ಆರೋಗ್ಯಕರ ಬದುಕಲ್ಲಿ ದಂತ ವೈದ್ಯರ ಪಾತ್ರವೆಷ್ಟು?

Update: 2025-03-06 12:02 IST
ಆರೋಗ್ಯಕರ ಬದುಕಲ್ಲಿ ದಂತ ವೈದ್ಯರ ಪಾತ್ರವೆಷ್ಟು?
  • whatsapp icon

ಒಂದು ಆರೋಗ್ಯ ಪೂರ್ಣ ಸಮಾಜದ ನಿರ್ಮಾಣದಲ್ಲಿ ವೈದ್ಯರು ಬಹುಮುಖ್ಯ ಭೂಮಿಕೆ ವಹಿಸುತ್ತಾರೆ. ಅದು ಕುಟುಂಬ ವೈದ್ಯರೇ ಇರಬಹುದು ಅಥವಾ ದಂತ ವೈದ್ಯರೂ ಇರಬಹುದು. ಒಟ್ಟಿನಲ್ಲಿ ಒಬ್ಬ ವ್ಯಕ್ತಿಯ ಆರೋಗ್ಯದ ಮೇಲೆ ನೇರವಾದ ಮತ್ತು ಪ್ರತ್ಯಕ್ಷವಾದ ಪರಿಣಾಮ ಬೀರುವ ವ್ಯಕ್ತಿ ವೈದ್ಯರೇ ಆಗಿರುತ್ತಾರೆ. ಇನ್ನು ಒಬ್ಬ ವ್ಯಕ್ತಿಯ ಆರೋಗ್ಯಪೂರ್ಣ ಬದುಕಿಗೆ ಹಲ್ಲಿನ ಆರೋಗ್ಯವೂ ಅತೀ ಅವಶ್ಯ. ಬಾಯಿ ಎನ್ನುವುದು ನಮ್ಮ ದೇಹದ ಪ್ರವೇಶ ದ್ವಾರವಿದ್ದಂತೆ. ಜೀರ್ಣಾಂಗ ವ್ಯೆಹದ ಹೊಸ್ತಿಲೇ ನಮ್ಮ ಬಾಯಿ ಆಗಿರುತ್ತದೆ. ಇಂತಹ ಬಾಯಿಯಲ್ಲಿ ಆರೋಗ್ಯವಂತ ಹಲ್ಲುಗಳು ಇಲ್ಲದಿದ್ದಲ್ಲಿ ಜೀರ್ಣಾಂಗ ವ್ಯವಸ್ಥೆಯ ಹಳಿ ತಪ್ಪುತ್ತದೆ. ಹಲ್ಲಿನ ಆರೋಗ್ಯ ಚೆನ್ನಾಗಿದ್ದಲ್ಲಿ ಮಾತ್ರ ಮನುಷ್ಯನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಪರಿಪೂರ್ಣವಾಗಲು ಸಾಧ್ಯವಾಗುತ್ತದೆ. ಈ ಕಾರಣದಿಂದ ಹಲ್ಲುಗಳ ಆರೋಗ್ಯ ನಿರ್ಲಕ್ಷಿಸಿದರೆ, ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುವುದು ಸಹಜ.

ದಂತ ವೈದ್ಯರ ಪಾತ್ರ

ಬಾಯಿ ಎನ್ನುವುದು ಬ್ಯಾಕ್ಟೀರಿಯಾಗಳ ಗುಂಡಿ. ಲಕ್ಷಾಂತರ ಬ್ಯಾಕ್ಟೀರಿಯಾಗಳು ಮತ್ತು ವೈರಾಣುಗಳು ಬಾಯಿಯಲ್ಲಿರುತ್ತವೆ. ಯಾವಾಗ ದೇಹದ ರಕ್ಷಣಾ ವ್ಯವಸ್ಥೆ ಕುಸಿಯುತ್ತದೋ ಆಗ ಅವುಗಳು ತಮ್ಮ ನಿಜರೂಪ ತೋರಿಸುತ್ತದೆ ಮತ್ತು ರೋಗ ಬರುವಂತೆ ಮಾಡುತ್ತದೆ. ಒಬ್ಬ ರೋಗಿ ಬಾಯಿ ತೆರೆದಾಗ, ದಂತವೈದ್ಯರು ಆತನ ಬಾಯಿಯಲ್ಲಿ ಬರೀ ಹಲ್ಲನ್ನು ಮಾತ್ರ ನೋಡುವುದಿಲ್ಲ. ಹತ್ತು ಹಲವಾರು ರೋಗದ ಲಕ್ಷಣಗಳನ್ನು ಗುರುತಿಸಿ ರೋಗವನ್ನು ಪತ್ತೆ ಹಚ್ಚುತ್ತಾರೆ.

ಉದಾಹರಣೆಗೆ ಮಧುಮೇಹ ರೋಗದಲ್ಲಿ ಹಲ್ಲಿನ ವಸಡಿನ ಸುತ್ತ ಕೀವು ತುಂಬಿ, ಹಲ್ಲಿನ ಸುತ್ತಲಿನ ದಂತದಾರ ಎಲುಬು ಕರಗಿ ಹಲ್ಲು ಅಲುಗಾಡುತ್ತದೆ ಮತ್ತು ಬಾಯಿ ವಿಪರೀತ ವಾಸನೆ ಹೊಂದಿರುತ್ತದೆ. ರಕ್ತಹೀನತೆ ಇರುವವರಲ್ಲಿ ಬಾಯಿ ಒಳಭಾಗದ ಪದರ ಬಿಳಿಚಿಕೊಂಡಿರುತ್ತದೆ. ಬಾಯಿ ಕ್ಯಾನ್ಸರ್ ಇದ್ದಲ್ಲಿ ಬಾಯಿಯೊಳಗೆ ಗಡ್ಡೆ ಅಥವಾ ಒಣಗದ ಹುಣ್ಣು ಇರುತ್ತದೆ. ರಕ್ತದ ಕ್ಯಾನ್ಸರ್ ಇದ್ದಲ್ಲಿ ವಸಡಿನಲ್ಲಿ ರಕ್ತ ಒಸರುತ್ತಿರುತ್ತದೆ. ವಿಟಮಿನ್ ಸಿ ಕೊರತೆ ಇದ್ದಲ್ಲಿ ವಸಡಿನಲ್ಲಿ ರಕ್ತಸ್ರಾವ, ವಿಟಮಿನ್ ಬಿ ಕಾಂಪ್ಲೆಕ್ಸ್ ಕೊರತೆ ಇದ್ದಲ್ಲಿ ಬೋಳು ನಾಲಗೆ ಇರುತ್ತದೆ. ಶಿಲೀಂಧ್ರಗಳ ಸೋಂಕು ಇದ್ದಲ್ಲಿ ನಾಲಿಗೆ ಮೇಲೆ ಬಿಳಿ ಪದರ ಇರುತ್ತದೆ. ಅದನ್ನು ಕ್ಯಾಂಡಿಡಿಯೋಸಿಸ್ ಎನ್ನುತ್ತಾರೆ. ಸಾಮಾನ್ಯವಾಗಿ ಅತೀ ಹೆಚ್ಚು ಆ್ಯಂಟಿಬಯೋಟಿಕ್ ಬಳಸುವವರಲ್ಲಿ, ಸ್ಟಿರಾಯ್ಡ್ ಸೇವಿಸುವವರಲ್ಲಿ, ದೇಹದ ರಕ್ಷಣಾ ವ್ಯವಸ್ಥೆ ಕುಸಿದವರಲ್ಲಿ ಇದು ಹೆಚ್ಚು ಕಂಡುಬರುತ್ತದೆ. ಅಧಿಕ ರಕ್ತದೊತ್ತಡ ಮತ್ತು ಅಪಸ್ಮಾರ ರೋಗಕ್ಕೆ ಔಷದಿ ಸೇವಿಸುವವರಲ್ಲಿ ವಸಡುಗಳು ಅಡ್ಡಾದಿಡ್ಡಿಯಾಗಿ ಬೆಳೆಯುತ್ತದೆ. ಲಿವರ್ ತೊಂದರೆ ಇದ್ದಲ್ಲಿ ವಸಡಿನಲ್ಲಿ ರಕ್ತಸ್ರಾವ, ಮಾನಸಿಕ ಒತ್ತಡ ಇದ್ದಲ್ಲಿ ಬಾಯಿಯಲ್ಲಿ ಹುಣ್ಣು, ಜಾಂಡಿಸ್ ಇದ್ದಲ್ಲಿ ಬಾಯಿ, ನಾಲಗೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಡೆಂಗಿ ಜ್ವರ ಮತ್ತು ಚಿಕುನ್ ಗುನ್ಯಾ ಜ್ವರ ಇದ್ದಲ್ಲಿ ಪ್ಲೇಟ್ಲೆಟ್‌ಗಳ ಸಂಖ್ಯೆ ಕಡಿಮೆಯಾಗಿ ವಸಡಿನಲ್ಲಿ ರಕ್ತಸ್ರಾವ ಉಂಟಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಇದ್ದಲ್ಲಿ ಹಲ್ಲು ಸವೆದು ಹೋಗಿ ದಂತ ಅತಿ ಸಂವೇದನೆ ಇರುತ್ತದೆ. ಶ್ವಾಸಕೋಶದ ಕೀವು ಮತ್ತು ಸೋಂಕು ಇದ್ದಲ್ಲಿ ವಿಪರೀತ ಬಾಯಿ ವಾಸನೆ ಇರುತ್ತದೆ. ಏಡ್ಸ್ ರೋಗ ಇದ್ದಲ್ಲಿ ನಾಲಗೆ ಮೇಲೆ ಬಿಳಿ ಕೂದಲು ಬೆಳೆಯುತ್ತದೆ.

ಬದಲಾದ ದಂತ ಚಿಕಿತ್ಸೆಯ ಸ್ವರೂಪ

ಹಿಂದಿನ ಕಾಲದಲ್ಲಿ ದಂತ ವೈದ್ಯರು ಎಂದರೆ ಕೇವಲ ಹಲ್ಲು ತೆಗೆಯಲು ಮಾತ್ರ ಸೀಮಿತವಾಗಿದ್ದರು. ಆದರೆ ಈಗ ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಆವಿಷ್ಕಾರಗಳು ಬಂದಿವೆ. ಮೂರನೇ ದವಡೆ ಹಲ್ಲಿನ ಒಳಭಾಗ, ದಂತ ಮಜ್ಜೆಯ ಒಳಗಿನ ಆಕಾರ, ಜೀವಕೋಶಗಳಿಂದ ಹೊಸತಾದ ಹಲ್ಲನ್ನು ಸೃಷ್ಟಿ ಮಾಡುವಲ್ಲಿಯವರೆಗೆ ದಂತ ವೈದ್ಯ ವಿಜ್ಞಾನ ಬೆಳೆದಿದೆ. ಈಗ ದಂತ ಚಿಕಿತ್ಸೆ ಕೇವಲ ರೋಗ ಚಿಕಿತ್ಸೆ ಪದ್ಧತಿಯಾಗಿ ಉಳಿಯದೆ, ರೋಗ ಬರದಂತೆ ತಡೆಯುವ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಲಾಗಿದೆ. ನಿಯಮಿತವಾದ ದಂತ ತಪಾಸಣೆ, ದಂತ ಶುಚಿಗೊಳಿಸುವಿಕೆ, ಹಲ್ಲು ತುಂಬಿಸುವಿಕೆಯಿಂದ ಹಲ್ಲು ಹುಳುಕಾಗದಂತೆ ಮಾಡುವ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಲಾಗಿದೆ. ಜೊತೆಗೆ ಸೌಂದರ್ಯವರ್ಧಕ ಚಿಕಿತ್ಸೆಯಾಗಿ ಬದಲಾಗಿದೆ. ಹಲ್ಲಿನ ಅಂದವನ್ನು ವಿನೀರ್, ಕಿರೀಟ(ಕ್ರೌನ್) ಮತ್ತು ಹೊಸತಾದ ಸಿಮೆಂಟ್‌ಗಳಿಂದ ತುಂಬಿಸಿ, ವ್ಯಕ್ತಿಯ ನಗುವಿನ ವಿನ್ಯಾಸವನ್ನೇ ಬದಲಿಸಿ, ಆತನ ಜೀವನದ ದೃಷ್ಟಿಕೋನವನ್ನೇ ಬದಲಾಯಿಸುವ ಕಾಲದಲ್ಲಿ ನಾವಿದ್ದೇವೆ. ಹಿಂಜರಿಕೆ, ಕೀಳರಿಮೆ ಹೋಗಿ ಹೊಸ ಆತ್ಮ ವಿಶ್ವಾಸ ಬಂದು, ಆ ವ್ಯಕ್ತಿಯ ಜೀವನದ ದೃಷ್ಟಿಕೋನ ಬದಲಾಗಿ, ಆತ್ಮ ವಿಶ್ವಾಸ ಹೆಚ್ಚಿ, ಹೊಸತಾದ ಮರುಜನ್ಮ ನೀಡಲಾಗುತ್ತದೆ. ಚಿಕಿತ್ಸೆಗೆ ಹೆಚ್ಚು ಒತ್ತು ನೀಡುತ್ತಿದ್ದ ದಂತ ಚಿಕಿತ್ಸಾ ಪದ್ಧತಿ ಈಗ ಹೆಚ್ಚು ರೋಗ ತಡೆಯುವ ಚಿಕಿತ್ಸೆಯಾಗಿ ಪರಿವರ್ತನೆಯಾಗಿದೆ. ದಂತ ಚಿಕಿತ್ಸಾಲಯಗಳು ಬದಲಾಗಿ ಈಗ ದಂತ ಸ್ಪಾಗಳು ಹುಟ್ಟಿಕೊಂಡಿವೆ. ಒಟ್ಟಿನಲ್ಲಿ ಸುಂದರ ಸದೃಢವಾದ ಹಲ್ಲುಗಳು ಮನುಷ್ಯನ ಆತ್ಮ ವಿಶ್ವಾಸದ ಮತ್ತು ವ್ಯಕ್ತಿತ್ವದ ಪ್ರತೀಕ. ಸುಂದರವಾಗಿ ನಗಲು, ಆಹಾರ ಜಗಿಯಲು, ಸ್ಪಷ್ಟವಾಗಿ ಮಾತನಾಡಲು ಮತ್ತು ದೇಹದ ಆರೋಗ್ಯದ ಸಮತೋಲನವನ್ನು ಕಾಪಾಡಲು ಹಲ್ಲಿನ ಆರೋಗ್ಯ ಅತೀ ಅವಶ್ಯಕ. ಈ ನಿಟ್ಟಿನಲ್ಲಿ ವ್ಯಕ್ತಿಯ ಆರೋಗ್ಯ ಪಾಲನೆಯಲ್ಲಿ ದಂತ ವೈದ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಮುರಲೀ ಮೋಹನ್ ಚೂಂತಾರು

contributor

Similar News