ಪ್ರಜ್ವಲ್ ರೇವಣ್ಣ ಬಂಧನದಿಂದ ಜೆಡಿಎಸ್ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಲ್ಲ: ಜಿ.ಟಿ. ದೇವೇಗೌಡ

Update: 2024-05-31 15:37 GMT

ಹಾಸನ: ಪ್ರಜ್ವಲ್ ರೇವಣ್ಣ ಬಂಧನದಿಂದ ನಮ್ಮ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಎಸ್‌ಐಟಿ ತನಿಖೆಗೆ ಬೆಂಬಲಿಸುತ್ತೇವೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕೆಂದು ಜೆಡಿಎಸ್ ಕೋರ್ ಕಮಿಟಿ ಅದ್ಯಕ್ಷ ಜಿ.ಟಿ. ದೇವೇಗೌಡ ತಿಳಿಸಿದರು.

ನಗರದ ಖಾಸಗಿ ಹೋಟೆಲೊಂದರಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿದಾನಪರಿಷತ್ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಸಭೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಬಂಧನ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಪ್ರಜ್ವಲ್ ಅವರನ್ನು ನಮ್ಮ ಪಕ್ಷದಿಂದ ಅಮಾನತು ಮಾಡಿದ್ದೇವೆ. ಈ ಸಂಬಂದ ತನಿಖೆ ನಡೆಯುತ್ತಿದೆ. ವೀಡಿಯೊ ಹಂಚಿದವರ ವಿರುದ್ಧ ಕ್ರಮ ಆಗದ ಕುರಿತು ಆಕ್ರೋಶ ಕೂಡ ಇದೆ. ನಾವು ಯಾವುದೇ ಕಾರಣಕ್ಕೂ ತನಿಖೆಯಲ್ಲಿ ಹಸ್ತಕ್ಷೇಪ ಮಾಡೋದಿಲ್ಲ. ತನಿಖೆಗೆ ಮುಕ್ತ ಅವಕಾಶ ನೀಡಲಾಗಿದೆ. ನಿಷ್ಪಕ್ಷಪಾತ ತನಿಖೆ ಆಗಬೇಕು ಎಂಬುದು ನಮ್ಮ ಆಗ್ರಹವಾಗಿದೆ. ನಾವು ಎಸ್‌ಐಟಿ ತನಿಖೆ ಬಗ್ಗೆ ಈಗಲೇ ಏನು ಹೇಳುವುದಿಲ್ಲ. ಯಾರಿಗೆ ಅನ್ಯಾಯ ಆಗಿದೆ ಅವರಿಗೆ ಸರ್ಕಾರ ನ್ಯಾಯ ಒದಗಿಸಬೇಕು ಎಂದರು.

ಪ್ರಜ್ವಲ್ ರೇವಣ್ಣ ಬಂಧನದಿಂದ ನಮ್ಮ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಪ್ರಜ್ವಲ್ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಿ ಎಂದು ನಾವೇ ಹೇಳಿದ್ದೇವೆ ಎಂದರು.

ವಾಲ್ಮೀಕಿ ನಿಗಮದ ನೌಕರ ಚಂದ್ರಶೇಖರ ಆತ್ಮಹತ್ಯೆ ಪ್ರಕರಣ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಈ ಪ್ರಕರಣ ಸಂಬಂಧ ಸಚಿವರ ರಾಜಿನಾಮೆ ಪಡೆಯಬೇಕು. ಅವರು ಡೆತ್ ನೋಟ್ ಬರೆದಿಟ್ಟು ಮೃತಪಟ್ಟಿದಾರೆ. ಡೆತ್ ನೋಟ್ ಇದೆ ಎಂದ ಮೇಲೆ ರಾಜಿನಾಮೆ ಕೊಡಬೇಕಿತ್ತು. ಈಗಲಾದರು ಸಚಿವರ ರಾಜಿನಾಮೆ ಪಡೆಯಿರಿ ಎಂದು ಆಗ್ರಹಿಸಿದರು.

ನಮ್ಮ ವಿರುದ್ದ ಮಾಟ ಮಾಡಿಸುತ್ತಿದ್ದಾರೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪ ವಿಚಾರದ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಈ ಯಾಗಗಳು, ಪೂಜೆಗಳ ಬಗ್ಗೆ ಡಿ.ಕೆ. ಶಿವಕುಮಾರ್ ಅವರಿಗೆ ಚೆನ್ನಾಗಿ ಗೊತ್ತಿದೆ. ಅವರೇ ಅದು ಏನೆಂದು ಹೇಳಬೇಕು. ಕುಮಾರಸ್ವಾಮಿ ಅವರು ಮಡಿಕೇರಿಯಲ್ಲಿದ್ದಾರೆ ಅವರಿಗೂ ಅದಕ್ಕೂ ಸಂಬಂಧವಿಲ್ಲ. ಕುಮಾರಸ್ವಾಮಿ ಅವರು ಯಾವತ್ತೂ ಕೂಡ ಆ ರೀತಿ ಮಾಡಲ್ಲ ಎಂದು ಹೇಳಿದರು.

ಈ ಸಂದರ್ಭ ಶಾಸಕರಾದ ಸಿ.ಎನ್. ಬಾಲಕೃಷ್ಣ, ಹೆಚ್.ಪಿ. ಸ್ವರೂಪ್ ಪ್ರಕಾಶ್, ಮಾಜಿ ಶಾಸಕರಾದ ಕೆ.ಎಸ್. ಲಿಂಗೇಶ್, ಹೆಚ್.ಕೆ. ಕುಮಾರಸ್ವಾಮಿ ಹಾಗು ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಮಾಧ್ಯಮ ವಕ್ತಾರ ಹೊಂಗೆರೆ ರಘು ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News