Fact Check | ನಿಯಮಿತವಾಗಿ ಲವಂಗವನ್ನು ಜಗಿಯುವುದರಿಂದ ಬಾಯಿಯ ನೈರ್ಮಲ್ಯ ಹೆಚ್ಚುತ್ತದೆ ಎನ್ನುವುದು ಸುಳ್ಳು
ಹೊಸದಿಲ್ಲಿ: ನಿಯಮಿತವಾಗಿ ಲವಂಗವನ್ನು ಜಗಿಯುವುದರಿಂದ ಬಾಯಿಯ ನೈರ್ಮಲ್ಯ ಹೆಚ್ಚುತ್ತದೆ, ವಸಡಿನ ಉರಿಯೂತ ಮತ್ತು ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ ಮತ್ತು ವಿವಿಧ ರೀತಿಗಳ ಬ್ಯಾಕ್ಟೀರಿಯಾಗಳನ್ನು ಎದುರಿಸುತ್ತದೆ ಎಂದು ಪ್ರತಿಪಾದಿಸಿರುವ ಇನ್‌ಸ್ಟಾಗ್ರಾಂ ವೀಡಿಯೊವೊಂದು ವೈರಲ್ ಆಗಿದೆ. ಆದರೆ ಇದು ದಾರಿತಪ್ಪಿಸುವ ಹೇಳಿಕೆಯಾಗಿದೆ ಎನ್ನುವುದನ್ನು ಬಹಿರಂಗಗೊಳಿಸಿರುವ ಸತ್ಯಶೋಧಕ ಜಾಲತಾಣ newsmeter.in, ಲವಂಗವನ್ನು ಯಾವುದೇ ರೂಪದಲ್ಲಿ ಜಗಿಯುವುದು ತಾತ್ಕಾಲಿಕ ಪರಿಹಾರವನ್ನಷ್ಟೇ ಒದಗಿಸಬಹುದು ಎಂದು ಹೇಳಿದೆ.
ವಾಸ್ತವಾಂಶವೇನು?
ಹೈದರಾಬಾದ್‌ನ ಹಿರಿಯ ದಂತ ಶಸ್ತ್ರಚಿಕಿತ್ಸಕರಾದ ಡಾ.ಲತಾ ಪಿಎಂಎನ್‌ಎಸ್ ಅವರ ಪ್ರಕಾರ, ಲವಂಗವು ಹಿತವಾದ ಅನುಭವವನ್ನು ನೀಡುವುದರಿಂದ ಅದನ್ನು ತಾತ್ಕಾಲಿಕ ನೋವು ನಿವಾರಕವನ್ನಾಗಿ ಬಳಸಲಾಗುತ್ತದೆ ಮತ್ತು ಅದು ಬಾಯಿಯ ದುರ್ವಾಸನೆಯನ್ನು ತಗ್ಗಿಸಲೂ ನೆರವಾಗುತ್ತದೆ, ಆದರೆ ಅದು ಸರಿಯಾದ ಹಲ್ಲಿನ ಆರೈಕೆಗೆ ಪರ್ಯಾಯವಲ್ಲ ಮತ್ತು ದೀರ್ಘಾವಧಿಯ ಪರಿಹಾರವನ್ನು ನೀಡುವುದಿಲ್ಲ. ಲವಂಗದಲ್ಲಿ ಯುಜಿನಾಲ್ ಇರುವುದರಿಂದ ಅದು ಬ್ಯಾಕ್ಟೀರಿಯಾ, ಸೂಕ್ಷ್ಮಜೀವಿ, ಶಿಲೀಂಧ್ರ, ವೈರಸ್ ಮತ್ತು ಉರಿಯೂತ ವಿರೋಧಿ ಗುಣಗಳನ್ನು ಹೊಂದಿದೆ.
ಯುಜಿನಾಲ್ ಹಲವಾರು ಔಷಧೀಯ ಪ್ರಯೋಜನಗಳನ್ನು ಹೊಂದಿರುವ ಫೆನಾಲಿಕ್ ಆರೋಮ್ಯಾಟಿಕ್ ಸಂಯುಕ್ತವಾಗಿದೆ.
ಹಲವಾರು ಅಧ್ಯಯನಗಳ ಪ್ರಕಾರ, ಲವಂಗ ಬಾಯಿಯ ಆರೋಗ್ಯಕ್ಕೆ ಲಾಭದಾಯಕವಾಗಿದೆ. ಇದು ವಸಡುಗಳ ಮೇಲೆ ಹಿತವಾದ ಪರಿಣಾಮವನ್ನು ಬೀರುತ್ತದೆ ಮತ್ತು ತೆಂಗಿನೆಣ್ಣೆಯೊದಿಗೆ ಬಳಸಿದಾಗ ದುರ್ವಾಸನೆಯನ್ನು ತಗ್ಗಿಸಲು ನೆರವಾಗುತ್ತದೆ. ಈ ಮಿಶ್ರಣವನ್ನು ಆಯುರ್ವೇದ ಔಷಧಿಯಲ್ಲಿಯೂ ಬಳಸಲಾಗುತ್ತದೆ.
ದಂತಕುಳಿಗಳನ್ನು ತಡೆಯಲು,ಉರಿಯೂತವನ್ನು ತಗ್ಗಿಸಲು,ಜೊತೆಗೆ ಲವಂಗದಲ್ಲಿಯ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂದ್ರ ವಿರೋಧಿ ಗುಣಗಳಿಂದಾಗಿ ಅದನ್ನು ಬಳಸಲಾಗುತ್ತದೆ. ಲವಂಗದ ಹುಡಿಯನ್ನು ದಂತ ಆರೋಗ್ಯದ ವಿವಿಧ ಪ್ರಾಥಮಿಕ ಚಿಕಿತ್ಸೆಗಳಲ್ಲಿಯೂ ಬಳಸಲಾಗುತ್ತದೆ.
ರೂಟ್ ಕೆನಾಲ್ ಕಾರ್ಯವಿಧಾನಗಳಲ್ಲಿ ಯುಜಿನಾಲ್ ಬಳಕೆಯನ್ನು ವಿವರಿಸಿದ ಡಾ.ಲತಾ, ಈ ಸಂಯುಕ್ತವು ಔಷಧಿಯ ಮೂಲ ಘಟಕಾಂಶವಾಗಿದೆ. ಹಲ್ಲಿನ ಆರೈಕೆಯಲ್ಲಿ ಬಳಕೆಯಾಗುವ ಯುಜಿನಾಲ್ ಲವಂಗದ ಎಣ್ಣೆಯನ್ನು ಮುಖ್ಯ ಘಟಕಾಂಶವಾಗಿ ಒಳಗೊಂಡಿದೆ. ರೂಟ್ ಕೆನಾಲ್ ಚಿಕಿತ್ಸೆಗಳಲ್ಲಿ ಯುಜಿನಾಲ್‌ನ್ನು ತಾತ್ಕಾಲಿಕ ಫಿಲಿಂಗ್‌ಗಾಗಿ ಬಳಸಲಾಗುತ್ತದೆಯೇ ಹೊರತು ಕಾಯಂ ಫಿಲಿಂಗ್‌ಗಾಗಿ ಅಲ್ಲ. ಕಾಯಂ ಫಿಲಿಂಗ್‌ಗಾಗಿ ನಾವು ಗ್ಲಾಸ್ ಐನೊಮರ್ ಸಿಮೆಂಟ್(ಜಿಐಸಿ) ಬಳಸುತ್ತೇವೆ ಎಂದು ತಿಳಿಸಿದರು.
ದುರ್ಬಲ ಲವಂಗದ ಎಣ್ಣೆಯನ್ನು ನೋವು ನಿವಾರಣೆಗಾಗಿ ಕೆಲವು ಜಾಗಗಳಲ್ಲಿ ಬಳಸಬಹುದು,ಆದರೆ ಅತಿಯಾದ ಪ್ರಮಾಣವು ವಿಷಕಾರಿಯಾಗಬಹುದು. ರಕ್ತದಲ್ಲಿ ಕಡಿಮೆ ಸಕ್ಕರೆ,ನರಮಂಡಳದ ಸಮಸ್ಯೆಗಳು ಮತ್ತು ಉಸಿರಾಟದ ತೊಂದರೆಗಳು ಅತಿಯಾದ ಪ್ರಮಾಣದ ಲಕ್ಷಣಗಳಲ್ಲಿ ಸೇರಿವೆ.
ಈ ಲೇಖನವನ್ನು ಮೊದಲು newsmeter.in ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್ʼನ ಭಾಗವಾಗಿ ವಾರ್ತಾ ಭಾರತಿ ಅನುವಾದಿಸಿದೆ.