ಐಸಿಎಂಆರ್ ವರದಿಯಂತೆ ಶೇ.25ರಷ್ಟು ಭಾರತೀಯರು ಬೊಜ್ಜು ಹೊಂದಿದ್ದಾರೆ. ನಿಮ್ಮ ಆರೋಗ್ಯ ಕಾಯ್ದುಕೊಳ್ಳಲು ಮಾರ್ಗ ಇಲ್ಲಿದೆ...

Update: 2024-05-27 13:23 GMT

ಹೊಸದಿಲ್ಲಿ: ಬೊಜ್ಜುರಹಿತ, ತೆಳ್ಳಗಿನ ಶರೀರವನ್ನು ಹೊಂದಲು ಕಾತರಿಸುವವರು ತ್ವರಿತವಾಗಿ ದೇಹತೂಕವನ್ನು ಕಡಿಮೆ ಮಾಡಿಕೊಳ್ಳಲು ಅವಾಸ್ತವಿಕ ನಿರೀಕ್ಷೆಯೊಂದಿಗೆ ತಮಗೆ ತೋಚಿದಂತೆ ಪಥ್ಯವನ್ನು ಅನುಸರಿಸುತ್ತಾರೆ ಮತ್ತು ಇದು ಬೊಜ್ಜನ್ನು ಕಡಿಮೆ ಮಾಡುವ ಬದಲು ವ್ಯತಿರಿಕ್ತ ಪರಿಣಾಮಗಳನ್ನು ಬೀರುವುದೇ ಹೆಚ್ಚು. ಆದರೆ ಇದೀಗ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯು ಉಲ್ಲಾಸಕರ ಬದಲಾವಣೆಯೊಂದನ್ನು ಸೂಚಿಸಿದೆ. ಅದು ಇತ್ತೀಚಿಗೆ ಬಿಡುಗಡೆಗೊಳಿಸಿರುವ ತೂಕ ನಷ್ಟ ಮಾರ್ಗಸೂಚಿಗಳು ಸಮತೋಲಿತ ವಿಧಾನಕ್ಕೆ ಆದ್ಯತೆ ನೀಡಿವೆ, ತ್ವರಿತ ಪರಿಹಾರಗಳ ಬದಲು ದೀರ್ಘಕಾಲೀನ ಆರೋಗ್ಯದ ಮೇಲೆ ಗಮನವನ್ನು ಕೇಂದ್ರೀಕರಿಸಿವೆ.

ಐಸಿಎಂಆರ್ ವರದಿಯು ಕಳವಳಕಾರಿ ಅಂಕಿಅಂಶಗಳನ್ನು ಬಹಿರಂಗಗೊಳಿಸಿದೆ. ಸುಮಾರು ಶೇ.25ರಷ್ಟು ಭಾರತೀಯರನ್ನು ಅಧಿಕ ತೂಕವನ್ನು ಹೊಂದಿರುವವರು ಅಥವಾ ಬೊಜ್ಜುದೇಹಿಗಳು ಎಂದು ಅದು ವರ್ಗೀಕರಿಸಿದೆ. ನಮ್ಮ ಹೆಚ್ಚುತ್ತಿರುವ ಜಡ ಜೀವನಶೈಲಿ, ಸಂಸ್ಕರಿತ ಆಹಾರದೆಡೆಗಿನ ಒಲವು ಮತ್ತು ದೈಹಿಕ ಚಟುವಟಿಕೆಗಳ ಸಾಮಾನ್ಯ ಕೊರತೆ ಇವು ಬೊಜ್ಜುತನ ಹೆಚ್ಚಲು ಕಾರಣವಾಗಿವೆ ಎನ್ನುತ್ತಾರೆ ಜಿಂದಾಲ್ ನೇಚರ್ಕ್ಯೂರ್ ಇನ್ಸ್ಟಿಟ್ಯೂಟ್ ನ ಹಿರಿಯ ಪ್ರಕೃತಿ ಚಿಕಿತ್ಸಕ ಡಾ.ಶ್ರೀಕಾಂತ ಎಚ್.ಎಸ್.

ಹೆಚ್ಚುತ್ತಿರುವ ಈ ಆರೋಗ್ಯ ಬೆದರಿಕೆಯನ್ನು ಎದುರಿಸಲು ಎರಡು ಆಯಾಮಗಳ ವಿಧಾನವು ಅಗತ್ಯವಿದೆ; ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಮತ್ತು ದಿನಚರಿಯಲ್ಲಿ ನಿಯಮಿತ ವ್ಯಾಯಾಮವನ್ನು ಸೇರಿಸಿಕೊಳ್ಳುವುದು.

ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳುವವರು ಕಡಿಮೆ ಕ್ಯಾಲೊರಿಗಳ ಸೇವನೆಯ ಮೇಲಷ್ಟೇ ಗಮನವನ್ನು ಕೆಂದ್ರೀಕರಿಸುತ್ತಾರೆ. ತೂಕ ನಷ್ಟ ಕುರಿತ ಚರ್ಚೆಗಳಲ್ಲಿಯೂ ಇದೇ ಪ್ರಮುಖವಾಗಿದೆ. ಇದಕ್ಕೆ ವಿದಾಯ ಹೇಳಿರುವ ಐಸಿಎಂಆರ್ ಮಾರ್ಗಸೂಚಿಗಳು ಬದಲಿಗೆ ಹಣ್ಣು, ತರಕಾರಿ ಮತ್ತು ಬೇಳೆಕಾಳುಗಳು ಸಮೃದ್ಧವಾಗಿರುವ ಸಮತೋಲಿತ ಆಹಾರದ ಪ್ರಾಮುಖ್ಯಕ್ಕೆ ಒತ್ತು ನೀಡಿವೆ.

ಡಾ. ಶ್ರೀಕಾಂತ ಅವರ ಪ್ರಕಾರ ಇದು ವ್ಯಕ್ತಿಗಳು ತಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಪಡೆಯುವುದನ್ನು ಖಚಿತಪಡಿಸುತ್ತದೆ, ಇದೇ ವೇಳೆ ಹೊಟ್ಟೆ ತುಂಬಿದ ಭಾವನೆಯನ್ನುಂಟು ಮಾಡುತ್ತದೆ ಮತ್ತು ಆಗಾಗ್ಗೆ ಆಹಾರ ಸೇವನೆಯ ತುಡಿತವನ್ನು ಕಡಿಮೆ ಮಾಡುತ್ತದೆ.

ಐಸಿಎಂಆರ್ ವಾರಕ್ಕೆ ಅರ್ಧ ಕೆಜಿ ತೂಕವನ್ನು ಸುರಕ್ಷಿತವಾಗಿ ಕಡಿಮೆ ಮಾಡುವ ಉದ್ದೇಶದೊಂದಿಗೆ ಕ್ರಮೇಣ ತೂಕ ನಷ್ಟದ ವಿಧಾನವನ್ನು ಶಿಫಾರಸು ಮಾಡಿದೆ. ಈ ನಿಧಾನ ಗತಿಯು ದೇಹವು ಬದಲಾವಣೆಗಳಿಗೆ ಹೊಂದಿಕೊಳ್ಳಲು ಅವಕಾಶ ನೀಡುತ್ತದೆ ಮತ್ತು ತ್ವರಿತ ತೂಕನಷ್ಟದೊಂದಿಗೆ ಹೆಚ್ಚಾಗಿ ಗುರುತಿಸಿಕೊಂಡಿರುವ ಸ್ನಾಯು ನಷ್ಟದ ಅಪಾಯವನ್ನು ತಗ್ಗಿಸುತ್ತದೆ ಎನ್ನುತ್ತಾರೆ ಡಾ.ಶ್ರೀಕಾಂತ.

ಐಸಿಎಂಆರ್ ಮಾರ್ಗಸೂಚಿಗಳು ಮೌಲ್ಯಯುತ ಚೌಕಟ್ಟನ್ನು ಒದಗಿಸುತ್ತವೆಯಾದರೂ ವೈಯಕ್ತಿಕ ಅಗತ್ಯಗಳು ಬದಲಾಗಬಹುದು ಎನ್ನುವುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯವಾಗಿದೆ. ಆಹಾರ ತಜ್ಞರು ಅಥವಾ ಆರೋಗ್ಯ ವೃತ್ತಿಪರರೊಂದಿಗೆ ಸಮಾಲೋಚನೆಯು ನಿಮ್ಮ ನಿರ್ದಿಷ್ಟ ಆರೋಗ್ಯ ಗುರಿಗಳು ಮತ್ತು ಸಂದರ್ಭಗಳಿಗೆ ಈ ಶಿಫಾರಸುಗಳನ್ನು ಅನುಗುಣಗೊಳಿಸಲು ನೆರವಾಗುತ್ತದೆ.

ಡಾ.ಶ್ರೀಕಾಂತ ಅವರು ಐಸಿಎಂಆರ್ ಶಿಫಾರಸುಗಳಿಗೆ ಪೂರಕವಾಗಿ ಕೆಲವು ಪ್ರಾಯೋಗಿಕ ಟಿಪ್ಸ್ ನೀಡಿದ್ದಾರೆ.

ಅಧಿಕ ದೇಹತೂಕವನ್ನು ಹೊಂದಿದ್ದರೂ ವ್ಯಕ್ತಿಗಳು ತಮ್ಮ ಶರೀರದ ದೈನಂದಿನ ಅಗತ್ಯಗಳನ್ನು ಪೂರೈಸಲು ತಮ್ಮ ಆಹಾರದಲ್ಲಿ ಸುಮಾರು 1,000 ಕ್ಯಾಲೊರಿಗಳನ್ನು ಸೇರಿಸಿಕೊಳ್ಳಬಹುದು. ಇದರಿಂದ ಅವರು ವ್ಯಾಯಾಮ ಮಾಡುವಾಗ ದಣಿಯುವುದಿಲ್ಲ. ಅಗತ್ಯ ವಿಟಾಮಿನ್ಗಳು ಮತ್ತು ಖನಿಜಗಳನ್ನು ಪಡೆಯಲು ಪೋಷಕಾಂಶಭರಿತ ಆಹಾರಗಳ ಸೇವನೆ ಮುಖ್ಯ ಎನ್ನುತ್ತಾರೆ ಡಾ.ಶ್ರೀಕಾಂತ.

ತೂಕನಷ್ಟದ ಸಂದರ್ಭದಲ್ಲಿ ವರ್ಣರಂಜಿತ ತರಕಾರಿಗಳ ಸೇವನೆಯನ್ನು ಐಸಿಎಂಆರ್ ಶಿಫಾರಸು ಮಾಡಿದೆ. ಹಸಿರು ತರಕಾರಿಗಳು ಕಡಿಮೆ ಕ್ಯಾಲೊರಿಗಳಿರುವ ಪ್ರೋಟಿನ್ಗಳನ್ನು ಒದಗಿಸುತ್ತವೆ,ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ ಮತ್ತು ಹೆಚ್ಚು ಸಮಯ ಹಸಿವಿನ ಭಾವನೆಯನ್ನುಂಟು ಮಾಡುವುದಿಲ್ಲ ಎನ್ನುತ್ತಾರೆ ಡಾ.ಶ್ರೀಕಾಂತ.

ಆಹಾರಗಳಲ್ಲಿಯ ಪೋಷಕಾಂಶಗಳ ಬಗ್ಗೆ ತಿಳಿದುಕೊಳ್ಳಲು ಅವುಗಳ ಲೇಬಲ್ಗಳ ಪರಿಶೀಲನೆ ಮತ್ತು ಆರೋಗ್ಯಕರ ಅಡಿಗೆ ತಯಾರಿಕೆ ವಿಧಾನಗಳೂ ಮುಖ್ಯವಾಗಿವೆ.

ನೆನಪಿಡಿ,ತೂಕ ನಷ್ಟವು ಆರೋಗ್ಯಕರ ಜೀವನಶೈಲಿಯತ್ತ ಪಯಣವಾಗಬೇಕೇ ಹೊರತು ತ್ವರಿತ ಪರಿಹಾರವಾಗಬಾರದು.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News