ಚಳಿಗಾಲದಲ್ಲಿ ಮೂಳೆ ಆರೋಗ್ಯ ಕಾಪಾಡುವುದು ಹೇಗೆ?
ಸಾಮಾನ್ಯವಾಗಿ ಚಳಿಗಾಲದಲ್ಲಿ ಗಂಟುನೋವು, ಮಂಡಿ ನೋವು ಮುಂತಾದವುಗಳು ಸಾಮಾನ್ಯ. ಚಳಿಗಾಲದಲ್ಲಿ ರಕ್ತನಾಳಗಳು ಕುಗ್ಗಿಕೊಂಡು ಗಂಟುಗಳಿಗೆ ರಕ್ತದ ಪೂರೈಕೆಯಲ್ಲಿ ವ್ಯತ್ಯಯವಾದಾಗ ದೇಹದ ಎಲ್ಲಾ ಪ್ರಮುಖ ಗಂಟುಗಳು, ಕುತ್ತಿಗೆಯ ಭಾಗದ ಎಲುಬುಗಳು, ಗಂಟುನೋವಿರುವ ಮಂಡಿಚಿಪ್ಪು ಮುಂತಾದ ಜಾಗಗಳು ಸೆಟೆದುಕೊಂಡು, ಚಲನೆಗೆ ಸೂಕ್ತ ರೀತಿಯಲ್ಲಿ ಸಹಕಾರ ನೀಡಲಿಕ್ಕಿಲ್ಲ. ಗಂಟುಗಳಲ್ಲಿ ಶಬ್ದ ಬರುವುದು, ವಿಪರೀತ ನೋವು, ಯಾತನೆಯಿಂದಾಗಿ ಚಲನೆಯಲ್ಲಿ ಸಂಪೂರ್ಣವಾಗಿ ಗಂಟುಗಳನ್ನು ತೊಡಗಿಸಿಕೊಳ್ಳಲು ಕಷ್ಟವಾಗುತ್ತದೆ. ಸಂಧಿವಾತ, ಗಂಟು ವಾತ ಮತ್ತು ಕುತ್ತಿಗೆಯ ಸರ್ವೈಕಲ್ ಸ್ಪಾಂಡಿಲೈಟಿಸ್ ಇರುವವರಂತೂ ಬಹಳಷ್ಟು ಕಷ್ಟಪಡುತ್ತಾರೆ. ಚಳಿಗಾಲದಲ್ಲಿ ಹಗಲಿನ ಅವಧಿ ಕಡಿಮೆ ಮತ್ತು ರಾತ್ರಿಯ ಅವಧಿ ಜಾಸ್ತಿ ಇರುತ್ತದೆ. ವಾತಾವರಣ ಹಿತಕರವಾಗಿರುವುದರಿಂದ ಅಥವಾ ವಿಪರೀತ ತಂಪು ಹವೆಯಿಂದಾಗಿ ಜನರು ಹೆಚ್ಚು ಸೋಮಾರಿಗಳಾಗುತ್ತಾರೆ. ಈ ಕಾರಣದಿಂದಲೂ ಮೊದಲೇ ಇಂತಹ ಎಲುಬು ಸಂಬಂಧಿ ಗಂಟುನೋವು ಇರುವ ರೋಗಿಗಳು ಬಹಳ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಮತ್ತು ಸೂಕ್ತ ವೈದ್ಯಕೀಯ ಸಲಹೆ ಮತ್ತು ದೈಹಿಕ ವ್ಯಾಯಾಮ ಮಾಡಿ ಗಂಟುಗಳಿಗೆ ಸಾಕಷ್ಟು ರಕ್ತ ಪರಿಚಲನೆಯಾಗುವಂತೆ ನೋಡಿಕೊಳ್ಳಬೇಕು.
ವಿಟಮಿನ್ ಡಿ ದೇಹದ ಮೂಳೆಯ ಆರೋಗ್ಯಕ್ಕೆ ಅತೀ ಅವಶ್ಯಕ. ಚಳಿಗಾಲದಲ್ಲಿ ಹಗಲು ಹೊತ್ತಿನ ಕಡಿಮೆ ಅವಧಿ ಮತ್ತು ಸೂರ್ಯನ ಬೆಳಕು ಕಡಿಮೆ ಇರುವುದರಿಂದ ವಿಟಮಿನ್ ಡಿ ದೇಹಕ್ಕೆ ಕಡಿಮೆ ಸಿಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಲೇ ಆಹಾರ ಪದಾರ್ಥಗಳಲ್ಲಿ ವಿಟಮಿನ್ ಡಿ ಹೆಚ್ಚು ಇರುವಂತೆ ನೋಡಿಕೊಳ್ಳಬೇಕು. ದೇಹದಲ್ಲಿ ಕ್ಯಾಲ್ಸಿಯಂನ್ನು ಹೀರಿಕೊಳ್ಳಲು ವಿಟಮಿನ್ ಡಿ ಅತೀ ಅವಶ್ಯಕ. ವಿಟಮಿನ್ ಡಿ ಕೊರತೆ ಉಂಟಾದಲ್ಲಿ, ಮೂಳೆಗಳಿಗೆ ಸರಿಯಾಗಿ ಕ್ಯಾಲ್ಸಿಯಂ ಅಂಶ ಸಿಗದೆ, ಟೊಳ್ಳು ಮೂಳೆ ರೋಗ ಉಂಟಾಗುವ ಸಾಧ್ಯತೆ ಇದೆ. ಈ ಕಾರಣದಿಂದಲೇ ಚಳಿಗಾಲದಲ್ಲಿ ಉತ್ತಮ ದೈಹಿಕ ವ್ಯಾಯಾಮ ಮತ್ತು ಆಹಾರದಲ್ಲಿ ವಿಟಮಿನ್ ಡಿ ಪೂರೈಕೆ, ಮೂಳೆ ಆರೋಗ್ಯಕ್ಕೆ ಅತೀ ಅವಶ್ಯಕ.
ನಿಯಮಿತವಾದ ದೈಹಿಕ ವ್ಯಾಯಾಮ ಮಾಡುವುದರಿಂದ ದೇಹದ ತೂಕ ನಿಯಂತ್ರಣಕ್ಕೆ ಬರುತ್ತದೆ ಮತ್ತು ದೇಹದಲ್ಲಿ ಕೊಬ್ಬಿನ ಅಂಶ ಕರಗುತ್ತದೆ. ಅಧಿಕ ದೇಹದ ತೂಕ ದೇಹದ ಎಲುಬು, ಮಂಡಿ, ಕಾಲುಗಳ ಗಂಟುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ನಿಯಮಿತ ದೈಹಿಕ ಕಸರತ್ತು ಮಾಡುವುದರಿಂದ ದೇಹದ ರಕ್ಷಣಾ ವ್ಯವಸ್ಥೆಯ ಮೇಲೆ ಧನಾತ್ಮಕ ಪರಿಣಾಮ ಬೀರಿ ಎಲುಬುಗಳ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಎಲುಬಿನ ಸಾಂದ್ರತೆ, ಎಲುಬಿನ ರಚನೆ ಮತ್ತು ಗಂಟುಗಳ ಕಾರ್ಯಕ್ಷಮತೆ ಎಲ್ಲವೂ ದೈಹಿಕ ವ್ಯಾಯಾಮದಿಂದಾಗಿ ಸುಧಾರಿಸುತ್ತದೆ ಮತ್ತು ಪರೋಕ್ಷವಾಗಿ ಎಲುಬುಗಳ ಆರೋಗ್ಯಕ್ಕೆ ಕಾರಣವಾಗುತ್ತದೆ.
ತಡೆಗಟ್ಟುವುದು ಹೇಗೆ?
1. ದಿನವೊಂದರಲ್ಲಿ ಕನಿಷ್ಠ 45 ನಿಮಿಷಗಳ ಬಿರುಸುನಡಿಗೆ, ಸೈಕ್ಲಿಂಗ್ ಅಥವಾ ಇನ್ಯಾವುದೇ ದೈಹಿಕ ವ್ಯಾಯಾಮ ಮಾಡಬೇಕು.
2. ದಿನದಲ್ಲಿ ಕನಿಷ್ಠ ಅರ್ದ ಗಂಟೆಗಳ ಕಾಲ ಸೂರ್ಯನ ಬೆಳಕಿಗೆ ಮೈಯೊಡ್ಡಬೇಕು. ಹೀಗೆ ಮಾಡಿದಲ್ಲಿ ವಿಟಮಿನ್ ಡಿ ಕೊರತೆ ಬಾಧಿಸದು.
3. ಸಾಕಷ್ಟು ಕ್ಯಾಲ್ಸಿಯಂ ಇರುವ ಆಹಾರವನ್ನು ಸೇವಿಸಬೇಕು. ಇದು ಕಷ್ಟವಾದಲ್ಲಿ ಕ್ಯಾಲ್ಸಿಯಂ ಗುಳಿಗೆಗಳನ್ನು ತೆಗೆದುಕೊಳ್ಳಬೇಕು.
4. ಸಾಕಷ್ಟು ದೇಹ ಮುಚ್ಚುವ ಬಟ್ಟೆ, ಗ್ಲೌವ್ಸ್, ಟೋಪಿ ಇತ್ಯಾದಿ ಬಳಸಿ ದೇಹದ ಆತಂರಿಕ ಉಷ್ಣತೆಯನ್ನು ಕಾಪಾಡಿಕೊಳ್ಳಬೇಕು.
5. ಮದ್ಯಪಾನ ಮತ್ತು ಧೂಮಪಾನವನ್ನು ಕಡಿಮೆ ಮಾಡಬೇಕು. ಅದೇ ರೀತಿ ಅತಿಯಾದ ಕೆಫೇನ್‌ಯುಕ್ತ ಕಾಫಿ ಅಥವಾ ಇನ್ನಿತರ ಪೇಯಗಳನ್ನು ಸೇವಿಸಬಾರದು. ಅತಿಯಾದ ಕೆಫೇನ್ ಕ್ಯಾಲ್ಸಿಯಂ ಹೀರುವಿಕೆಯನ್ನು ತಡೆಯುತ್ತದೆ.
6. ಗ್ಲೂಕೋಸಮೈನ್ ಎಂಬ ಶಿಲೀಂಧ್ರಗಳಿಂದ ಶೋಧಿಸಿ ಸಂಸ್ಕರಿಸಿದ ‘ಅಮಿನೋ ಆ್ಯಸಿಡ್’ ಇರುವ ಉತ್ಪನ್ನವನ್ನು ಹೆಚ್ಚು ಬಳಸಿದಲ್ಲಿ, ಗಂಟು ನೋವು ಮತ್ತು ಗಂಟುಗಳ ಬಿಗಿಹಿಡಿತವನ್ನು ಕಡಿಮೆ ಮಾಡುತ್ತದೆ.
7. ನೀವು ಮಾಂಸಾಹಾರಿಗಳಾಗಿದ್ದಲ್ಲಿ, ಹೆಚ್ಚು ಒಮೇಗಾ-3 ಪ್ಯಾಟೀ ಆ್ಯಸಿಡ್ ಇರುವ ಮೀನುಗಳನ್ನು ತಿನ್ನಬಹುದು. ಶಾಖಾಹಾರಿಗಳಾಗಿದ್ದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಬಳಸಬೇಕು. ಹಸಿರು ಸೊಪ್ಪು, ತರಕಾರಿಗಳಲ್ಲಿಯೂ ಹೆಚ್ಚು ಕ್ಯಾಲ್ಸಿಯಂ ಇರುತ್ತದೆ.
8. ಸೋಮಾರಿಯಾಗಿ ಜೀವನ ಶೈಲಿ ಅಳವಡಿಸಿಕೊಂಡು, ಜಾಸ್ತಿ ಕರಿದ ಆಹಾರ ತಿಂದಲ್ಲಿ ದೇಹದ ತೂಕ ಹೆಚ್ಚಾಗಿ ಗಂಟುನೋವು ಜಾಸ್ತಿಯಾಗುತ್ತದೆ. ನಿಯಮಿತವಾಗಿ ನಿರ್ದಿಷ್ಟವಾದ ಆಹಾರ ಪದಾರ್ಥಗಳನ್ನು ತಿಂದು ದೇಹದ ತೂಕವನ್ನು ಕಡಿಮೆ ಮಾಡಬೇಕು. ನಿಮ್ಮ ಬಿಎಂಐ ಅಥವಾ ದೇಹದ ತೂಕದ ಸಾಂದ್ರತೆ 25ಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳಿ.
9. ಗಂಟುನೋವು ನಿವಾರಣೆಗಳಿಗೆ ಅನಗತ್ಯವಾಗಿ ನೋವು ನಿವಾರಕ ಔಷಧಿ ತೆಗೆದುಕೊಳ್ಳಬಾರದು. ಗಂಟುಗಳಿಗೆ ಶಾಖ ನೀಡಬೇಕು ಅಥವಾ ಬಿಸಿನೀರಿನಲ್ಲಿ ಕಾಲುಗಳನ್ನು ಮತ್ತು ಗಂಟುಗಳನ್ನು ಅದ್ದಿ ನೋವು ನಿವಾರಿಸಬೇಕು.
10. ಗಂಟುಗಳ ಉರಿಯೂತಕ್ಕೆ ಯಾವುದೇ ಕಾರಣಕ್ಕೂ ಸ್ಟಿರಾಯ್ಡ್‌ಗಳ ಮೊರೆ ಹೋಗಬಾರದು. ಈ ಸ್ಟಿರಾಯ್ಡ್‌ಗಳು ಎಲುಬಿನ ಕ್ಯಾಲ್ಸಿಯಂನ್ನು ರಕ್ತಕ್ಕೆ ಸೇರುವಂತೆ ಮಾಡಿ ಟೊಳ್ಳು ಮೂಳೆರೋಗಕ್ಕೆ ಕಾರಣವಾಗುತ್ತದೆ.
11. ಸಾಕಷ್ಟು ದ್ರವಾಹಾರ ಸೇವಿಸಿ, ನಿರ್ಜಲೀಕರಣದಿಂದ ಗಂಟುನೋವು ಜಾಸ್ತಿಯಾಗುತ್ತದೆ.
12. ಹಸಿ ತರಕಾರಿ, ತಾಜಾ ಹಣ್ಣುಗಳಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳು ಜಾಸ್ತಿ ಇರುತ್ತದೆ. ಇವುಗಳು ಗಂಟುಗಳ ಉರಿಯೂತವನ್ನು ಕಡಿಮೆಮಾಡುತ್ತದೆ.