ದಿನಕ್ಕೆ ಕೇವಲ 30 ನಿಮಿಷಗಳ ನಡಿಗೆಯಿಂದ ನಿಮ್ಮ ಶರೀರಕ್ಕೆ ಸಿಗುವ ಆರೋಗ್ಯ ಲಾಭಗಳು ಗೊತ್ತೇ?

ಸಾಂದರ್ಭಿಕ ಚಿತ್ರ | PC : freepik.com
ಪ್ರತಿ ದಿನ 10,000 ಹೆಜ್ಜೆಗಳಷ್ಟು ಅಲ್ಲವಾದರೂ ನಡಿಗೆಯಿಂದ ಹಲವಾರು ಆರೋಗ್ಯ ಲಾಭಗಳಿವೆ. ಹಾಗಾದರೆ ದಿನಕ್ಕೆ 30 ನಿಮಿಷಗಳ ನಡಿಗೆಯು ನಿಮಗೆ ಹೇಗೆ ಲಾಭ ನೀಡುತ್ತದೆ? ನಿಮ್ಮ ಶರೀರದಲ್ಲಿ ಸಂಭವಿಸಬಹುದಾದ ಬದಲಾವಣೆಗಳು ಏನು? ಇದಕ್ಕೆ ತಜ್ಞರ ಉತ್ತರಗಳಿಲ್ಲಿವೆ...
30 ನಿಮಿಷಗಳ ನಡಿಗೆಯು ಹಲವಾರು ಆರೋಗ್ಯಸಂಬಂಧಿ ಲಾಭಗಳೊಂದಿಗೆ ಗುರುತಿಸಿಕೊಂಡಿದೆ ಎಂದು ಹೇಳಿದ ಹೈದರಾಬಾದ್‌ನ ಅಪೋಲೊ ಆಸ್ಪತ್ರೆಯ ನರಶಾಸ್ತ್ರಜ್ಞ ಡಾ.ಸುಧೀರ ಕುಮಾರ ಅವರು,ಇವುಗಳಲ್ಲಿ ಅಧಿಕ ತೂಕ, ಬೊಜ್ಜು, ಟೈಪ್ 2 ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್ ಮತ್ತು ಅಕಾಲಿಕ ಸಾವುಗಳ ಅಪಾಯ ಕಡಿಮೆಯಾಗುವುದು ಸೇರಿದೆ ಎಂದರು.
ನಡಿಗೆಯು ಮೂಳೆಗಳು ಮತ್ತು ಸ್ನಾಯುಗಳ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಅದು ಒಸ್ಟಿಯೊಪೊರೊಸಿಸ್(ಅಸ್ಥಿರಂಧ್ರತೆ),ಸಾರ್ಕೊಪಿನಿಯಾ(ಸ್ನಾಯು ದ್ರವ್ಯರಾಶಿಯ ನಷ್ಟ) ಮತ್ತು ಡೈನಾಪಿನಿಯಾ(ಸ್ನಾಯು ದೌರ್ಬಲ್ಯ)ಗಳ ಅಪಾಯವನ್ನು ತಗ್ಗಿಸುತ್ತದೆ. ನಡಿಗೆಯು ಮಾನಸಿಕ ಮತ್ತು ಮಿದುಳಿನ ಆರೋಗ್ಯವನ್ನೂ ಹೆಚ್ಚಿಸುತ್ತದೆ ಮತ್ತು ಅರಿವಿನ ಕುಸಿತ,ಬುದ್ಧಿಮಾಂದ್ಯತೆ,ಖಿನ್ನತೆ ಹಾಗೂ ಆತಂಕದ ಅಪಾಯಗಳನ್ನೂ ಕಡಿಮೆ ಮಾಡುತ್ತದೆ. ನಡಿಗೆಯು ಉತ್ತಮ ನಿದ್ರೆಯನ್ನೂ ನೀಡುತ್ತದೆ ಎಂದು ಡಾ.ಕುಮಾರ ತಿಳಿಸಿದರು.
ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ ದಿಲ್ಲಿಯ ಸಿಕೆ ಬಿರ್ಲಾ ಆಸ್ಪತ್ರೆಯ ಫಿಜಿಯೋಥೆರಪಿ ವಿಭಾಗದ ಮುಖ್ಯಸ್ಥ ಡಾ.ಸುರೇಂದರ್ ಪಾಲ್ ಸಿಂಗ್ ಅವರು,ದಿನಕ್ಕೆ 30 ನಿಮಿಷಗಳ ಕಾಲ ನಡೆಯುವುದು ತೂಕ ನಷ್ಟ ಮತ್ತು ಹೃದಯನಾಳಗಳ ಆರೋಗ್ಯಕ್ಕೆ ಖಂಡಿತವಾಗಿಯೂ ಲಾಭದಾಯಕವಾಗಿದೆ ಎಂದು ಹೇಳಿದರು.
ಸರಿಯಾದ ನಡಿಗೆ ಹೇಗೆ?
ನಡಿಗೆಯಲ್ಲಿ ವೇಗವು ಪರಿಗಣಿಸಬೇಕಾದ ಅತ್ಯಂತ ಮುಖ್ಯ ಅಂಶಗಳಲ್ಲಿ ಒಂದಾಗಿದೆ ಎಂದು ಒತ್ತಿ ಹೇಳಿದ ಡಾ.ಸಿಂಗ್,ನಿಧಾನಗತಿಯಲ್ಲಿ ನಡೆಯುವುದು ಅಷ್ಟೇನೂ ಪರಿಣಾಮಕಾರಿಯಾಗಿರುವುದಿಲ್ಲ. ನಡಿಗೆಯ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಲು ಕ್ರಮೇಣ ವೇಗವನ್ನು ಹೆಚ್ಚಿಸುವುದು ಮುಖ್ಯ,ಏಕೆಂದರೆ ವೇಗದ ನಡಿಗೆಯು ಹೆಚ್ಚು ಕೊಬ್ಬನ್ನು ಕರಗಿಸಲು ಮತ್ತು ಶರೀರದ ಚಯಾಪಚಯವನ್ನು ಹೆಚ್ಚಿಸಲು ನೆರವಾಗುತ್ತದೆ. ತನ್ಮೂಲಕ ಹೃದಯ ಮತ್ತು ಉಸಿರಾಟ ವ್ಯವಸ್ಥೆಯ ಆರೋಗ್ಯವೂ ಉತ್ತಮಗೊಳ್ಳುತ್ತದೆ ಎಂದರು.
30 ನಿಮಿಷಗಳ ನಡಿಗೆಯನ್ನು ಒಂದೇ ಹಂತದಲ್ಲಿ ಮಾಡಬೇಕು. ಐದು,ಹತ್ತು ನಿಮಿಷಗಳ ವಿರಾಮಗಳೊಂದಿಗೆ ನಡಿಗೆಯು ಹೆಚ್ಚಿನ ಪ್ರಯೊಜನಗಳನ್ನು ನೀಡುವುದಿಲ್ಲ ಎಂದ ಡಾ.ಸಿಂಗ್,
ಉತ್ತಮ ಫಲಿತಾಂಶಗಳಿಗಾಗಿ ನಿರಂತರವಾಗಿ 20ರಿಂದ 30 ನಿಮಿಷ ನಡೆಯುವ ಗುರಿಯನ್ನಿಟ್ಟುಕೊಳ್ಳಿ,ಕ್ರಮೇಣ ನಡಿಗೆಯ ವೇಗವನ್ನು ಹೆಚ್ಚಿಸಿ. ಇದರಿಂದ ಅದು ಹೃದಯ ರಕ್ತನಾಳಗಳ ಆರೋಗ್ಯ,ಸ್ನಾಯು ಮತ್ತು ಮೂಳೆಗಳ ದೃಢತೆ ಅಥವಾ ಕೊಬ್ಬು ಕರಗಿಸುವಿಕೆಯಾಗಿರಲಿ,ಶರೀರದ ಒಟ್ಟಾರೆ ಕಾರ್ಯ ನಿರ್ವಹಣೆಯು ಹೆಚ್ಚುತ್ತದೆ. ಕ್ರಮೇಣ ನಡಿಗೆಯ ವೇಗವನ್ನು ಹೆಚ್ಚಿಸುವುದರಿಂದ ಈ ಆರೋಗ್ಯಲಾಭಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತವೆ ಎಂದು ಹೇಳಿದರು.
ಕೃಪೆ: indianexpress.com