ಹಾಸನ: ಸಾಲ, ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಮೋಸ; ವ್ಯಕ್ತಿ ಆತ್ಮಹತ್ಯೆ

ಹಾಸನ, ಮಾ. 29: ಸಾಲ ನೀಡಿದವರ ಕಿರುಕುಳ ಹಾಗೂ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಮೋಸಕ್ಕೆ ಒಳಗಾಗಿ ಮನನೊಂದ ಅವಿವಾಹಿತ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ತಾಲೂಕಿನ ಅಟ್ಟಾವರ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಸ್ವರೂಪ್ (40) ಎಂದು ಗುರುತಿಸಲಾಗಿದೆ. ಕೆಲ ವರ್ಷಗಳ ಹಿಂದೆ ರಸ್ತೆ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡಿದ್ದ ಸ್ವರೂಪ್, ಅಂದಿನಿಂದ ಮನೆಯಲ್ಲೇ ಇರುತ್ತಿದ್ದರು. ಚಿಕಿತ್ಸೆಗಾಗಿ ಸಾಲ ಮಾಡಿಕೊಂಡಿದ್ದ ಅವರು, ಸಾಲ ಮರುಪಾವತಿಸುವಂತೆ ಹಣ ನೀಡಿದವರು ನಿರಂತರವಾಗಿ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.
ಇದೇ ವೇಳೆ, ಅಪಘಾತದ ನಂತರ ಸಿಕ್ಕಿದ್ದ ವಿಮಾ ಪರಿಹಾರದ ಹಣವನ್ನು ಕ್ರಿಕೆಟ್ ಬೆಟ್ಟಿಂಗ್‌ಗಾಗಿ ಅನ್ಸಾರ್, ತಿಪ್ಪೇಸ್ವಾಮಿ ಮತ್ತು ಬಾಳಪ್ಪ ಎಂಬವರಿಗೆ ನೀಡಿದ್ದರು. ಆದರೆ, ಈ ಮೂವರು ಹಣ ನೀಡದೆ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸಾಲದ ಒತ್ತಡ ಹಾಗೂ ಬೆಟ್ಟಿಂಗ್‌ನಲ್ಲಿ ಮೋಸಕ್ಕೊಳಗಾಗಿ ಮಾನಸಿಕವಾಗಿ ಕುಗ್ಗಿದ್ದ ಸ್ವರೂಪ್, ಮನೆಯ ಬಾತ್‌ರೂಂನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣ ದುದ್ದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತನಿಖೆ ಆರಂಭವಾಗಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.