ಹಲಸಿನಕಾಯಿ ಹಿಟ್ಟು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸುತ್ತದೆ, ಹೇಗೆ ಗೊತ್ತೇ?

Update: 2023-07-18 13:55 GMT

ಹೆಚ್ಚಿನ ಕಾರ್ಬೊಹೈಡ್ರೇಟ್ಗಳಿರದ, ರುಚಿಯಲ್ಲಿ ಯಾವುದೇ ವ್ಯತ್ಯಾಸವಿರದ ಮತ್ತು ಪಿಷ್ಟಗಳಿಂದ ಕೂಡಿದ ಊಟದಷ್ಟೇ ತೃಪ್ತಿಯನ್ನು ನೀಡುವ ದೋಸಾ,ಇಡ್ಲಿ ಅಥವಾ ಚಪಾತಿಯನ್ನು ನೀವು ತಿನ್ನಬಹುದೆಂದು ನೀವೆಂದಾದರೂ ಭಾವಿಸಿದ್ದೀರಾ? ಇದೇ ಕಾರಣದಿಂದ ಕೇರಳದ ಜೇಮ್ಸ್ ಜೋಸೆಫ್ ಅವರು ಪೇಟೆಂಟ್ ಹೊಂದಿರುವ ಹಲಸಿನ ಕಾಯಿ ಹಿಟ್ಟು ಭವಿಷ್ಯದ ಸೂಪರ್ಫುಡ್ ಆಗಿ ಸುದ್ದಿಯಲ್ಲಿದೆ. ಅವರು ಮಧುಮೇಹದಿಂದ ಬಳಲುತ್ತಿರುವ ಜನರಿಗಾಗಿ ಒಣಗಿದ ಮತ್ತು ಬಲಿಯದ ಹಲಸಿನ ಬೀಜಗಳು ಮತ್ತು ಸೊಳೆಗಳನ್ನು ಹೆಚ್ಚು ನಾರಿನಿಂದ ಕೂಡಿರುವ ಹಿಟ್ಟನ್ನಾಗಿ ಸಿದ್ಧಪಡಿಸುವ ವಿಧಾನವನ್ನು ಅಭಿವೃದ್ಧಿಗೊಳಿಸಿದ್ದಾರೆ. ವ್ಯಕ್ತಿಯು ತನ್ನ ಪ್ರತಿ ಊಟದಲ್ಲಿ ಅಥವಾ ಗೋದಿಹುಡಿಯಲ್ಲಿ ಒಂದು ಚಮಚೆ ಹಲಸಿನಕಾಯಿ ಹಿಟ್ಟನ್ನು ಸೇರಿಸುವುದರಿಂದ ಕ್ಯಾಲೊರಿಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎನ್ನುತ್ತಾರೆ ಜೋಸೆಫ್.

ಚೆನ್ನೈನ ಮಧುಮೇಹ ತಜ್ಞ ಡಾ.ವಿ.ಮೋಹನ ಹೇಳುವಂತೆ ಕಾರ್ಬೊಹೈಡ್ರೇಟ್ನ್ನು ಇಷ್ಟಪಡುವ ಭಾರತೀಯರಿಗೆ ಪರ್ಯಾಯ ಆಯ್ಕೆಯಾಗಬಹುದಾದ ಹಿಟ್ಟು ಇಲ್ಲದಿದ್ದರೂ ಆಹಾರದಲ್ಲಿ ಬಲಿಯದ ಹಲಸು ಗಣನೀಯ ಪ್ರಮಾಣದಲ್ಲಿದ್ದರೆ ಮಧುಮೇಹದ ನಿರ್ವಹಣೆಗೆ ನೆರವಾಗುತ್ತದೆ.

ಆಹಾರ ಕ್ರಮದಲ್ಲಿ ಬದಲಾವಣೆಗಳು ಮಧುಮೇಹ ನಿಯಂತ್ರಣದಲ್ಲಿ ಪ್ರಮುಖವಾಗಿವೆ ಎಂದ ಡಾ.ಮೋಹನ್,‘ಹಲಸಿನಕಾಯಿ ಹಿಟ್ಟಿನ ಬೆಳವಣಿಗೆಯನ್ನು ನಾನು ಆಸಕ್ತಿಯಿಂದ ಗಮನಿಸುತ್ತಿದ್ದೇನೆ. ಅದರ ಪರಿಣಾಮಕಾರಿತ್ವವನ್ನು ಸಾಬೀತುಗೊಳಿಸಲು ಕೆಲವು ವೈಜ್ಞಾನಿಕ ಅಧ್ಯಯನಗಳು ನಡೆದಿವೆ. ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಹೊಂದಿರುವ ಕಾರ್ಬೊಹೈಡ್ರೇಟ್ಗಳ ಬದಲು ಕಡಿಮೆ ಜಿಐ ಹೊಂದಿರುವ ಕಾಬೊಹೈಡ್ರೇಟ್ಗಳನ್ನು ಸೇವಿಸಿದರೆ ರಕ್ತದಲ್ಲಿಯ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ ಎನ್ನುವುದು ಇಲ್ಲಿಯ ಮೂಲಭೂತ ತತ್ತ್ವವಾಗಿದೆ. 

ಬಲಿಯದ ಹಲಸು ಮಧ್ಯಮ ಜಿಐ ಹೊಂದಿದೆ. ಅಕ್ಕಿಯ ಹುಡಿಯಲ್ಲಿ ಶೇ.೫೦ರಷ್ಟು ಹಲಸಿನಕಾಯಿ ಹಿಟ್ಟನ್ನು ಸೇರಿಸುವುದರಿಂದ ಜಿಐ ಅನ್ನು ತಗ್ಗಿಸಬಹುದು,ಅದು ಆಹಾರದಲ್ಲಿಯ ಗ್ಲೈಸೆಮಿಕ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದಲ್ಲಿ ಸಕ್ಕರೆಯ ಮಟ್ಟದ ಏರಿಳಿತವನ್ನು ತಡೆಯುತ್ತದೆ ಎನ್ನುವುದನ್ನು ಜೋಸೆಫ್ ನಡೆಸಿದ ಅಧ್ಯಯನಗಳು ತೋರಿಸಿವೆ. ಆದರೆ ಹಿಟ್ಟು ಹಲಸಿನ ಕಾಯಿಯದ್ದಾಗಿರಬೇಕು,ಬಲಿತ ಹಲಸಿನದಾದರೆ ಅದು ಮಾವಿನ ಹಣ್ಣಿನಂತೆ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಬಲಿತಿರದ ಹಲಸಿನ ಬಳಕೆಯು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಸಾಧ್ಯತೆಯಿಲ್ಲ ಮತ್ತು ಬೆಳ್ತಿಗೆ ಅಕ್ಕಿ ಆಧಾರಿತ ಉತ್ಪನ್ನಗಳ ಒಟ್ಟಾರೆ ಸೇವನೆಯನ್ನು ಕಡಿಮೆ ಮಾಡಬಹುದು ’ ಎಂದು ಹೇಳಿದರು.

ಟೈಪ್ ೨ ಮಧುಮೇಹದಲ್ಲಿ ಗ್ಲೈಸೆಮಿಕ್ ನಿಯಂತ್ರಣವನ್ನು ಹೆಚ್ಚಿಸುವ ಸಾಮಥ್ಯವನ್ನು ಹಲಸಿನ ಹಿಟ್ಟು ಹೊಂದಿದೆ ಎನ್ನುವುದನ್ನು ಆಂಧ್ರಪ್ರದೇಶದ ಶ್ರೀಕಾಕುಳಮ್ನಲ್ಲಿಯ ಗವರ್ನಮೆಂಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಡೆಸಿರುವ ಅಧ್ಯಯನವು ಸೂಚಿಸಿದೆ.

ಹಸಿರು ಹಲಸಿನಲ್ಲಿರುವ ನಾರು ಮತ್ತು ಪ್ರೋಟಿನ್ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತವೆ, ಪರಿಣಾಮವಾಗಿ ಜೀರ್ಣಾಂಗದಲ್ಲಿರುವ ಆಹಾರದಿಂದ ಸಕ್ಕರೆಯ ಬಿಡುಗಡೆಯು ನಿಧಾನಗೊಳ್ಳುತ್ತದೆ. ಇದು ಸಕ್ಕರೆಯ ಮಟ್ಟದ ಸ್ಥಿರೀಕರಣಕ್ಕೆ ನೆರವಾಗುತ್ತದೆ. ಅಲ್ಲದೆ ನಾರು ಮತ್ತು ಪ್ರೋಟಿನ್ ತುಂಬ ಹೊತ್ತು ಹಸಿವೆಯನ್ನುಂಟು ಮಾಡುವುದಿಲ್ಲ,ತನ್ಮೂಲಕ ಅತಿಯಾಗಿ ತಿನ್ನುವುದನ್ನು ತಡೆಯುತ್ತವೆ. ಇದರಿಂದಾಗಿ ಶರೀರದ ತೂಕವು ಆರೋಗ್ಯಕರ ಮಟ್ಟದಲ್ಲಿರುತ್ತದೆ ಎಂದು ಡಾ.ಮೋಹನ ಹೇಳಿದರು.

ಸಿಡ್ನಿ ವಿವಿಯ ಗ್ಲೈಸೆಮಿಕ್ ಇಂಡೆಕ್ಸ್ ಸಂಶೋಧನಾ ಕೇಂದ್ರದ ಅಧ್ಯಯನವೂ ಬಲಿಯದ ಹಲಸಿನ ಸೇವನೆಯು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ ಎಂದು ಹೇಳಿದೆ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News