ಕದನ ವಿರಾಮ ಘೋಷಿಸಿದ ಬೆನ್ನಿಗೇ ಇಸ್ರೇಲ್ನಿಂದ ಗಾಝಾ ಮೇಲಿನ ವೈಮಾನಿಕ ದಾಳಿ ತೀವ್ರ
ಜೆರುಸಲೇಂ: ಕದನ ವಿರಾಮ ಹಾಗೂ ಒತ್ತೆಯಾಳುಗಳ ಬಿಡುಗಡೆ ಒಪ್ಪಂದ ಘೋಷಣೆಯಾದ ಬೆನ್ನಿಗೇ ಗಾಝಾ ಮೇಲಿನ ವೈಮಾನಿಕ ದಾಳಿಯನ್ನು ಇಸ್ರೇಲ್ ತೀವ್ರಗೊಳಿಸಿದೆ ಎಂದು ಫೆಲೆಸ್ತೀನ್ ಎನ್ಕ್ಲೇವ್ ನ ಪ್ರಾಧಿಕಾರಗಳು ಹೇಳಿದ್ದು, ರವಿವಾರದಿಂದ ಜಾರಿಗೆ ಬರಲಿರುವ ಒಪ್ಪಂದಕ್ಕೂ ಮುನ್ನ ಯುದ್ಧವನ್ನು ನಿಲ್ಲಿಸುವಂತೆ ಮಧ್ಯವರ್ತಿಗಳು ಮನವಿ ಮಾಡಿದ್ದಾರೆ.
ಖತರ್, ಈಜಿಪ್ಟ್ ಹಾಗೂ ಅಮೆರಿಕ ನಡೆಸಿದ ತಿಂಗಳಾನುಗಟ್ಟಲೆ ಮಧ್ಯಸ್ಥಿಕೆಯ ನಂತರ ಹಾಗೂ ಕಳೆದ 15 ತಿಂಗಳಿನಿಂದ ಮಧ್ಯಪ್ರಾಚ್ಯ ಪ್ರದೇಶವನ್ನು ಬೆಂಕಿಯ ಕುಲುಮೆಯಾಗಿಸಿರುವ ಹಮಾಸ್ ಹಾಗೂ ಇಸ್ರೇಲ್ ನಡುವಿನ ಯುದ್ಧದ ನಂತರ, ಬುಧವಾರ ಇಸ್ರೇಲ್ ಹಾಗೂ ಗಾಝಾವನ್ನು ನಿಯಂತ್ರಿಸುತ್ತಿರುವ ಹಮಾಸ್ ನಡುವೆ ಸಂಕೀರ್ಣ ಕದನ ವಿರಾಮ ಒಪ್ಪಂದವೇರ್ಪಟ್ಟಿತ್ತು.
ಈ ಒಪ್ಪಂದದನ್ವಯ, ಮೊದಲ ಆರು ವಾರ ಕದನ ವಿರಾಮ ಘೋಷಿಸಿ, ನಂತರ ಸಾವಿರಾರು ಮಂದಿ ಹತ್ಯೆಗೊಳಗಾಗಿರುವ ಗಾಝಾದಿಂದ ಇಸ್ರೇಲ್ ಸೇನಾಪಡೆಗಳು ಹಂತಹಂತವಾಗಿ ಹಿಂದಕ್ಕೆ ಸರಿಯಬೇಕಿವೆ. ಇಸ್ರೇಲ್ ಫೆಲೆಸ್ತೀನ್ ಕೈದಿಗಳನ್ನು ಬಿಡುಗಡೆಗೊಳಿಸುವ ಬದಲಾಗಿ ತನ್ನ ಬಳಿ ಇರುವ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಬೇಕಿದೆ.
ದೋಹಾದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ಖತರ್ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲಿ ಥಾನಿ, ರವಿವಾರದಿಂದ ಕದನ ವಿರಾಮ ಜಾರಿಗೆ ಬರಲಿದೆ ಎಂದು ಹೇಳಿದ್ದರು. ಈ ಒಪ್ಪಂದವನ್ನು ಜಾರಿಗೆ ತರಲು ಮಧ್ಯಸ್ಥಿಕೆದಾರರು ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಕೆಲಸ ಮಾಡುತ್ತಿದ್ದಾರೆ ಎಂದೂ ಅವರು ತಿಳಿಸಿದ್ದರು.