷ್ಯ ಹುಟ್ಟುವಾಗ ತಂದೆ ತಾಯಿ, ಗುರು, ದೇವರು ಹಾಗೂ ಸಮಾಜ ಈ ನಾಲ್ಕು ಋಣದಲ್ಲಿ ಹುಟ್ಟುತ್ತಾನೆ. ಈ ನಾಲ್ಕು ಋಣಗಳನ್ನು ಧರ್ಮದಿಂದ ತೀರಿಸಬೇಕು ಎಂದು ಹೇಳಿದ್ದರು.

ಅದೇ ರೀತಿ ಹೆಚ್.ಕೆ ಪಾಟೀಲ್, ಅವರ ಸ್ನೇಹಿತರು, ಅಭಿಮಾನಿಗಳು ಈ ಕಾರ್ಯಕ್ರಮ ನಡೆಸಿ ಧರ್ಮದ ಮೂಲಕ ಋಣ ತೀರಿಸುವ ಕೆಲಸ ಮಾಡುತ್ತಿದ್ದೀರಿ. ವಿದ್ಯಾ ಸಂಸ್ಥೆ, ಸಹಕಾರ ಸಂಸ್ಥೆ, ರೈತರು ಸೇರಿದಂತೆ ಕೆಎಚ್ ಪಾಟೀಲ್ ಅವರು ಸಮಾಜಕ್ಕೆ ಏನೆಲ್ಲಾ ಬೇಕು ಎಂದು ಚಿಂತನೆ ನಡೆಸಿದ್ದರು ಎಂದು ಅವರು ಸ್ಮರಿಸಿದರು.

ಕೆಎಚ್ ಪಾಟೀಲರ ಜತೆ ನಾಲ್ಕೈದು ವರ್ಷ ಕೆಲಸ ಮಾಡುವ ಭಾಗ್ಯ ನನಗೆ ಸಿಕ್ಕಿತ್ತು. ನಾನು ಇಂದು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿದ್ದು, ಅಂದು ಕೆಎಚ್ ಪಾಟೀಲ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ 1985ರಲ್ಲಿ ನನಗೆ ವಿಧಾನಸಭೆ ಚುನಾವಣೆ ಟಿಕೆಟ್ ನೀಡಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಸ್ಪರ್ಧಿಸುವಂತೆ ಹೇಳಿದರು. ಅಲ್ಲಿಂದ ಇಲ್ಲಿಯವರೆಗೂ ಸತತವಾಗಿ 9 ಬಾರಿ ಬಿ ಫಾರಂ ತೆಗೆದುಕೊಂಡು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಅವರು ಹೇಳಿದರು.

ಪಾಟೀಲ್ ಅವರು ಸೋಲು, ಗೆಲುವು, ಯಶಸ್ಸು ಎಲ್ಲವನ್ನು ಕಂಡಿರುವ ಮಾನವತಾವಾದಿ. ಅವರ ಜೊತೆ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ. ಮಣ್ಣಿಲ್ಲದೆ ಮಡಿಕೆ ಇಲ್ಲ, ಹಿರಿಯರ ಬಿಟ್ಟು ದೇವರಿಲ್ಲ. ತಂದೆ ತಾಯಿಗಳೇ ನಮ್ಮ ದೇವರು. ಅವರನ್ನು ಸ್ಮರಿಸುತ್ತಾ ಅವರು ತೋರಿದ ಮಾರ್ಗದರ್ಶನದಲ್ಲಿ ನಾವು ಸಾಗಬೇಕು. ಸಹಕಾರ ಕ್ಷೇತ್ರದಲ್ಲಿ ಪಾಟೀಲ್ ಅವರು ಅನೇಕ ಸಂಸ್ಥೆಗಳನ್ನು ಕಟ್ಟಿದ್ದಾರೆ ಎಂದು ಅವರು ಬಣ್ಣಿಸಿದರು.

ಈ ಜಿಲ್ಲೆಯ ಜಿಲ್ಲಾ ಕಚೇರಿ, ಮೆಡಿಕಲ್ ಕಾಲೇಜು, ಗಾಂಧೀಜಿ ಅವರ ಹೆಸರಲ್ಲಿ ಗ್ರಾಮೀಣಾಭಿವೃದ್ಧಿ ವಿಶ್ವ ವಿದ್ಯಾಲಯ, ಗಾಂಧೀಜಿ ಅವರ ಸಬರಾಮತಿ ಆಶ್ರಮ ಮಾದರಿಯನ್ನು ಇದೇ ಜಿಲ್ಲೆಯಲ್ಲಿ ಮಾಡಿದ್ದಾರೆ. ನಾನು 15 ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದಾಗ ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ನೋಡಿದ್ದೆ. ನನ್ನ ಸಹೋದರ ಲೋಕಸಭಾ ಸದಸ್ಯನಾಗಿದ್ದಾಗ ಆತನ ಕ್ಷೇತ್ರದಲ್ಲಿ 300-400 ಘಟಕ ಸ್ಥಾಪಿಸಿದ್ದೆವು. ನಂತರ ಅದನ್ನು ಸರಕಾರದÀ ಕಾರ್ಯಕ್ರಮವಾಗಿ ಘೋಷಣೆ ಮಾಡಿದೆವು ಎಂದು ಹೇಳಿದರು.

ಇನ್ನೂ, ಡಿಆರ್ ಪಾಟೀಲ್ ಅವರು ವಿವೇಕಾನಂದರ ಅನುಯಾಯಿ. ವಿವೇಕಾನಂದರು ಮಹಾತ್ಯಾಗದಿಂದ ಮಾತ್ರ ಮಹತ್ಕಾರ್ಯ ಮಾಡಲು ಸಾಧ್ಯ ಎಂದು ಹೇಳಿದ್ದಾರೆ. ತಾಯಿ ನಮಗೆ ಜನ್ಮ ನೀಡುತ್ತಾಳೆ. ದೇವರು ನಮಗೆ ಬುದ್ಧಿ ನೀಡುತ್ತಾನೆ. ಗುರು ವಿದ್ಯೆ ನೀಡುತ್ತಾರೆ. ಇವರ ಕುಟುಂಬ ನಮಗೆ ಸ್ನೇಹವನ್ನು ನೀಡಿದೆ. ಜನಸೇವೆಯೇ ನಮ್ಮ ಗುರಿಯಾಗಲಿ, ಜನಸೇವೆಯಲ್ಲಿ ನಿಯಮವಿರಲಿ, ಜನಸೇವೆಯಲ್ಲಿ ಪ್ರಾಮಾಣಿಕತೆ ಇರಲಿ. ಇದನ್ನು ನಮ್ಮ ಕಾನೂನು ಸಚಿವ ಎಚ್‍ಕೆ ಪಾಟೀಲ್ ಅವರು ಉಳಿಸಿಕೊಂಡು ಬೆಳೆಸಿಕೊಂಡು ಹೋಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಿದರು. ಸಚಿವರಾದ ಎಚ್.ಕೆ. ಪಾಟೀಲ್, ಈಶ್ವರ್ ಖಂಡ್ರೆ, ಎನ್.ಎಸ್.ಬೋಸರಾಜು, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಎನ್.ಎಚ್.ಕೋನರೆಡ್ಡಿ, ಅಬ್ಬಯ್ಯ ಪ್ರಸಾದ್, ಪ್ರಕಾಶ್ ಕೋಳಿವಾಡ, ಜಿ.ಟಿ.ದೇವೇಗೌಡ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News