ಗದಗ | ತುಂಗಭ್ರದಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ನಾಪತ್ತೆ

ಗದಗ: ತುಂಗಭ್ರದಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ನಾಪತ್ತೆಯಾಗಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಸೇತುವೆ ಬಳಿ ನಡೆದಿದೆ. ಮದಲಗಟ್ಟಿ ಆಂಜನೇಯನ ದರ್ಶನ ಪಡೆದು ತುಂಗಭದ್ರಾ ನದಿಗೆ ಈಜಲು ತೆರಳಿದಾಗ ಈ ಘಟನೆ ಜರುಗಿದೆ.
ಶರಣಪ್ಪ ಬಡಿಗೇರ್ (34) ಮಹೇಶ್ ಬಡಿಗೇರ್ (36) ಹಾಗೂ ಗುರುನಾಥ್ ಬಡಿಗೇರ್ (38) ಎಂಬವರು ನದಿಗೆ ಇಳಿದಾಗ ನಾಪತ್ತೆಯಾಗಿದ್ದು, ಒಟ್ಟು ಐವರು ಸ್ನೇಹಿತರು ಮದಲಗಟ್ಟಿ ಆಂಜನೇಯನ ದರ್ಶನ ಪಡೆಯಲು ಗದಗ ಜಿಲ್ಲೆ ಶಿರಹಟ್ಟಿಯಿಂದ ಬಂದಿದ್ದರು. ಈ ವೇಳೆ ದೇವರ ದರ್ಶನ ಪಡೆದು ಐವರಲ್ಲಿ ಮೂವರು ನದಿಗೆ ಈಜಲು ತೆರಳಿದಾಗ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಐವರಲ್ಲಿ ಓರ್ವನಾದ ಶರಣಪ್ಪ ಬಡಿಗೇರ್ ಹುಟ್ಟುಹಬ್ಬದ ಹಿನ್ನೆಲೆ, ಆಂಜನೇಯನ ದರ್ಶನ ಪಡೆಯಲು ಸ್ನೇಹಿತರೊಂದಿಗೆ ದೇವಸ್ಥಾನಕ್ಕೆ ಬಂದಿದ್ದರು ಎನ್ನಲಾಗಿದೆ.
ಇತ್ತ ಮಹೇಶ್ ಬಡಿಗೇರ ಎಂಬಾತ ಈಜಲು ಬಾರದಿದ್ದರೂ ನದಿಗೆ ಇಳಿದಿದ್ದನು. ಈ ವೇಳೆ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಹೇಶ್ ನನ್ನ ರಕ್ಷಿಸಲು ಶರಣಪ್ಪ ಹಾಗೂ ಗುರುನಾಥ್ ಇವರಿಬ್ಬರೂ ರಕ್ಷಿಸಲು ತೆರಳಿದಾಗ, ಮೂವರು ಸಹ ನದಿಯಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಸದ್ಯ ನದಿಯಲ್ಲಿ ನಾಪತ್ತೆಯಾಗಿರುವ ಮೂವರಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ನದಿಯಲ್ಲಿ ಶೋಧಕಾರ್ಯ ನಡೆಸಲಾಗುತ್ತಿದೆ.
ವಿಜಯನಗರ ಜಿಲ್ಲೆ ಹೂವಿನ ಹಡಗಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ದಳದಿಂದಲೂ ಶೋಧಕಾರ್ಯ ಮುಂದುವರೆದಿದೆ. ಹೂವಿನಹಡಗಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.