ಶಿರಾಡಿ ಘಾಟ್ ನಲ್ಲಿ ಉರುಳಿ ಬಿದ್ದ ಗ್ಯಾಸ್ ಟ್ಯಾಂಕರ್; ವಾಹನ ಸಂಚಾರಕ್ಕೆ ನಿಷೇಧ

Update: 2024-03-13 10:29 GMT

ಹಾಸನ: ಶಿರಾಡಿಘಾಟ್ ನಲ್ಲಿ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದಿದ್ದು, ಎಲ್‌ಪಿಜಿ ಸೋರಿಕೆಯಾಗುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿ ಬಂದ್ ಮಾಡಲಾಗಿರುವ ಬಗ್ಗೆ ಬುಧವಾರ ವರದಿಯಾಗಿದೆ.

ಸಕಲೇಶಪುರ ತಾಲ್ಲೂಕಿನ, ಶಿರಾಡಿಘಾಟ್ ರಸ್ತೆಯ ಡಬಲ್ ಟರ್ನ್ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ಉರುಳಿ ಬಿದ್ದಿದೆ. ಟ್ಯಾಂಕ‌ರ್‌ನಿಂದ ಅನಿಲ ಸೋರಿಕೆ ಆಗುತ್ತಿರುವುದರಿಂದ ಅಗ್ನಿ ಅನಾಹುತ ಸಂಭವಿಸುವುದನ್ನು ತಪ‍್ಪಿಸಲು ಸ್ಥಳಕ್ಕೆ ತಲುಪಿದ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರು  ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯ ಹಿನ್ನೆಲೆಯಲ್ಲಿ ಬುಧವಾರ ಮಧ್ಯರಾತ್ರಿ 12 ಗಂಟೆಯವರೆಗೆ ವಾಹನಗಳ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಆದೇಶ ಹೊರಡಿಸಿದ್ದು, ಬೆಂಗಳೂರು-ಹಾಸನ-ಮಂಗಳೂರು, ಮಂಗಳೂರು-ಹಾಸನ-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು‌ ಪೊಲೀಸರು ಬದಲಿ ಮಾರ್ಗದಲ್ಲಿ ಕಳುಹಿಸುತ್ತಿದ್ದಾರೆ.

ಸಕಲೇಶಪುರದಿಂದ ಮಂಗಳೂರಿಗೆ ತೆರಳುವ ವಾಹನಗಳು ಸಕಲೇಶಪುರ–ಹಾನುಬಾಳು–ಮೂಡಿಗೆರೆ ಮಾರ್ಗವಾಗಿ ಮಂಗಳೂರಿಗೆ ಸಂಚರಿಸಬೇಕು. ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ವಾಹನಗಳು ಹಾಸನ–ಬೂವನಹಳ್ಳಿ ಕ್ರಾಸ್‌–ಬೇಲೂರು ಮೂಲಕ ಸಂಚರಿಸಬೇಕು. ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ವಾಹನಗಳು ಸುಳ್ಯ–ಸಂಪಾಜೆ ಮಾರ್ಗವಾಗಿ ಸಂಚರಿಸುವಂತೆ ಜಿಲ್ಲಾಧಿಕಾರಿ  ಆದೇಶದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News