ಹಾಸನ | ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

ಹಾಸನ : ಕೇಂದ್ರ ಸರಕಾರದ ಅಸಂವಿಧಾನಿಕ ಹಾಗೂ ಮುಸ್ಲಿಂ ವಿರೋಧಿ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದ ಹೇಮಾವತಿ ಪ್ರತಿಮೆ ಎದುರು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಕಪ್ಪು ಬಾವುಟ ಪ್ರದರ್ಶಿಸಿದಲ್ಲದೇ ಕೈ ತೋಳಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ಆಕ್ರೋಶವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಇರ್ಫಾನ್ ಮಾಧ್ಯಮದೊಂದಿಗೆ ಮಾತನಾಡಿ, ವಕ್ಫ್ ಕಾಯ್ದೆ ತಿದ್ದುಪಡಿಯು ಮುಸ್ಲಿಮರ ಮೇಲಿನ ದ್ವೇಷದ ಕಾರಣಕ್ಕಾಗಿ ಜಾರಿ ಮಾಡಿದೆ. ಬಾಬಾ ಸಾಹೇಬರು ಬರೆದಿರುವ ಸಂವಿಧಾನವನ್ನು ಬದಲಾವಣೆ ಮಾಡಲು ಇಂತಹ ಕಾಯ್ದೆ ಮತ್ತು ಮಸೂದೆಗಳ ಮೂಲಕ ಹೊರಟಿದ್ದಾರೆ ಎಂದು ಆರೋಪಿಸಿದರು.
ವಕ್ಫ್ ಆಸ್ತಿ ಎಂದರೇ ಮೋದಿ, ಅಮಿತ್ ಶಾ ಹಾಗೂ ಯೋಗಿ ಆಸ್ತಿಯಲ್ಲ. ಬಿಜೆಪಿಯವರ ಆಸ್ತಿಯಲ್ಲ. ಇದು ಅಲ್ಲ ಹೆಸರಿನಲ್ಲಿ ಮುಸ್ಲಿಮರು ದಾನ ಮತ್ತು ದೇಣಿಗೆ ಕೊಟ್ಟಿರುವ ಸಂಪತ್ತು ಇದಾಗಿದೆ.
ಕೇಂದ್ರದ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಹಲವಾರು ಕೇಂದ್ರದ ಆಸ್ತಿಗಳನ್ನು ಮಾರಾಟ ಮಾಡಿದ ಹಾಗೆ ಈಗ ವಕ್ಫ್ ಆಸ್ತಿ ಮಾರಾಟ ಮಾಡಲು ಹೊರಟಿದ್ದಾರೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಂಜಿತ್ ಗೊರೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹಿದ್, ಇಸ್ಮಾಯಿಲ್, ಹರ್ಷದ್, ನಿಹಾಲ್, ಕಿರಣ್ ಇತರರು ಉಪಸ್ಥಿತರಿದ್ದರು