ಪ್ರಜ್ವಲ್ ರೇವಣ್ಣನನ್ನು 54ನೇ ಭಯೋತ್ಪಾದಕನೆಂದು ಘೋಷಿಸಬೇಕು: ಎಸ್. ಬಾಲನ್

Update: 2024-05-30 18:17 GMT

ಹಿರಿಯ ವಕೀಲ ಎಸ್. ಬಾಲನ್

ಹಾಸನ: ಭಾರತದ ಕಾನೂನು ವ್ಯವಸ್ಥೆ ಈವರೆಗೆ 53 ಜನರನ್ನು ಭಯೋತ್ಪಾದಕರೆಂದು ಘೋಷಿಸಿದೆ. ಈಗ ಪ್ರಜ್ವಲ್ ರೇವಣ್ಣನನ್ನು 54ನೇ ಭಯೋತ್ಪಾದಕನೆಂದು ಘೋಷಿಸಬೇಕು ಎಂದು ಹಿರಿಯ ವಕೀಲ ಎಸ್. ಬಾಲನ್ ಹೇಳಿದ್ದಾರೆ.

ಕರ್ನಾಟಕ ಜನಪರ ಚಳವಳಿಗಳ ಒಕ್ಕೂಟದಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ಹೋರಾಟದ ನಡಿಗೆ ಹಾಸನದ ಕಡೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಮಾವೇಶದಲ್ಲಿ ಮಾತನಾಡಿದ ಅವರು, ನೊಂದ ಮಹಿಳೆಯರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ತಲಾ 50 ಲಕ್ಷ ರೂಪಾಯಿ ಸೇರಿ ಒಂದು ಕೋಟಿ ರೂ. ಪರಿಹಾರ ಕೊಡಬೇಕು. ರೇವಣ್ಣನಿಗೆ ಜಾಮೀನು ನೀಡಿದೆ. ಪ್ರಜ್ವಲ್ ರೇವಣ್ಣನಿಗೂ ಹೀಗೆಯೇ ಜಾಮೀನು ಕೊಡುವ ಸಂಶಯ ಇದೆ. ಉಭಯ ಸರಕಾರಗಳು ಪ್ರಜ್ವಲ್‌ನನ್ನು ರಕ್ಷಿಸುತ್ತಿರುವ ಅನುಮಾನವಿದೆ ಎಂದರು.

ಜನಪರ ಸಂಘಟನೆಗಳ ಒಕ್ಕೂಟದ ಮುಖಂಡ ಧರ್ಮೇಶ್ ಮಾತನಾಡಿ, ನೊಂದವರ ಪರ ನಮ್ಮ ಜನರು ಸದಾ ನಿಲ್ಲುತ್ತಾರೆ ಎಂಬುದಕ್ಕೆ ಈ ಐತಿಹಾಸಿಕ ಹೋರಾಟ ಸಾಕ್ಷಿಯಾಗಿದೆ. ಈ ಹೋರಾಟ ಸರಣಿ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಜ್ವಲ್ ರೇವಣ್ಣ ಹಾಗೂ ಆತನ ಕುಟುಂಬದ ವಿರುದ್ಧವಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ನಿಲ್ಲುವುದಿಲ್ಲ ಎಂದರು.

ಹೋರಾಟಗಾರ ಎಸ್.ಆರ್. ಹಿರೇಮಠ್ ಮಾತನಾಡಿ, ಹಾಸನದಲ್ಲಿ ದರ್ಪ, ದಬ್ಬಾಳಿಕೆ, ಪಾಳೆಗಾರಿಕೆಗೆ ಸಂಸ್ಕೃತಿ ಕೊನೆಗಾಣಿಸಲು ಈ ಹೋರಾಟ ನಾಂದಿಯಾಗಬೇಕು. ನನ್ನ ಕೊನೆಯುಸಿರು ಇರುವವರೆಗೂ ಈ ಸಮರಕ್ಕೆ ಬೆಂಬಲ ನೀಡುತ್ತೇನೆ. ರಾಜ್ಯದ ಮುಖ್ಯಮಂತ್ರಿ, ಸಂಬಂಧಪಟ್ಟ ಅಧಿಕಾರಿ ಗಳು ಹಾಸನಕ್ಕೆ ಬಂದು ನೊಂದ ಮಹಿಳೆಯರಿಗೆ ಸಾಂತ್ವನ ಹೇಳುವ ಕೆಲಸ ಮಾಡಬೇಕು ಎಂದು ಆಗ್ರಹಿಸುತ್ತೇನೆ ಎಂದರು.

ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಮಾತನಾಡಿ, ಹುಬ್ಬಳ್ಳಿಯ ನೇಹಾ ಮನೆಗೆ ಧಾವಿಸಿದ ಬಿಜೆಪಿ ಮುಖಂಡರು ಹಾಸನದ ನೂರಾರು ಮಹಿಳೆಯರ ಬಗ್ಗೆ ಕಾಳಜಿ ತೋರಲಿಲ್ಲ. ಮಾಜಿ ಪ್ರಧಾನಿ ದೇವೇಗೌಡರು ನೊಂದ ಮಹಿಳೆಯರ ಬಗ್ಗೆ ಚಕಾರವೆತ್ತಿಲ್ಲ. ಇದು ಹೆಣ್ಣಿನ ವಿಚಾರವಾಗಿದ್ದು, ಯಾರೂ ಇದರಲ್ಲಿ ರಾಜಕಾರಣ ಬೆರೆಸಬಾರದು ಎಂದರು.

ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಸಂಪತ್ತಿನ ಅಹಂಕಾರ, ಮದದಿಂದ ಈ ಕೃತ್ಯಗಳು ನಡೆದಿವೆ. ಈ ರೀತಿಯ ಪ್ರಕರಣಗಳು ಇನ್ನು ಮುಂದೆ ಎಲ್ಲಿಯೇ ನಡೆದರೂ ನಾವು ಬಿಡುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ಗೆದ್ದರೂ ಆತನಿಗೆ ರಾಜೀನಾಮೆ ಕೊಡಿಸುವ ನಿಟ್ಟಿನಲ್ಲಿ ಮುಂದಿನ ಹೋರಾಟ ರೂಪುಗೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಹೋರಾಟಗಾರರಾದ ಸುಭಾಷಿಣಿ ಅಲಿ, ಇಂದಿರಾ ಕೃಷ್ಣಪ್ಪ, ಸಬೀಹಾ ಭೂಮಿಗೌಡ, ಶೊಭಾ, ಮಲ್ಲಿಗೆ ಸಿರಿಮನೆ, ಡಾ.ಸಿದ್ದನಗೌಡ ಪಾಟೀಲ್, ಸುನಂದಾ ಜಯರಾಮ್, ಪ್ರಕಾಶಿ, ಎ.ಜ್ಯೋತಿ, ಮೈತ್ರೇಯಿ ಕೃಷ್ಣನ್, ಯು.ಬಸವರಾಜು, ಗುರುಪ್ರಸಾದ್ ಕೆರಗೋಡು ಇತರರು ಮಾತನಾಡಿದರು. ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶಮೂರ್ತಿ, ಮುಖಂಡರಾದ ಎಚ್.ಕೆ.ಸಂದೇಶ್, ಇರ್ಷಾದ್ ಅಹ್ಮದ್, ರಾಜಶೇಖರ್, ಎಂ.ಸಿ.ಡೋಂಗ್ರೆ, ರಾಜು ಗೊರೂರು, ಟಿ.ಆರ್.ವಿಜಯ್ ಕುಮಾರ್, ಕೆ.ಟಿ.ಸುವರ್ಣ, ಎಂ.ಜಿ.ಪೃಥ್ವಿ, ಎಂ.ಸೋಮಶೇಖರ್, ಮಮತಾ, ಡಾ.ಭಾರತೀ ರಾಜಶೇಖರ್ ಇತರರು ಭಾಗವಹಿಸಿದ್ದರು.

ಜಿಲ್ಲೆಯಲ್ಲಿ ನಡೆದಿರುವ ಈ ಪ್ರಕರಣ ಎಲ್ಲರೂ ತಲೆತಗ್ಗಿಸುವಂಥದ್ದು, ರೈತರು, ದಲಿತರು, ಮಹಿಳಾ ಹೋರಾಟ ಮತ್ತು ಜನಪರ ಹೋರಾಟಗಳ ತಾಣವಾಗಿದ್ದ ಈ ಜಿಲ್ಲೆಯಲ್ಲಿ ಇಂತಹ ಘೋರ ಪ್ರಕರಣ ನಡೆದಿರುವುದು ನಾಚಿಕೆಗೇಡು. ರಾಜ್ಯ ಸರಕಾರ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ನೊಂದವರಿಗೆ ರಕ್ಷಣೆ ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲೇಬೇಕು.

₹ಮಾವಳ್ಳಿ ಶಂಕರ್, ದಲಿತ ಸಂಘಟನೆಗಳ ಚಾಲನಾ ಸಮಿತಿ ಅಧ್ಯಕ್ಷ

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

ಹಾಸನ ಜಿಲ್ಲಾಧಿಕಾರಿ ಹಾಸನ ಚಲೋ ಪ್ರತಿಭಟನೆಯ ಮನವಿ ಸ್ವೀಕರಿಸಲು ಪ್ರತಿಭಟನಾ ಸ್ಥಳಕ್ಕೆ ಬರದೇ ಇರುವುದನ್ನು ಖಂಡಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.

ಬೆಳಗ್ಗೆ 11 ಗಂಟೆಯಿಂದ ಪ್ರಾರಂಭವಾದ ಪ್ರತಿಭಟನೆ ಮಧ್ಯಾಹ್ನ 3 ಗಂಟೆಯವರೆಗೆ ನಡೆದರೂ ಜಿಲ್ಲಾಧಿಕಾರಿಯಾಗಲಿ ಅಥವಾ ಜಿಲ್ಲಾಡಳಿತದಿಂದ ಯಾವುದೇ ಅಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಬರಲಿಲ್ಲ. ಇದರಿಂದ ಹತಾಶರಾದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.

ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಹಮ್ಮದ್ ಸುಜೀತಾ, ಪ್ರತಿಭಟನಾಕಾರರನ್ನು ಜಿಲ್ಲಾಧಿಕಾರಿಯ ಸಭಾಂಗಣಕ್ಕೆ ಕರೆದು ಮನವಿ ಸಲ್ಲಿಸಲು ಅವಕಾಶ ಮಾಡಿಕೊಟ್ಟರು. ಅಪರ ಜಿಲ್ಲಾಧಿಕಾರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಇಲ್ಲಿ ನಡೆದಿರುವುದು ಕೇವಲ ಲೈಂಗಿಕ ಹಗರಣ ಮಾತ್ರವಲ್ಲ. ಇದು ಹೆಣ್ಣುಮಕ್ಕಳ ಮಾನ, ಪ್ರಾಣ ಹಾಗೂ ಅವರ ಕುಟುಂಬವನ್ನು ಪಣಕಿಟ್ಟು ಸಂಸದನೊಬ್ಬ ನಡೆಸಿರುವ ಕಾಮಕೃತ್ಯ. ಸಂತ್ರಸ್ತ ಮಹಿಳೆಯರು ಧೃತಿಗೆಡಬೇಕಿಲ್ಲ. ಅವರೊಂದಿಗೆ ನಾವಿದ್ದೇವೆ. ನೊಂದ ಮಹಿಳೆಯರು ಧೈರ್ಯವಾಗಿ ಮನೆಯಿಂದ ಹೊರಬಂದು ಎಸ್‌ಐಟಿ ಮುಂದೆ ದೂರು ದಾಖಲಿಸಬೇಕು.

-ರೂಪಾ ಹಾಸನ, ಸಾಹಿತಿ

ಪ್ರಜ್ವಲ್ ಗೆದ್ದರೂ ಆತನನ್ನು ಒಪ್ಪಿಕೊಳ್ಳಬೇಡಿ: ಕೆ.ನೀಲಾ

ಪ್ರಜ್ವಲ್ ಗೆದ್ದರೂ, ಸೋತರೂ ಆತನನ್ನು ಒಪ್ಪಿಕೊಳ್ಳಬೇಡಿ. ಹುಚ್ಚಾಸ್ಪತ್ರೆಯಲ್ಲಿ ಇರಬೇಕಾ ದವನನ್ನು ಎಂಪಿ ಮಾಡದಿರಿ. ಬಿಜೆಪಿಯವರು ನೇಹಾ ಪ್ರಕರಣಕ್ಕೆ ಕೋಮು ಬಣ್ಣ ಬಳಿದರು. ಹಾಸನಕ್ಕೆ ಬಂದು ಅತ್ಯಾಚಾರಿ ಪ್ರಜ್ವಲ್‌ಗೆ ಮತ ಕೇಳಿದ್ದಾರೆ. ಪ್ರಧಾನಿ ಮೋದಿ, ಶೋಭಕ್ಕ, ಅಮಿತ್ ಶಾ ಎಲ್ಲರೂ ಎಲ್ಲಿದ್ದೀರಿ. ಹಾಸನಕ್ಕೆ ಕಾಂಗ್ರೆಸ್, ಬಿಜೆಪಿ- ಜೆಡಿಎಸ್ ಮೂರು ಪಕ್ಷದವರು ಯಾರೂ ಒಳ್ಳೆಯದನ್ನು ಮಾಡಿಲ್ಲ. ಹಾಸನದ ಜನತೆಯ ಬದುಕಲ್ಲಿ ಆಟ ಆಡಿದ್ದಾರೆ ಎಂದು ಹೋರಾಟಗಾರ್ತಿ ಕೆ.ನೀಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News