ಮಕ್ಕಳಲ್ಲಿ ಮೆದುಳಿಗೆ ಶಕ್ತಿ ಕೊಡಬಲ್ಲ ಆಹಾರಗಳು ಯಾವುವು?

Update: 2024-09-11 13:00 GMT

ಮಕ್ಕಳಲ್ಲಿ ಮೆದುಳನ್ನು ಚುರುಕಾಗಿಸಬಲ್ಲ, ಮೆದುಳಿಗೆ ಶಕ್ತಿ ಕೊಡಬಲ್ಲ ಆಹಾರಗಳು ಯಾವುವು? ಯಾವ ಆಹಾರಗಳು ಮಕ್ಕಳ ಐಕ್ಯೂ ಹೆಚ್ಚಿಸಲು ಸಹಕಾರಿ? ಬಹುಶಃ ಎಲ್ಲ ಪೋಷಕರ ಎದುರಿಗೂ ಇಂಥ ಪ್ರಶ್ನೆಗಳು ಸಹಜ.

ತಮ್ಮ ಮಕ್ಕಳು ಅವರ ವಯಸ್ಸಿಗೆ ಅನುಗುಣವಾಗಿ ಐಕ್ಯೂನಲ್ಲಿ ಹಿಂದುಳಿಯದಂತೆ ನೋಡಿಕೊಳ್ಳಲು ಎಲ್ಲರೂ ಕಾಳಜಿವಹಿಸುತ್ತಾರೆ. ಪರಿಣಿತರು ಈ ವಿಚಾರವಾಗಿ ಉಲ್ಲೇಖಿಸಿರುವ ಅಂಶಗಳನ್ನು ಆಧರಿಸಿ ಇಲ್ಲಿ ಕೆಲವು ವಿಚಾರಗಳನ್ನು ಹೇಳುತ್ತಿದ್ದೇವೆ. ಶರೀರಕ್ಕೆ ಹೇಗೊ ಮೆದುಳಿಗೂ ಪೋಷಕಾಂಶಯುಕ್ತ ಆಹಾರಗಳು ಅವಶ್ಯವಾಗಿ ಬೇಕು. ದೇಹಕ್ಕೆ ಹೇಗೆ ಒಳ್ಳೆಯ ಆಹಾರದ ಸೇವನೆ ಅಗತ್ಯವಿದೆಯೊ ಹಾಗೆಯೆ ಒಳ್ಳೆಯ ಆಹಾರವೂ ಐಕ್ಯೂ ಹೆಚ್ಚಿಸಬಹುದು.

ಮೆದುಳಿಗೆ ಅಗತ್ಯವಾದ ಕೆಲವು ವಿಶೇಷ ಪೋಷಕಾಂಶಗಳಿವೆ. ಐಕ್ಯೂ ಆಹಾರ ಶೈಲಿಯಿಂದ ಮಾತ್ರ ಬರುವುದಿಲ್ಲ. ಅದು ಜೆನೆಟಿಕ್ಸ್ ಮತ್ತು ಪರಿಸರದ ಪ್ರಭಾವವನ್ನೂ ಅವಲಂಬಿಸಿದೆ. ಹಾಗಿದ್ದರೂ ಒಳ್ಳೆಯ ಆಹಾರ ಖಂಡಿತವಾಗಿಯೂ ಐಕ್ಯೂ ಹೆಚ್ಚಿಸಲು ತನ್ನದೇ ಆದ ಕೊಡುಗೆ ನೀಡಬಲ್ಲುದು ಎನ್ನುತ್ತಾರೆ ಪರಿಣಿತರು.

ಇಲ್ಲಿ ಮುಖ್ಯವಾಗಿ ಎರಡು ಅಧ್ಯಯನಗಳನ್ನು ಗಮನಿಸಬಹುದು. ಒಂದು, ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನಡೆಸಿರುವ ಅಧ್ಯಯನ. ಇನ್ನೊಂದು, ಲಂಡನ್ ವಿಶ್ವವಿದ್ಯಾನಿಲಯದ ಅಧ್ಯಯನ.

ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಮೆದುಳಿನ ಶಕ್ತಿ ಉತ್ತಮಗೊಳಿಸುವ ಆಹಾರಗಳ ಬಗ್ಗೆ ಒಂದು ಬರಹವನ್ನು ಪ್ರಕಟಿಸಿದೆ. ಉತ್ತಮ ಮೆದುಳಿನ ಶಕ್ತಿಗೆ ಆರೋಗ್ಯಕರ ಆಹಾರ ಪದ್ಧತಿ ಅಗತ್ಯ ಎಂದು ಅದು ಹೇಳುತ್ತದೆ. ಮುಖ್ಯವಾಗಿ, ಹಣ್ಣುಗಳು, ತರಕಾರಿಗಳು, ದ್ವಿದಳ ಧಾನ್ಯಗಳು, ಧಾನ್ಯಗಳ ಸೇವನೆ ಮೆದುಳಿನ ಆರೋಗ್ಯ ಮತ್ತು ಬಲವರ್ಧನೆಗೆ ಅವಶ್ಯ.

ಲಂಡನ್ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಕಾರ, ಆಗಷ್ಟೇ ಬೇಯಿಸಿದ ಆಹಾರ ಹೆಚ್ಚಿನ ಐಕ್ಯೂಗೆ ಸಹಕಾರಿಯಾಗಿದೆ. ಫಾಸ್ಟ್ ಫುಡ್ ತಿನ್ನುವುದರ ಬದಲು ತಾಜಾ ಆಹಾರ ತೆಗೆದುಕೊಳ್ಳಲು ಅದು ಸಲಹೆ ಮಾಡುತ್ತದೆ.

Full View

ಹಾಗಾದರೆ, ಉತ್ತಮ ಬುದ್ದಿಶಕ್ತಿಗಾಗಿ ಯಾವ್ಯಾವ ಆಹಾರಗಳನ್ನು ತೆಗೆದುಕೊಳ್ಳಬೇಕು?:

ಮೆದುಳನ್ನು ಶಕ್ತಗೊಳಿಸಲು ಉತ್ತಮ ಪ್ರಮಾಣದ ವಿಟಮಿನ್‌ಗಳು, ಖನಿಜಗಳು ಮತ್ತು Anti ಆಕ್ಸೊಡಂಟ್ಸ್ ಇರುವ ಆಹಾರಗಳ ಸೇವನೆ ಅಗತ್ಯ. ಒಮೆಗಾ 3 ಕೊಬ್ಬಿನ ಆಮ್ಲ ಕೂಡ ಮೆದುಳನ್ನು ಬಲಗೊಳಿಸಲು ಸಹಕಾರಿ.

ಅಧ್ಯಯನಗಳು ಸೂಚಿಸುವ ಇಂತಥ ಆಹಾರಗಳ ಪಟ್ಟಿ ಹೀಗಿದೆ:

ಹಸಿರು ಎಲೆಗಳ ತರಕಾರಿಗಳು, ವಿಟಮಿನ್ ಕೆ, ಲುಟೀನ್, ಫೋಲೇಟ್, ಬೀಟಾ ಕ್ಯಾರೋಟಿನ್ ಇರುವ ಆಹಾರಗಳು ಅತ್ಯಗತ್ಯ. ಒಮೆಗಾ 3 ಕೊಬ್ಬಿನ ಆಮ್ಲಗಳಿಗಾಗಿ ಮೀನು ಸೇವನೆ ಉಪಯುಕ್ತ. ಸಸ್ಯಾಹಾರಿಗಳಾದರೆ ಅಗಸೆಬೀಜ, ಆವಕಾಡೊ ಅಥವಾ ಬಟರ್ ಫ್ರೂಟ್ , ವಾಲ್ನಟ್ಗಳನ್ನು ತಿನ್ನಬಹುದು. ಬೆರ್ರಿಗಳು ಅತ್ಯುತ್ತಮ Anti ಆಕ್ಸೊಡಂಟ್ಸ್ ಗಳನ್ನು ಒದಗಿಸುತ್ತವೆ. ವಾಲ್‌ನಟ್ಸ್‌ ಗೆ ಸಂಬಂಧಿಸಿದಂತೆ UCLA ಅಧ್ಯಯನ ಹೇಳಿರುವ ಅಂಶವೊಂದು ಗಮನಾರ್ಹ.

ವಾಲ್ನಟ್ಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಮೆದುಳಿನ ಚುರುಕುತನ ಹೆಚ್ಚುತ್ತದೆ ಎಂದು UCLA ಅಧ್ಯಯನ ಹೇಳುತ್ತದೆ.

ಮೆದುಳಿನ ಆರೋಗ್ಯಕ್ಕೆ ಯಾವ ಆಹಾರ ಒಳ್ಳೆಯದಲ್ಲ?:

ಈ ವಿಚಾರವಾಗಿ ಹಾರ್ವರ್ಡ್ ಪ್ರಕಟಿಸಿರುವ ವರದಿಯ ಪ್ರಕಾರ, ಮೆದುಳಿನ ಆರೋಗ್ಯದ ದೃಷ್ಟಿಯಿಂದ ದೂರ ಇಡಬೇಕಾದ ಆಹಾರಗಳು ಹೀಗಿವೆ:

ಸಂಸ್ಕರಿಸಿದ ಬೀಜಗಳ ಎಣ್ಣೆಯಿಂದ ತಯಾರಿಸಿದ ಆಹಾರಗಳು, ಹೆಚ್ಚಿನ ಮತ್ತು ಸಂಸ್ಕರಿಸಿದ ಸಕ್ಕರೆ ಇರುವ ಆಹಾರಗಳು, ಸಂಸ್ಕರಿಸಿದ ಆಹಾರಗಳು, ಕೃತಕ ಸಿಹಿಕಾರಕಗಳನ್ನು ಹೊಂದಿರುವ ಆಹಾರಗಳು ಮತ್ತು ಹುರಿದ ಆಹಾರಗಳು.

Journal of Health, population and nutrition ಪ್ರಕಟಿಸಿರುವ ಅಧ್ಯಯನ ಬರಹದ ಪ್ರಕಾರ, ಪ್ರಾಥಮಿಕ ಶಾಲಾ ಮಕ್ಕಳ ಐಕ್ಯೂ ಸಾಮಾನ್ಯವಾಗಿ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿದೆ.

ಒಳ್ಳೆಯ ಆಹಾರ ಸೇವನೆ ಜೊತೆಗೆ ಉತ್ತಮ ನಿದ್ರೆ ಮತ್ತು ದೈಹಿಕ ಚಟುವಟಿಕೆಗಳೂ ಮುಖ್ಯವಾಗಿರುತ್ತವೆ ಎಂಬುದನ್ನು ಅಧ್ಯಯನಗಳು ಸಾಬೀತುಪಡಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News