ಹಿಜ್ಬುಲ್ಲಾ ವಿರುದ್ಧ ಸೀಮಿತ ಭೂ ಕಾರ್ಯಾಚಾರಣೆ : ಅಮೆರಿಕಕ್ಕೆ ಇಸ್ರೇಲ್ ಮಾಹಿತಿ
ವಾಶಿಂಗ್ಟನ್ : ತನ್ನ ಗಡಿಗೆ ಹೊಂದಿಕೊಂಡಿರುವ ಲೆಬನಾನ್‍ನಲ್ಲಿ ಹಿಜ್ಬುಲ್ಲಾ ಮೂಲಸೌಕರ್ಯವನ್ನು ಗುರಿ ಮಾಡಿ ಸೀಮಿತ ಭೂ ಕಾರ್ಯಾಚರಣೆ ನಡೆಸುವುದಾಗಿ ಇಸ್ರೇಲ್, ಅಮೆರಿಕಕ್ಕೆ ಮಾಹಿತಿ ನೀಡಿದೆ ಎಂದು ರಕ್ಷಣಾ ಇಲಾಖೆ ಸೋಮವಾರ ಬಹಿರಂಗಪಡಿಸಿದೆ.
"ಹಿಜ್ಬುಲ್ಲಾ ನೆಲೆಗಳನ್ನು ಗುರಿ ಮಾಡಿ ಗಡಿಯ ಬಳಿ ನಡೆಸುತ್ತಿರುವ ಕಾರ್ಯಾಚರಣೆ ಸೀಮಿತ ಎಂದು ಅವರು ಮಾಹಿತಿ ನೀಡಿದ್ದಾರೆ" ಎಂದು ರಕ್ಷಣಾ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್ ಸುದ್ದಿಗಾರರಿಗೆ ತಿಳಿಸಿದರು.
“ಇದು ಸೀಮಿತ ಭೂ ಕಾರ್ಯಾಚಣೆಯೇ" ಎಂದು ಕೇಳಿದ ಪ್ರಶ್ನೆಗೆ, "ಇದು ನಮ್ಮ ತಿಳಿವಳಿಕೆ" ಎಂದು ಉತ್ತರಿಸಿದರು. ಲೆಬನಾನ್‍ಗೆ ಭೂಸೇನಾ ಪಡೆಯನ್ನು ಕಳುಹಿಸುವ ಸೂಚನೆಗಳು ಇಸ್ರೇಲ್ ಚಟುವಟಿಕೆಗಳಿಂದ ಕಂಡುಬರುತ್ತಿದ್ದು, ಎರಡು ವಾರಗಳಿಂದ ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯ ವಿರುದ್ಧ ನಡೆಸುತ್ತಿರುವ ದಾಳಿಯಲ್ಲಿ ಈಗಾಗಲೇ ಇದರ ಮುಖಂಡ ಸಯ್ಯದ್ ಹಸನ್ ನಸ್ರುಲ್ಲಾ ಹತ್ಯೆಗೀಡಾಗಿದ್ದಾರೆ.
ರಾಯ್ಟರ್ಸ್ ಜತೆ ಮಾತನಾಡಿದ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು, ಇಸ್ರೇಲ್ ಪಡೆಯ ಸ್ಥಾನ ನಿಯೋಜನೆಯನ್ನು ನೋಡಿದರೆ, ಅದು ಭೂದಾಳಿ ಅನಿವಾರ್ಯ ಎನ್ನುವುದನ್ನು ಸೂಚಿಸುತ್ತದೆ ಎಂದು ವಿಶ್ಲೇಷಿಸಿದ್ದಾರೆ. ಎರಡು ವಾರಗಳ ತೀವ್ರ ವಾಯುದಾಳಿ ಮತ್ತು ಹಿಜ್ಬುಲ್ಲಾ ಕಮಾಂಡರ್ ಗಳ ಹತ್ಯೆ ಬಳಿಕ, ಭೂದಾಳಿಯ ಸಾಧ್ಯತೆ ನಿಶ್ಚಿತ ಎನ್ನುವ ಸಂಕೇತವನ್ನು ಇಸ್ರೇಲ್ ರವಾನಿಸಿದೆ.