ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ವಿರುದ್ಧ ಹಾಸನ ಚಲೋ: ಬೃಹತ್ ಪ್ರತಿಭಟನಾ ಮೆರವಣಿಗೆ, ಸಮಾವೇಶ

Update: 2024-05-30 14:57 GMT
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ವಿರುದ್ಧ ಹಾಸನ ಚಲೋ: ಬೃಹತ್ ಪ್ರತಿಭಟನಾ ಮೆರವಣಿಗೆ, ಸಮಾವೇಶ
  • whatsapp icon

ಹಾಸನ, ಮೇ 30: ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ವಿರುದ್ಧ ಕರ್ನಾಟಕ ಜನಪರ ಚಳವಳಿಗಳ ಒಕ್ಕೂಟದಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ಹೋರಾಟದ ನಡಿಗೆ ಹಾಸನದ ಕಡೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಮಾವೇಶ ಯಶಸ್ವಿಯಾಗಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ನುರಾರು ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಪ್ರಜ್ವಲ್ ರೇವಣ್ಣ ವಿರುದ್ಧ ಧಿಕ್ಕಾರ ಕೂಗಿದರು.

ಅಶ್ಲೀಲ ವೀಡಿಯೊಗಳ ಪೆನ್‌ಡ್ರೈವ್ ಹಂಚಿದವರನ್ನ್ನೂ ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಸಂತ್ರಸ್ತೆಯರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಹೋರಾಟಗಾರರು, ಹಳೇ ಬಸ್ ನಿಲ್ದಾಣ, ಎನ್.ಆರ್.ವೃತ್ತ, ಬಿಎಂ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡರು.

ಜಿಲ್ಲೆಯ ಹೆಣ್ಣು ಮಕ್ಕಳ ಮಾನ ಹರಾಜು ಹಾಕಿರುವ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬರುತ್ತಿದ್ದಂತೆ ಬಂಧಿಸಬೇಕು. ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನೂ ಶಿಕ್ಷಗೆ ಗುರಿಪಡಿಸಬೇಕು, ಪ್ರಕರಣದಲ್ಲಿ ಸಂತ್ರಸ್ತರಾಗಿರುವ ಮಹಿಳೆಯರು ಹಾಗೂ ಯುವತಿಯರ ಆತ್ಮ ಗೌರವ ಕಾಪಾಡಲು ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನೆಯಲ್ಲಿ ಸಾಹಿತಿಗಳು, ಚಿಂತಕರು, ವಿಚಾರವಂತರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ಸಂಸದೆ ಹಾಗೂ ಮಹಿಳಾ ಹೋರಾಟಗಾರ್ತಿ ಸುಭಾಷಿಣಿ ಅಲಿ ಮಾತನಾಡಿ, ಹಾಸನದಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ, ಸಂತ್ರಸ್ತೆಯರಿಗೆ ಧೈರ್ಯ ತುಂಬಲು ನಾವಿಲ್ಲಿದ್ದೇವೆ. ರೇವಣ್ಣ ಕುಟುಂಬವು ರಾಜಕೀಯ, ಹಣ ಬಲದಿಂದ ನಡೆಸುವ ಅವ್ಯವಹಾರಗಳಿಗೆ, ದರ್ಪಕ್ಕೆ ಇನ್ನು ಉಳಿಗಾಲವಿಲ್ಲ. ಕೇಂದ್ರದಲ್ಲಿರುವ ಬಿಜೆಪಿ ಸರಕಾರ ‘ಬಲತ್ಕಾರಿಗಳ ಬಚಾವ್’ ಮಾಡುವ ಸರಕಾರವಾಗಿದೆ. ಆ ಸರಕಾರವನ್ನು ಚುನಾವಣೆಯಲ್ಲಿ ಕೆಳಗಿಸಬೇಕು ಎಂದು ಹೇಳಿದ್ದಾರೆ.

ಶತಮಾನಗಳಿಂದಲೂ ಮಹಿಳಾ ಸಂಘಟನೆ ಸಂಘರ್ಷ ಮಾಡುತ್ತಿದ್ದು, ಸಂವಿಧಾನ ಜಾರಿಯಾದ ನಂತರವೂ ದೇಶದ ವಿವಿಧ ಭಾಗಗಳಲ್ಲಿ ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಇದೆ. ಭಾರತದಲ್ಲಿ ಸಾವಂತವಾದ, ಪುರುಷವಾದ ಬೇರೂರಿದೆ. ಜೊತೆಗೆ, ಬಂಡವಾಳ ಮತ್ತು ಮತೀಯವಾದವೂ ಸೇರಿಕೊಂಡಿದೆ. ಇವುಗಳನ್ನು ಒಡೆಯದಿದ್ದರೆ ನಮಗೆ ಯಾರಿಗೂ ಉಳಿವಿಲ್ಲ. ಪ್ರಜ್ವಲ್ ರೇವಣ್ಣ ಮತ್ತು ಆತನ ತಂದೆ ರೇವಣ್ಣನನ್ನು ಬಂಧಿಸಿ, ಜೈಲಿಗಟ್ಟಬೇಕು. ಅವರಿಗೆ ‘ಓನ್ಲೀ ಜೈಲ್, ನೋ ಬೇಲ್’. ಇದುವೇ ನಮ್ಮ ಪ್ರಮುಖ ಒತ್ತಾಯ ಎಂದರು.

ಸರಕಾರಿ ಅಧಿಕಾರಿಗಳು, ಕಾರ್ಯಕರ್ತರು ಅಸಹಾಯಕ ಹೆಣ್ಣುಮಕ್ಕಳು ಸಣ್ಣ ಪುಟ್ಟ ಸಹಾಯ ಕೇಳಲು ಬಂದಾಗ ಅವರ ಮೇಲೆ ರೇವಣ್ಣ ಮತ್ತು ಆತನ ಪುತ್ರ ದೌರ್ಜನ್ಯ ಎಸಗಿದ್ದಾರೆ. ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸಬೇಕು. ಪರಿಹಾರ ನೀಡಬೇಕು. ಆಪ್ತ ಸಮಾಲೋಚನೆ ಒದಗಿಸಬೇಕು ಎಂದು ಆಗ್ರಹಿಸಿದರು.

ಹಿರಿಯ ವಕೀಲ ಎಸ್.ಬಾಲನ್, ಹೋರಾಟಗಾರ್ತಿ ಕೆ.ನೀಲಾ ಜನಪರ ಸಂಘಟನೆಗಳ ಒಕ್ಕೂಟದ ಮುಖಂಡ ಧರ್ಮೇಶ್, ಹಿರಿಯ ಬರಹಗಾರ ಎಸ್.ಆರ್.ಹಿರೇಮಠ್, ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ,ದಲಿತ ಸಂಘಟನೆಗಳ ಚಾಲನಾ ಸಮಿತಿ ಅಧ್ಯಕ್ಷ ಮಾವಳ್ಳಿ ಶಂಕರ್, ರಾಜ್ಯ ರೈತಸಂಗದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಈ ಸಂದರ್ಭದಲ್ಲಿ ಮಾತನಾಡಿದರು. ಬಹಿರಂಗ ಸಮಾವೇಶದ ಅಧ್ಯಕ್ಷತೆಯನ್ನು ರೂಪಾ ಹಾಸನ ವಹಿಸಿದ್ದರು.

ಹೋರಾಟಗಾರರಾದ ಸುಧಾಮಣಿ ಆಲಿ, ಇಂದಿರಾ ಕೃಷ್ಣಪ್ಪ, ಸಬೀಹಾ ಭೂಮಿಗೌಡ, ಶೊಭಾ, ಮಲ್ಲಿಗೆ ಸಿರಿಮನೆ, ಡಾ.ಸಿದ್ದನಗೌಡ ಪಾಟೀಲ್, ಕೆ.ನೀಲಾ, ಸುನಂದಾ ಜಯರಾಮ್, ಪ್ರಕಾಶಿ, ಎ.ಜ್ಯೋತಿ, ಮೈತ್ರೇಯಿ ಕೃಷ್ಣನ್, ಯು.ಬಸವರಾಜು, ಗುರುಪ್ರಸಾದ್ ಕೆರಗೋಡು ಇತರರು ಮಾತನಾಡಿದರು. ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶಮೂರ್ತಿ, ಮುಖಂಡರಾದ ಎಚ್.ಕೆ.ಸಂದೇಶ್, ಇರ್ಷಾದ್ ಅಹ್ಮದ್, ರಾಜಶೇಖರ್, ಎಂ.ಸಿ.ಡೋಂಗ್ರೆ, ರಾಜು ಗೊರೂರು, ಟಿ.ಆರ್.ವಿಜಯ್ ಕುಮಾರ್, ಕೆ.ಟಿ.ಸುವರ್ಣ, ಎಂ.ಜಿ.ಪೃಥ್ವಿ, ಎಂ.ಸೋಮಶೇಖರ್, ಮಮತಾ ಶಿವು, ಡಾ.ಭಾರತೀ ರಾಜಶೇಖರ್, ಇತರರು ಭಾಗವಹಿಸಿದ್ದರು.





Full View

 


 


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News