ಟಾಯ್ಲೆಟ್ ನಲ್ಲಿ ಹೆಚ್ಚು ಸಮಯ ಕಳೆಯುವುದು ಆರೋಗ್ಯಕ್ಕೆ ಅಪಾಯಕಾರಿ : ವೈದ್ಯರ ಎಚ್ಚರಿಕೆ
ಹೊಸದಿಲ್ಲಿ : ಶೌಚಾಲಯದಲ್ಲಿ ಹೆಚ್ಚು ಸಮಯ ಕಳೆಯದಂತೆ ಆರೋಗ್ಯ ತಜ್ಞರು ಜನರನ್ನು ಒತ್ತಾಯಿಸುತ್ತಿದ್ದಾರೆ. ಹಾಗೆ ಮಾಡುವುದು ಮೂಲವ್ಯಾಧಿ ಮತ್ತು ಪೆಲ್ವಿಕ್ ಮಸಲ್ ಅಥವಾ ಶ್ರೋಣಿ ಸ್ನಾಯು ದೌರ್ಬಲ್ಯಗಳಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ. ಹೆಚ್ಚಿನ ವ್ಯಕ್ತಿಗಳು ಬಾತ್‌ರೂಮ್‌ಗಳಲ್ಲಿಯೂ ಮೊಬೈಲ್ ಫೋನ್‌ಗಳನ್ನು ಬಳಸುತ್ತಿದ್ದು ತಮಗೆ ಅರಿವಿಲ್ಲದೆ ಹೆಚ್ಚು ಸಮಯ ಕಮೋಡ್ ಮೇಲೆ ಕುಳಿತುಕೊಳ್ಳುತ್ತಾರೆ.
ಯೂನಿವರ್ಸಿಟಿ ಆಫ್ ಟೆಕ್ಸಾಸ್ ಸೌತ್‌ವೆಸ್ಟರ್ನ್ ಮೆಡಿಕಲ್ ಸೆಂಟರ್‌ನ ಕೊಲೊರೆಕ್ಟಲ್ ಸರ್ಜನ್ ಡಾ.ಲಾಯ್ ಶುಯೆ ಅವರು ರೋಗಿಗಳಲ್ಲಿ ಬಾತ್‌ರೂಮ್ ಸಂಬಂಧಿತ ಆರೋಗ್ಯ ದೂರುಗಳ ಮಾದರಿಯನ್ನು ಕಂಡಿರುವುದಾಗಿ ಹೇಳಿದ್ದಾರೆ. ಟಾಯ್ಲೆಟ್ ಸೀಟ್ ಮೇಲೆ ಕುಳಿತುಕೊಂಡಾಗ ಶರೀರವು ದುರ್ಬಲ ಭಂಗಿಯಲ್ಲಿರುತ್ತದೆ. ಇದು ಶ್ರೋಣಿಯ ಮೇಲೆ ಒತ್ತಡವನ್ನು ಹೇರುತ್ತದೆ ಮತ್ತು ಗುದನಾಳದ ಹಿಗ್ಗುವಿಕೆಯಂತಹ ಸ್ಥಿತಿಗೆ ಕಾರಣವಾಗುವ ಸಾಧ್ಯತೆಯಿದೆ ಎಂದು ಅವರು ಬೆಟ್ಟು ಮಾಡಿದ್ದಾರೆ.
ಟಾಯ್ಲೆಟ್ ಸೀಟ್ ನ ವಿನ್ಯಾಸ ಮತ್ತು ಕುಳಿತಿರುವ ಭಂಗಿಯು ಗುದನಾಳದಿಂದ ರಕ್ತ ಸಂಚಾರವನ್ನು ಕಡಿಮೆಗೊಳಿಸುತ್ತದೆ. ಇದು ರಕ್ತನಾಳಗಳು ಊದಿಕೊಳ್ಳಲು ಕಾರಣವಾಗುತ್ತದೆ ಮತ್ತು ಮೂಲವ್ಯಾಧಿಯ ಅಪಾಯವನ್ನು ಹೆಚ್ಚಿಸುತ್ತದೆ. ಸ್ಟೋನಿ ಬ್ರೂಕ್ ಮೆಡಿಸಿನ್‌ನಲ್ಲಿ ಸಹಾಯಕ ಪ್ರಾಧ್ಯಾಪಕಿ ಡಾ.ಫರ್ಹಾ ಮೊಂಝರ್ ಅವರು, ಬಾತ್‌ರೂಮ್ ಸಮಯವನ್ನು ಸೀಮಿತಗೊಳಿಸುವಂತೆ ಮತ್ತು ಮೊಬೈಲ್ ಫೋನ್‌ಗಳಂತಹ ಸಾಧನಗಳನ್ನು ಹೊರಗಿಸುವಂತೆ ಸಲಹೆ ನೀಡಿದ್ದಾರೆ.
ಡಾ.ಶುಯೆ ಅವರು ಮಲಬದ್ಧತೆ ರೋಗಿಗಳಿಗೆ ಮೃದುವಾದ ಚಲನೆ, ಸಾಕಷ್ಟು ನೀರು ಸೇವನೆ ಮತ್ತು ಹೆಚ್ಚು ನಾರು ಹೊಂದಿರುವ ಆಹಾರದಂತಹ ಪರ್ಯಾಯಗಳನ್ನು ಸೂಚಿಸಿದ್ದಾರೆ. ಟಾಯ್ಲೆಟ್‌ನಲ್ಲಿ ಹೆಚ್ಚು ಸಮಯ ಕಳೆಯುವುದು ಮಲಬದ್ಧತೆ ಮೂರು ವಾರಕ್ಕೆ ಹೆಚ್ಚಿನ ಅವಧಿಗೆ ಮುಂದುವರಿದಿದ್ದರೆ ಜಠರದ ಕರುಳಿನ ಅಸ್ವಸ್ಥತೆ ಅಥವಾ ಗುದನಾಳ ಕ್ಯಾನ್ಸರ್ ನಂತಹ ಸ್ಥಿತಿಗಳನ್ನೂ ಸೂಚಿಸಬಹುದು.