ಹಾಸನ: ಹೊಂಗಡಹಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ದಲಿತ ಮಹಿಳೆ

Update: 2024-02-12 12:42 GMT

ಸಕಲೇಶಪುರ: ಹೊಂಗಡಹಳ್ಳ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಸಂದರ್ಭದಲ್ಲಿ ಕಣ್ಣಿರಿಟ್ಟಿದ್ದ ದಲಿತ ಮಹಿಳೆ ಸೋಮವಾರ ಆಧಿಕೃತ ಘೋಷಣೆಯ ನಂತರ ನಕ್ಕು ಮಂದಹಾಸ ಬೀರಿದರು.

ಈ ಬೆಳವಣಿಗೆಯನ್ನು ಕಾಂಗ್ರೆಸ್ ಮುಖಂಡರು ಇದು ಸಂವಿಧಾನದ ಶಕ್ತಿ ಎಂದು ಬಣ್ಣಿಸಿ, ಶೋಷಿತರ, ಬಡವರ, ದುರ್ಬಲರ ಪರವಾಗಿ ಕಾಂಗ್ರೆಸ್ ಸದಾ ಇರುತ್ತದೆ. ನಮ್ಮ ಬೆಂಬಲಿತ ಸದಸ್ಯ ಅಧ್ಯಕ್ಷೆಯಾಗಿರುವುದು ನಮಗೆ ಸಂತಸವಾಗಿದೆ ಎಂದರು.

ಅಧ್ಯಕ್ಷೆ ವನಜಾಕ್ಷಿ ಮಾತನಾಡಿ, ʼನನಗೆ ಬಹಳ ಸಂತೋಷ ವಾಗುತ್ತಿದೆ. ಇಂದು ಗ್ರಾಮ ಪಂಚಾಯಿತಿಯ 6 ಸದಸ್ಯರಲ್ಲಿ 5 ಸದಸ್ಯರು ಹಾಜರಾಗಿದ್ದೇವೆ. ಈ ಗ್ರಾ.ಪಂ ಅಭಿವೃದ್ಧಿಗಾಗಿ ಹೆಚ್ಚು ಶ್ರಮಿಸಿತ್ತೇನೆ. ನನಗೆ ಬಡವರ ಕಷ್ಟ, ಸಮಸ್ಯೆ ತಿಳಿದಿದೆ.‌ ಅವರ ಪ್ರಗತಿಗಾಗಿ ದುಡಿಯುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ಬಾಚಳ್ಳಿ ಪ್ರತಾಪ್ ಗೌಡ, ಕೊಲ್ಲಹಳ್ಳಿ ಸಲೀಂ, ಗೊದ್ದು ಲೋಕೇಶ್, ಕೊಮರಯ್ಯ, ಬೈಕೇರೆ ದೇವರಾಜ್, ಗ್ರಾ.ಪಂ ಸದಸ್ಯ ಸುಜಾತ, ಮಹಿಳಾ ಕಾಂಗ್ರೆಸ್ ಸದಸ್ಯೆ ಅಧ್ಯಕ್ಷೆ ಅನ್ನಪೂರ್ಣ, ಲಕ್ಷ್ಮಿ , ಹಸೀನಾ ಹುರುಡಿ, ಕಿರಣ್, ಕೃಷ್ಣೇಗೌಡ, ಮಂಜು, ವಿಜಯ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಹಿನ್ನೆಲೆ

ತಾಲೂಕಿನ ಹೊಂಗಡಹಳ್ಳ ಗ್ರಾಮ ಪಂಚಾಯತ್‌ನಲ್ಲಿ ಪರಿಶಿಷ್ಟ ಜಾತಿ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಏಕೈಕ ಮಹಿಳೆಯಾಗಿದ್ದ ವನಜಾಕ್ಷಿ ಗುರುವಾರ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ, ಆಯ್ಕೆಯಾಗಿದ್ದರು. ತಾಂತ್ರಿಕ ಅಡಚಣೆ ಕೋರಂ ಹಿನ್ನೆಲೆ ಸೋಮವಾರಕ್ಕೆ ಸಭೆ ಮುಂದೂಡಲಾಗಿತ್ತು. ಈ ಸಂಬಂಧ ವನಚಾಕ್ಷಿ, ನಾನು ದಲಿತ ಮಹಿಳೆ ಯಾಗಿರುವ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಕಣ್ಣೀರಿಟ್ಟು ಆರೋಪಿಸಿದ್ದರು.

ನಾನು ಅಧ್ಯಕ್ಷೆಯಾಗಿ ಆಯ್ಕೆಯಾಗುವುದನ್ನು ನೋಡಲಾಗದ, ನನ್ನನ್ನು ಅಭಿನಂದಿಸಲು ಮುಂದಾಗದಿರುವ ಅವರ ಮನಸ್ಥಿತಿಯೇ ಸಭೆಗೆ ಸದಸ್ಯರ ಗೈರು ಹಾಜರಾತಿಗೆ ಕಾರಣವಾಗಿರಬಹುದು. ಆದರೆ ನಾನು ಇಲ್ಲಿಯವರೆಗೆ ಅವರಿಗೆ ಸಂಪೂರ್ಣ ಸಹಕಾರ ನೀಡಿದ್ದೇನೆ ಎಂದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News