ದೀರ್ಘಾವಧಿಯ ವಿದ್ಯುತ್ ಒಪ್ಪಂದಕ್ಕೆ ಭಾರತ-ನೇಪಾಳ ಸಹಿ
ಕಠ್ಮಂಡು: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ನೇಪಾಳಕ್ಕೆ ನೀಡಿರುವ ಭೇಟಿಯ ಸಂದರ್ಭ ಭಾರತ ಮತ್ತು ನೇಪಾಳಗಳ ನಡುವೆ ಹಲವು ಪ್ರಮುಖ ಒಪ್ಪಂದಗಳಿಗೆ ಗುರುವಾರ ಸಹಿ ಹಾಕಲಾಗಿದೆ.
ನೇಪಾಳ ವಿದೇಶಾಂಗ ಸಚಿವ ನಾರಾಯಣ ಪ್ರಕಾಶ್ ಸೌದ್ ಜತೆ ನಡೆಸಿದ ಸಮಗ್ರ ಮತ್ತು ಫಲಪ್ರದ ಸಭೆಯಲ್ಲಿ ದ್ವಿಪಕ್ಷೀಯ ಸಂಬಂಧ, ವ್ಯಾಪಾರ ಮತ್ತು ಆರ್ಥಿಕ ಸಂಬಂಧ, ರಸ್ತೆ, ರೈಲು ಮತ್ತು ವಾಯು ಸಂಪರ್ಕ, ಭದ್ರತೆ ಮತ್ತು ರಕ್ಷಣಾ ಸಹಕಾರ, ಕೃಷಿ, ವಿದ್ಯುತ್, ಇಂಧನ, ಶಕ್ತಿ, ಜಲ ಸಂಪನ್ಮೂಲ, ವಿಪತ್ತು ನಿರ್ವಹಣೆ, ಪ್ರವಾಸೋದ್ಯಮ, ನಾಗರಿಕ ವಿಮಾನಯಾನ, ಜನರಿಂದ ಜನರಿಗೆ ಮತ್ತು ಸಾಂಸ್ಕೃತಿಕ ವಿನಿಮಯ, ಅಭಿವೃದ್ಧಿ ಪಾಲುದಾರಿಕೆ ಬಗ್ಗೆ ಚರ್ಚೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಗುರುವಾರ ನೇಪಾಳಕ್ಕೆ ಆಗಮಿಸಿದ ಜೈಶಂಕರ್, 7ನೇ ಭಾರತ-ನೇಪಾಳ ಜಂಟಿ ಆಯೋಗದ ಸಭೆಯಲ್ಲಿ ನೇಪಾಳ ವಿದೇಶಾಂಗ ಸಚಿವರ ಜತೆ ಪಾಲ್ಗೊಂಡಿದ್ದರು.
ಮುಂದಿನ 10 ವರ್ಷಗಳಲ್ಲಿ ನೇಪಾಳದಿಂದ ಭಾರತಕ್ಕೆ 10,000 ಮೆಗಾವ್ಯಾಟ್ ವಿದ್ಯುತ್ ರಫ್ತು ಮಾಡುವುದಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ನೇಪಾಳದಲ್ಲಿ ಹಲವು ಜಲವಿದ್ಯುತ್ ಯೋಜನೆಗಳ ಅಭಿವೃದ್ಧಿಗೆ ಭಾರತ ನೆರವಾಗಿದ್ದು ಇನ್ನೂ ಕೆಲವು ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಸಮುದಾಯ ಅಭಿವೃದ್ಧಿ ಯೋಜನೆಗಳು, ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಯೋಜನೆ ಸಹಿತ ವಿವಿಧ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ನೇಪಾಳದಲ್ಲಿ ಕಳೆದ ವರ್ಷ ಸಂಭವಿಸಿದ್ದ ಭೂಕಂಪದ ಪರಿಹಾರ ಕಾರ್ಯಕ್ಕೆ ಭಾರತ ಘೋಷಿಸಿದ ನೆರವು ಉಪಕ್ರಮದ 5ನೇ ಕಂತನ್ನು ನೇಪಾಳಕ್ಕೆ ಭಾರತದ ನಿಯೋಗ ಹಸ್ತಾಂತರಿಸಿತು. ಮೂರು ಗಡಿಯಾಚೆಗಿನ ಪ್ರಸರಣ ಮಾರ್ಗಗಳನ್ನು ಎರಡೂ ಕಡೆಯವರು ಜಂಟಿಯಾಗಿ ಉದ್ಘಾಟಿಸಿದರು ಎಂದು ವರದಿ ಹೇಳಿದೆ.