ಸಕಲೇಶಪುರ: ವೃದ್ಧನ ಮೇಲೆ ಕಾಡಾನೆ ದಾಳಿ; ಆಸ್ಪತ್ರೆಗೆ ದಾಖಲು
Update: 2025-04-22 14:13 IST

ಹಾಸನ: ವಾಯುವಿಹಾರಕ್ಕೆ ತೆರಳಿದ್ದ ಗ್ರಾಮದ ವೃದ್ಧರೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಾಜು (68) ಗಾಯಗೊಂಡ ವ್ಯಕ್ತಿ. ಕಾಡಾನೆಯು ರಾಜು ಅವರನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿ, ತುಳಿಯಲು ಯತ್ನಿಸಿದೆ. ಘಟನೆಯಲ್ಲಿ ಆತ ತೀವ್ರವಾಗಿ ಗಾಯಗೊಂಡಿದ್ದಾರೆ.
ಘಟನೆಯ ಸಮಯದಲ್ಲಿ ಸ್ಥಳೀಯರು ಕಿರುಚಾಡಿದ್ದರಿಂದ ಕಾಡಾನೆ ಕಾಫಿ ತೋಟದೊಳಗೆ ಪರಾರಿಯಾಗಿದೆ. ಗಾಯಗೊಂಡ ರಾಜು ಅವರನ್ನು ಗ್ರಾಮಸ್ಥರು ಕೂಡಲೇ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ರವಾನಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿ, ಕಾಡಾನೆಯ ಚಲನವಲನವನ್ನು ಗಮನಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಾಡಾನೆ-ಮಾನವ ಸಂಘರ್ಷದ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಭಯಭೀತರಾಗಿದ್ದಾರೆ.