ಎಡಿಎಚ್‌ಡಿಯಿಂದ ಬಳಲುತ್ತಿರುವ ಫಹದ್ ಫಾಝಿಲ್: ಏನಿದು ಕಾಯಿಲೆ? ಇಲ್ಲಿದೆ ಮಾಹಿತಿ

Update: 2024-06-01 07:13 GMT

ಫಹದ್ ಫಾಝಿಲ್  | PC: X 

ಖ್ಯಾತ ಮಲಯಾಳಂ ನಟ ಫಹದ್ ಫಾಝಿಲ್ ಅವರು ತಾನು ತನ್ನ 41ನೇ ವಯಸ್ಸಿನಲ್ಲಿ ಅಟೆನ್ಶನ್ ಡಿಫಿಸಿಟ್ ಹೈಪರ್‌ಆ್ಯಕ್ಟಿವಿಟಿ ಡಿಸಾರ್ಡರ್ ಅಥವಾ ಏಕಾಗ್ರತೆ ಕೊರತೆ ಮತ್ತು ಅತಿಯಾದ ಚಟುವಟಿಕೆ ಕಾಯಿಲೆ(ಎಡಿಎಚ್‌ಡಿ)ಯಿಂದ ಬಳಲುತ್ತಿದ್ದೇನೆ ಎಂದು ಬಹಿರಂಗಗೊಳಿಸಿದ್ದಾರೆ.

ಇತ್ತೀಚಿಗೆ ಶಾಲೆಯೊಂದಕ್ಕೆ ಭೇಟಿ ನೀಡಿದ್ದ ಫಾಸಿಲ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತ, ‘ನಾನು ಎಡಿಎಚ್‌ಡಿಯಿಂದ ಬಳಲುತ್ತಿದ್ದೇನೆ ಎನ್ನುವುದು ವೈದ್ಯಕೀಯ ತಪಾಸಣೆಯಲ್ಲಿ ಖಚಿತ ಪಟ್ಟಿದೆ. ಬಾಲ್ಯದಲ್ಲಿಯೇ ಈ ಕಾಯಿಲೆ ಪತ್ತೆಯಾದರೆ ಅದನ್ನು ಸುಲಭವಾಗಿ ಗುಣಪಡಿಸಬಹುದು ಎಂದು ವೈದ್ಯರು ನನಗೆ ತಿಳಿಸಿದ್ದಾರೆ. ಅದೇನೂ ದೊಡ್ಡ ಕಾಯಿಲೆಯಲ್ಲದಿದ್ದರೂ, ನನ್ನಲ್ಲಿ ಕಾಯಿಲೆಯ ಕೆಲವು ಲಕ್ಷಣಗಳಿವೆ ’ ಎಂದು ತಿಳಿಸಿದರು.

ಎಡಿಎಚ್‌ಡಿ ಸಾಮಾನ್ಯವಾಗಿ ಮಕ್ಕಳಿಗೆ ಸಂಬಂಧಿಸಿದ್ದರೂ ರೋಗನಿರ್ಣಯ ಮಾಡದಿದ್ದರೆ ಅದು ಪ್ರೌಢಾವಸ್ಥೆಯಲ್ಲಿಯೂ ಮುಂದುವರಿಯುತ್ತದೆ.

ಏನಿದು ಎಡಿಎಚ್‌ಡಿ?:

ಇದು ಜನರ ವರ್ತನೆ ಮತ್ತು ಸಾಮಾಜಿಕ ಸಂವಹನದ ಮೇಲೆ ಪರಿಣಾಮ ಬೀರುವ ನರವೈವಿಧ್ಯ ಸ್ಥಿತಿಯಾಗಿದೆ. ಅವರು ಅಶಾಂತರಾಗಿರುವಂತೆ ಕಂಡು ಬರುತ್ತದೆ, ಗಮನವನ್ನು ಕೇಂದ್ರೀಕರಿಸುವಲ್ಲಿ ತೊಂದರೆಯನ್ನು ಎದುರಿಸುತ್ತಿರಬಹುದು ಮತ್ತು ಪ್ರಚೋದನೆಯ ಮೇಲೆ ಕಾರ್ಯ ನಿರ್ವಹಿಸಬಹುದು. ಹೆಚ್ಚಿನ ಪ್ರಕರಣಗಳಲ್ಲಿ ಮಕ್ಕಳಲ್ಲಿ 12 ವರ್ಷಕ್ಕಿಂತ ಕಡಿಮೆ ಪ್ರಾಯದಲ್ಲಿದ್ದಾಗ ಕಾಯಿಲೆಯು ಪತ್ತೆಯಾಗುತ್ತದೆ,ಆದರೆ ಕೆಲವೊಮ್ಮೆ ರೋಗಲಕ್ಷಣಗಳು ಸ್ಪಷ್ಟವಾಗಿರುವುದಿಲ್ಲ ಮತ್ತು ನಂತರ ಪ್ರೌಢಾವಸ್ಥೆಯಲ್ಲಿ ಕಾಯಿಲೆ ಇರುವುದು ಪತ್ತೆಯಾಗುತ್ತದೆ.

ಎಡಿಎಚ್‌ಡಿಗೆ ಕಾರಣ ಗೊತ್ತಾಗಿಲ್ಲ, ಆದರೆ ಅದು ಆನುವಂಶಿಕವಾಗಿರಬಹುದು. ಅವಧಿಪೂರ್ವ ಜನಿಸಿದ ಆಥವಾ ತಾಯಂದಿರು ಗರ್ಭಾವಸ್ಥೆಯಲ್ಲಿ ಧೂಮ್ರಪಾನ ಅಥವಾ ಮದ್ಯಪಾನ ಮಾಡಿದ್ದರೆ ಅಂತಹ ಮಕ್ಕಳನ್ನು ಈ ಕಾಯಿಲೆಯು ಕಾಡುತ್ತದೆ. ಕೆಲವು ರೋಗಿಗಳಲ್ಲಿ ಮಿದುಳಿನ ಕೆಲವು ಪ್ರದೇಶಗಳು ಚಿಕ್ಕದಾಗಿರಬಹುದು ಮತ್ತು ಇತರ ಪ್ರದೇಶಗಳು ದೊಡ್ಡದಾಗಿರಬಹುದು ಎನ್ನುವುದನ್ನು ಸಂಶೋಧನೆಯು ತೋರಿಸಿದೆ.

ವಯಸ್ಕರಲ್ಲಿ ಎಡಿಎಚ್‌ಡಿ ಒಂದು ಸಂಕೀರ್ಣ ಮತ್ತು ಸಾಮಾನ್ಯವಾಗಿ ತಪ್ಪಾಗಿ ಅರ್ಥೈಸಲಾದ ಸ್ಥಿತಿಯಾಗಿದ್ದು,ಇದು ವೃತ್ತಿಪರ ಕಾರ್ಯಕ್ಷಮತೆ,ವೈಯಕ್ತಿಕ ಸಂಬಂಧಗಳು ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುವುದರಿಂದ ರೋಗನಿರ್ಣಯ ಮತ್ತು ನಿರ್ವಹಣೆಗೆ ಸೂಕ್ಷ ವಿಧಾನವು ಅಗತ್ಯವಾಗುತ್ತದೆ.

ವಯಸ್ಕರಲ್ಲಿ ಎಡಿಎಚ್‌ಡಿ ಲಕ್ಷಣಗಳು:

ವಯಸ್ಕರಲ್ಲಿ ಲಕ್ಷಣಗಳು ಮಕ್ಕಳಿಗಿಂತ ಭಿನ್ನವಾಗಿರುತ್ತವೆ ಮತ್ತು ಏಕಾಗ್ರತೆಯನ್ನು ಕಾಯ್ದುಕೊಳ್ಳುವಲ್ಲಿ ತೊಂದರೆ, ಮರೆಗುಳಿತನ, ಕಳಪೆ ಸಾಂಸ್ಥಿಕ ಕೌಶಲ್ಯಗಳು, ಹಠಾತ್ ಕೆರಳುವಿಕೆ ಮತ್ತು ಕೆಲಸಗಳನ್ನು ಮಾಡುವಾಗ ಕಷ್ಟವೆನಿಸುವುದು ಈ ಲಕ್ಷಣಗಳಲ್ಲಿ ಒಳಗೊಂಡಿವೆ. ಮಕ್ಕಳಿಗಿಂತ ಭಿನ್ನವಾಗಿ ವಯಸ್ಕರಲ್ಲಿ ಅತಿಕ್ರಿಯಾಶೀಲತೆಯಲ್ಲಿ ದೈಹಿಕ ಅತಿ ಚಟುವಟಿಕೆಗಳಿಗಿಂತ ಹೆಚ್ಚಾಗಿ ಚಡಪಡಿಕೆ ಇರುತ್ತದೆ ಮತ್ತು ವಿಶ್ರಾಂತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ವೃತ್ತಿಪರವಾಗಿ ಜನರಿಗೆ ನಿಗದಿತ ಗಡುವಿನೊಳಗೆ ನಿರ್ದಿಷ್ಟ ಕೆಲಸವನ್ನು ಮುಗಿಸಲು, ಹಲವಾರು ಕೆಲಸಗಳನ್ನು ಮಾಡಲು ಕಷ್ಟವಾಗಬಹುದು, ಸುದೀರ್ಘ ಸಭೆಗಳಲ್ಲಿ ಅಥವಾ ಮಾಡುತ್ತಿರುವ ಕೆಲಸದಲ್ಲಿ ಏಕಾಗ್ರತೆಯನ್ನು ಕಾಯ್ದುಕೊಳ್ಳಲು ತೊಂದರೆಯಾಗಬಹುದು. ಇದು ಹೆಚ್ಚಿನ ಸಾಮರ್ಥ್ಯದ ಹೊರತಾಗಿಯೂ ಕಳಪೆ ಸಾಧನೆ, ಉದ್ಯೋಗ ಅಸ್ಥಿರತೆ ಮತ್ತು ಹತಾಶೆಗೆ ಕಾರಣವಾಗಬಹುದು. ವೈಯಕ್ತಿವಾಗಿ ರೋಗಲಕ್ಷಣಗಳು ಮರೆಗುಳಿತನ, ಅಜಾಗರೂಕತೆ ಮತ್ತು ಹಠಾತ್ ನಿರ್ಧಾರಗಳಿಂದಾಗಿ ಸಂಬಂಧಗಳನ್ನು ಹದಗೆಡಿಸಬಹುದು.

ವಯಸ್ಕರಲ್ಲಿ ರೊಗನಿರ್ಣಯ ಏಕೆ ಕಷ್ಟ?:

ವಯಸ್ಕರಲ್ಲಿ ರೋಗಲಕ್ಷಣಗಳು ಬೈಪೋಲಾರ್ ಡಿಸಾರ್ಡರ್, ಖಿನ್ನತೆ, ಆತಂಕ ಪ್ರವೃತ್ತಿ ಮತ್ತು ಮಾದಕ ದ್ರವ್ಯ ಸೇವನೆಯ ಲಕ್ಷಣಗಳಂತಹ ಇತರ ಮಾನಸಿಕ ಆರೋಗ್ಯ ಅಸ್ವಸ್ಥತೆಗಳ ಲಕ್ಷಣಗಳನ್ನು ಅತಿಕ್ರಮಿಸುವುದರಿಂದ ರೋಗನಿರ್ಣಯವು ಸವಾಲಿನದಾಗಬಹುದು.

ಎಡಿಎಚ್‌ಡಿಯನ್ನು ನಿರ್ವಹಿಸುವುದು ಹೇಗೆ?:

ಇದು ಔಷಧಿ, ಮಾನಸಿಕ ಚಿಕಿತ್ಸೆ ಮತ್ತು ಜೀವನಶೈಲಿ ಹೊಂದಾಣಿಕೆಗಳ ಸಂಯೋಜನೆಯನ್ನು ಒಳಗೊಂಡಿರುತ್ತದೆ.

ಉತ್ತೇಜಕ(ಉದಾ:ಮಿಥೈಲ್‌ಫೆನಿಡೇಟ್) ಮತ್ತು ಅನುತ್ತೇಜಕ (ಉದಾ:ಆಟೊಮೊಕ್ಸಿಟಿನ್)ಗಳಂತಹ ಔಷಧಿಗಳು ಏಕಾಗ್ರತೆ ಮತ್ತು ವರ್ತನೆಯನ್ನು ನಿಯಂತ್ರಿಸಲು ನೆರವಾಗುತ್ತವೆ,ಆದರೆ ಇವುಗಳನ್ನು ವೈದ್ಯರ ಶಿಫಾರಸಿನ ಮೇರೆಗೆ ಮಾತ್ರ ತೆಗೆದುಕೊಳ್ಳಬೇಕು.

ಕಾಗ್ನಿಟಿವ್ ಬಿಹೇವರಿಯಲ್ ಥೆರಪಿ (ಸಿಬಿಟಿ) ರೂಪದಲ್ಲಿ ಮಾನಸಿಕ ಸಮಾಲೋಚನೆಗಳು ರೋಗಿಗಳು ಯಾವುದನ್ನೂ ತೂಗಿಸಿಕೊಂಡು ಹೋಗುವ ಕಾರ್ಯತಂತ್ರಗಳನ್ನು ಬೆಳೆಸಿಕೊಳ್ಳಲು,ಸಾಂಸ್ಥಿಕ ಕೌಶಲ್ಯಗಳನ್ನು ಸುಧಾರಿಸಿಕೊಳ್ಳಲು,ನಕಾರಾತ್ಮಕ ಚಿಂತನೆಗಳನ್ನು ತೊಲಗಿಸಲು ನೆರವಾಗುತ್ತವೆ ಮತ್ತು ದೈನಂದಿನ ಕೆಲಸಗಳು ಹಾಗೂ ಜವಾಬ್ದಾರಿಗಳನ್ನು ನಿರ್ವಹಿಸಲು ಪ್ರಾಯೋಗಿಕ ನೆರವನ್ನು ನೀಡುತ್ತವೆ.

ಜೀವನಶೈಲಿ ಬದಲಾವಣೆಗಳೂ ಪ್ರಮುಖ ಪಾತ್ರವನ್ನು ಹೊಂದಿವೆ. ನಿಯಮಿತ ವ್ಯಾಯಾಮ,ಆರೋಗ್ಯಕರ ಆಹಾರ,ಸಾಕಷ್ಟು ನಿದ್ರೆ (ದಿನಕ್ಕೆ ಏಳರಿಂದ ಒಂಭತ್ತು ಗಂಟೆ),ಮನಸ್ಸನ್ನು ಶಾಂತವಾಗಿರಿಸುವ ಧ್ಯಾನ,ಉಸಿರಾಟ ವ್ಯಾಯಾಮ,ಯೋಗ ಇತ್ಯಾದಿ ಚಟುವಟಿಕೆಗಳು ರೋಗಲಕ್ಷಣಗಳನ್ನು ಗಮನಾರ್ಹವಾಗಿ ತಗ್ಗಿಸುತ್ತವೆ. ರೋಗಿಯು ಸುಗಮ ಕಾರ್ಯನಿರ್ವಹಣೆಗಾಗಿ ವಿನ್ಯಾಸಗೊಳಿಸಲಾಗಿರುವ ಯೋಜಕಗಳು,ಜ್ಞಾಪನೆಗಳು ಮತ್ತು ಆ್ಯಪ್‌ಗಳಂತಹ ಸಾಧನಗಳನ್ನು ಬಳಸಬಹುದು.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News